ನಗರಸಭೆ ಚುನಾವಣೆ: ಗರಿಗೆದರಿದ ರಾಜಕೀಯ, ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆ

7

ನಗರಸಭೆ ಚುನಾವಣೆ: ಗರಿಗೆದರಿದ ರಾಜಕೀಯ, ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆ

Published:
Updated:
Deccan Herald

ಚಾಮರಾಜನಗರ: ರಾಜ್ಯ ಚುನಾವಣಾ ಆಯೋಗವು ಗುರುವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಸ್ಥಳೀಯ ರಾಜಕಾರಣ ಚುರುಕು‌ಗೊಂಡಿದೆ.

ಈ ತಿಂಗಳ 29ರಂದು  208 ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಸಭೆಗಳೂ ಸೇರಿವೆ. ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಚುನಾವಣೆ ಇದಾಗಿರುವುದರಿಂದ ಎಲ್ಲ ಪಕ್ಷಗಳು ಇದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿವೆ.

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಈ ಎರಡೂ ನಗರಸಭೆಗಳೂ ಕಾಂಗ್ರೆಸ್‌ (ಚಾಮರಾಜನಗರದಲ್ಲಿ ಮೈತ್ರಿ ಆಡಳಿತವಿದೆ) ವಶದಲ್ಲಿದೆ. ವಿಧಾನಸಭೆಯ ಚುನಾವಣೆಯ ನಂತರ ಜಿಲ್ಲೆಯ ರಾಜಕೀಯ ಚಿತ್ರಣ ಸ್ವಲ್ಪ ಬದಲಾಗಿದೆ. ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ದಕ್ಕಿದ್ದು ಎರಡು ಮಾತ್ರ. ಅದರಲ್ಲೂ ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಅಭ್ಯರ್ಥಿ ಎನ್‌.ಮಹೇಶ್‌ ಗೆದ್ದು, ಕಾಂಗ್ರೆಸ್‌ಗೆ ಬಲವಾದ ಏಟು ನೀಡಿದ್ದಾರೆ.

ಚಾಮರಾಜನಗರದಲ್ಲೂ ಕಾಂಗ್ರೆಸ್‌ನ ಗೆಲುವಿನ ಅಂತರ ಕಡಿಮೆ ಆಗಿದೆ. ಹಾಗಾಗಿ, ಎರಡೂ ನಗರಸಭೆಗಳನ್ನೂ ಉಳಿಸುವ ಸವಾಲು ‘ಕೈ’ ಪಕ್ಷದ ಮುಂದಿದೆ.

ಚುನಾವಣೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ‘ಚಾಮರಾಜನಗರ ಜಿಲ್ಲೆ ಈಗಲೂ ಕಾಂಗ್ರೆಸ್‌ನ ಭದ್ರಕೋಟೆ. ಚುನಾವಣಾ ರಾಜಕೀಯಗಳೇ ಬೇರೆ ಇರುತ್ತವೆ. ಈ ಬಾರಿಯೂ ಎರಡು ನಗರಸಭೆಗಳಲ್ಲೂ ನಾವೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿಯು ನಗರಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ಹೋದ ಸಲ ಕೆಜೆಪಿ, ಬಿಜೆಪಿ ಗೊಂದಲದಿಂದಾಗಿ ಚಾಮರಾಜನಗರ ನಗರಸಭೆಯಲ್ಲಿ ಕೂದಲೆಳೆ ಅಂತರದಲ್ಲಿ ಅಧಿಕಾರ ತಪ್ಪಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುಮತ ಬರದಿದ್ದರೂ, 104 ಸ್ಥಾನಗಳನ್ನು ಗೆಲ್ಲುವುದರ ಮೂಲಕ ದೊಡ್ಡ ಪಕ್ಷವಾಗಿ ಅದು ಹೊರಹೊಮ್ಮಿದೆ. ಅದೇ ಉತ್ಸಾಹದಲ್ಲಿ ಎರಡೂ ನಗರಸಭೆ ಚುನಾವಣೆಗಳನ್ನು ಎದುರಿಸಲು ಅದು ಸಿದ್ಧತೆ ನಡೆಸಿದೆ.

‘ನಾವು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎರಡೂ ಕಡೆಗಳಲ್ಲಿ ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಮರಾಜನಗರ ನಗರಸಭೆಯಲ್ಲಿ ಕಳೆದ ಬಾರಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ಎಸ್‌ಡಿಪಿಐ, ಈ ಬಾರಿ ಇನ್ನಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಬಾರಿ ಎಲ್ಲ 31 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅದು ತೀರ್ಮಾನಿಸಿದೆ.

‘ಹೋದ ಸಲ ನಾಲ್ಕರಲ್ಲಿ ಗೆದ್ದು, ಮೂರು ವಾರ್ಡ್‌ಗಳಲ್ಲಿ 2ನೇ ಸ್ಥಾನ ಬಂದಿದ್ದೆವು. ಈ ಬಾರಿ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಗೆದ್ದು, ಚಾಮರಾಜನಗರ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ. ಕೊಳ್ಳೇಗಾಲದಲ್ಲಿ ಈ ವರ್ಷ ಖಾತೆ ತೆರೆಯುತ್ತೇವೆ’ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್‌ ಅಹಮದ್‌ ಹೇಳಿದರು.

ಆಕಾಂಕ್ಷಿಗಳು ಸಕ್ರಿಯ: ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ, ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಮುಖಂಡರು ಸಕ್ರಿಯರಾಗಿದ್ದಾರೆ. ಕಾಂಗ್ರೆಸ್‌, ಬಿಜೆಪಿಯಲ್ಲಿ ಒಂದೊಂದು ವಾರ್ಡ್‌ನಿಂದ ಇಬ್ಬರು ಮೂವರು ಸ್ಪರ್ಧಿಸಲು ಬಯಸುತ್ತಿದ್ದಾರೆ.

‘ನಾಳೆಯಿಂದ ಆಕಾಂಕ್ಷಿಗಳು ಸಕ್ರಿಯರಾಗುತ್ತಾರೆ. ಒಂದೊಂದು ವಾರ್ಡ್‌ನಲ್ಲಿ ಎರಡು ಮೂರು ಜನ ಟಿಕೆಟ್‌ ಆಕಾಂಕ್ಷಿಗಳು ಇರುವುದು ಸಾಮಾನ್ಯ. ನಾವು ಪ್ರತಿ ವಾರ್ಡ್‌ನಲ್ಲೂ ಜನರ ಅಭಿಪ್ರಾಯ ಸಂಗ್ರಹಿಸಿ, ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ಹೇಳಿದರು.

ಇದೇ ಅಭಿಪ್ರಾಯವನ್ನು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ಅವರೂ ವ್ಯಕ್ತಪಡಿಸಿದರು. ‘ಮೂರು ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಸಹಜ. ಮುಖಂಡರು ಪಕ್ಷಕ್ಕೆ ನೀಡಿ‌ದ ಕೊಡುಗೆ ಮತ್ತು ಅವರ ಗೆಲ್ಲುವ ಸಾಮರ್ಥ್ಯವನ್ನು ಪರಿಗಣಿಸಿ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ’ ಎಂದು ಅವರು ಹೇಳಿದರು.
***
ಕೊಳ್ಳೇಗಾಲ ನಗರಸಭೆ
ವಾರ್ಡ್‌ ಸಂಖ್ಯೆ–31 
ಪಕ್ಷಗಳ ಬಲಾಬಲ 
ಕಾಂಗ್ರೆಸ್‌–20 
ಕೆಜೆಪಿ–3 
ಬಿಜೆಪಿ–3 
ಜೆಡಿಎಸ್‌–1 
ಪಕ್ಷೇತರ–4
**

ಮತದಾರರು– 44,437 
ಪುರುಷರು–21,961 
ಮಹಿಳೆಯರು–22,476
***

ಚಾಮರಾಜನಗರ ನಗರಸಭೆ 
ವಾರ್ಡ್‌ ಸಂಖ್ಯೆ –31
ಪಕ್ಷಗಳ ಬಲಾಬಲ 
ಕಾಂಗ್ರೆಸ್‌–8 
ಬಿಜೆಪಿ–5 
ಕೆಜೆಪಿ–5  
ಎಸ್‌ಡಿಪಿಐ–4 
ವಾಟಾಳ್‌–3 
ಬಿಎಸ್‌ಆರ್‌–2 
ಜೆಡಿಎಸ್‌–1 
ಪಕ್ಷೇತರರು–03
***
ಮತದಾರರು– 53,731 
ಪುರುಷರು–26,085 
ಮಹಿಳೆಯರು–27,646

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !