ಆರಂಭದಲ್ಲಿ ಸರ್ಕಾರದಿಂದ ಸಿಗದು ನೆರವು

7
ಈ ವರ್ಷದಿಂದಲೇ ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭ, ಆಕಾಂಕ್ಷಿಗಳಲ್ಲಿ ಗರಿಗೆದರಿದ ಆಸೆ

ಆರಂಭದಲ್ಲಿ ಸರ್ಕಾರದಿಂದ ಸಿಗದು ನೆರವು

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಕೃಷಿ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದರೂ, ಸದ್ಯಕ್ಕೆ ಕಾಲೇಜಿನ ಮೂಲಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ, ಬೋಧಕ ಸಿಬ್ಬಂದಿ ಸೇರಿದಂತೆ ಇತರೆ ಮಾನವ ಸಂಪ‍ನ್ಮೂಲಗಳನ್ನು ಸರ್ಕಾರ ಒದಗಿಸುವುದಿಲ್ಲ.

ಈ ಷರತ್ತುಗಳನ್ನು ಒಡ್ಡಿಯೇ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೃಷಿ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ. ಖಚಿತ ಮೂಲಗಳ ಪ್ರಕಾರ, ‌ಎರಡು ವರ್ಷಗಳವರೆಗೆ ಸರ್ಕಾರದಿಂದ ಯಾವುದೇ ನೆರವು ಸಿಗದು.

ಕಾಲೇಜು ಸ್ಥಾಪನೆಗೆ ಆರಂಭಿಕವಾಗಿ ₹8 ಕೋಟಿ ಅನುದಾನದೊಂದಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ  ಮನವಿ ಮಾಡಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವರು ಕಳೆದ ಗುರುವಾರದಂದು (ಆಗಸ್ಟ್‌ 2) ಕೃಷಿ ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಇಲಾಖೆ ಇದಕ್ಕೆ ಸಮ್ಮತಿಸಿಲ್ಲ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸಲಿರುವ ಈ ಕಾಲೇಜನ್ನು ಆರಂಭಿಸಲು ಹೆಚ್ಚುವರಿ ಅನುದಾನ ಅಥವಾ ಮಾನವ ಸಂಪನ್ಮೂಲವನ್ನು ಕೋರುವಂತಿಲ್ಲ ಎಂದು 2017ರ ಆಗಸ್ಟ್‌ 4ರಂದು ನಡೆದಿದ್ದ ತಜ್ಞರ ಸಮಿತಿಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಮಂಡಿಸಲಾಗಿರುವ 2018–19ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಲಾಗಿರುವ ಅನುದಾನದಲ್ಲಿಯೇ ಹೊಸ ಕಾಲೇಜಿನ ಆರಂಭಿಕ ವೆಚ್ಚಗಳನ್ನು ಸರಿದೂಗಿಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಗತಿ: ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿನ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ಕಾಲೇಜು ಕಾರ್ಯಾರಂಭ ಮಾಡಲಿದೆ. ಕೇಂದ್ರದ ಕಟ್ಟಡದಲ್ಲೇ ತಾತ್ಕಾಲಿಕವಾಗಿ ತರಗತಿಗಳು ನಡೆಯಲಿವೆ. ಕೃಷಿ ವಿಜ್ಞಾನ ಕೇಂದ್ರದ ತಜ್ಞರೇ ವಿದ್ಯಾರ್ಥಿಗಳಿಗೆ ಬೋಧಿಸಲಿದ್ದಾರೆ.

ಕೃಷಿ ಕಾಲೇಜುಗಳಲ್ಲಿ ಪ್ರತೀ ವರ್ಷ ಸೆಪ್ಟೆಂಬರ್‌ನಲ್ಲಿ ತರಗತಿಗಳು ಆರಂಭವಾಗುತ್ತವೆ. ಇನ್ನೂ 24 ದಿನಗಳ ಸಮಯ ಇದ್ದು, ಪ್ರವೇಶ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡರೆ ಇಲ್ಲೂ ಸೆಪ್ಟೆಂಬರ್‌ನಿಂದಲೇ ತರಗತಿಗಳು ಪ್ರಾರಂಭವಾಗಬಹುದು. ಆದರೆ, ಅಷ್ಟು ಬೇಗ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆಯೇ ಎಂಬುದು ಎಲ್ಲರ ಪ್ರಶ್ನೆ. 

ಆದರೆ, ಹೊಸ ಕಾಲೇಜು ಆರಂಭದ ಬಗ್ಗೆ ಇನ್ನೂ ಅಧಿಕೃತದ ಮಾಹಿತಿ ಬಂದಿಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಣದ ಕೊರತೆಯಿಂದ ತಡೆ?: ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕು ಎಂಬ ಬೇಡಿಕೆ ದೀರ್ಘ ಸಮಯದಿಂದ ಇತ್ತು. ಸಂಸದ ಆರ್‌. ಧ್ರುವನಾರಾಯಣ ಅವರು ಹೆಚ್ಚಿನ ಆಸಕ್ತಿ ವಹಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಾಲೇಜು ಸ್ಥಾಪನೆ ಬಗ್ಗೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ಅವರು 2018–19ನೇ ಬಜೆಟ್‌ನಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದರು. ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳೂ ಆಗಿತ್ತು.

ಆದರೆ, ಅಷ್ಟರಲ್ಲೇ ಚುನಾವಣೆ ಬಂದು ಹೊಸ ಸರ್ಕಾರ ರಚನೆಯಾದ ಬಳಿಕ ಈ ಪ್ರಸ್ತಾವ ನೆನಗುದಿಗೆ ಬಿದ್ದಿತ್ತು. ಸಂಸದರು ಮತ್ತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಕಾಲೇಜು ಅಗತ್ಯದ ಬಗ್ಗೆ ಮನವರಿಕೆ ಮಾಡಿ ಅವರಿಂದ ಒಪ್ಪಿಗೆ ಪಡೆದಿದ್ದರೂ, ಹಣದ ಕೊರತೆ ಒಡ್ಡಿ ಹಣಕಾಸು ಇಲಾಖೆಯು ಕಾಲೇಜಿಗೆ ಒಪ್ಪಿಗೆ ನೀಡಿರಲಿಲ್ಲ ಎಂದು ಗೊತ್ತಾಗಿದೆ.

ಮತ್ತೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದರ ಜೊತೆಗೆ, ಆರಂಭದಲ್ಲಿ ಸ್ವಲ್ಪ ಸಮಯ ಸರ್ಕಾರ ಏನೂ ನೆರವು ಕೊಡುವುದು ಬೇಡ ಎಂದು ಜಿಲ್ಲೆಯ ಜನಪ್ರತಿನಿಧಿಗಳು ಭರವಸೆ ನೀಡಿದ ನಂತರ ಸರ್ಕಾರವು ಹಲವು ಷರತ್ತುಗಳನ್ನು ಹಾಕಿ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಎರಡು ಕಡೆಗಳಲ್ಲಿ ಸ್ಥಳ ಗುರುತು
ಕೃಷಿ ಕಾಲೇಜಿಗೆ ಸ್ವಂತ ಕಟ್ಟಡ ಹಾಗೂ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಯಡಬೆಟ್ಟದ ಬಳಿಯ (ವೈದ್ಯಕೀಯ ಕಾಲೇಜಿನ ಸಮೀಪ) ಸರ್ಕಾರಿ ಜಾಗ ಮತ್ತು ಸುವರ್ಣಾವತಿಯ ಬಳಿ ಇರುವ ತೋಟಗಾರಿಕಾ ಇಲಾಖೆಯ ಜಾಗವನ್ನು ಗುರುತಿಸಲಾಗಿದೆ.

ಕೆಲ ತಿಂಗಳ ಹಿಂದೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುವರ್ಣಾವತಿಯ ಜಾಗ ಜಿಲ್ಲಾ ಕೇಂದ್ರದಿಂದ ತುಂಬಾ ದೂರದಲ್ಲಿದೆ. ಹಾಗಾಗಿ, ಯಡಬೆಟ್ಟದ ಬಳಿಯೇ ಕ್ಯಾಂಪಸ್‌ ನಿರ್ಮಿಸಲು ಸರ್ಕಾರ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !