ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ತಲೆ ಎತ್ತದ ಬಾಲಮಂದಿರ ಕಟ್ಟಡಗಳು

ವರ್ಷದ ಹಿಂದೆಯೇ ಕರಿನಂಜನಪುರದಲ್ಲಿ ಜಮೀನು ಮಂಜೂರು
Last Updated 4 ಜುಲೈ 2018, 5:28 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ಕಾರಿ ಬಾಲಮಂದಿರಗಳಿಗೆ ಜಮೀನು ಮಂಜೂರಾಗಿ ವರ್ಷ ಕಳೆದರೂ ಕಟ್ಟಡ ನಿರ್ಮಾಣಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಮೂಲಕ ಕಟ್ಟಡಗಳ ನೀಲನಕ್ಷೆಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಿದೆ. ಅಂದಾಜು₹ 3 ಕೋಟಿ ವೆಚ್ಚದಲ್ಲಿ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ, ಸರ್ಕಾರದಿಂದ ಇನ್ನು ಸಮ್ಮತಿ ದೊರೆತಿಲ್ಲ.

ಬಾಡಿಗೆ ಕಟ್ಟಡದಲ್ಲಿ: ಸದ್ಯ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳು‌ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಾಲಕಿಯರ ಬಾಲಮಂದಿರದಲ್ಲಿ 27 ಹೆಣ್ಣುಮಕ್ಕಳು ಆಶ್ರಯ ಪಡೆದಿದ್ದರೆ, ಬಾಲಕರದ್ದರಲ್ಲಿ 8 ಮಕ್ಕಳಿದ್ದಾರೆ. ಪ್ರಸ್ತುತ ಬಾಲಕಿಯರ ಬಾಲ ಮಂದಿರ ಸಣ್ಣ ಮನೆಯೊಂದರಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹೆಣ್ಣುಮಕ್ಕಳಿಗೆ ಅಲ್ಲಿರಲು ಕಷ್ಟವಾಗುತ್ತಿದೆ. ಇರುವ ಒಂದೇ ಶೌಚಾಲಯವನ್ನು ಎಲ್ಲರೂ ಬಳಸಬೇಕಾಗಿದೆ.

ಬಾಲ ಮಂದಿರದಲ್ಲಿ ಇಷ್ಟೇ ಮಕ್ಕಳು ಇರುತ್ತಾರೆ ಎಂದು ಹೇಳಲಾಗುವುದಿಲ್ಲ. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಮಕ್ಕಳಿಗೆ ಇಲ್ಲಿ ಆಶ್ರಯ ನೀಡಿ ಪೋಷಿಸಲಾಗುತ್ತದೆ. ಬಾಲಕಿಯರ ಬಾಲಮಂದಿರದಲ್ಲಿ ಸರಾಸರಿ 25ರಿಂದ 30ರಷ್ಟು ಮಕ್ಕಳು ಇರುತ್ತಾರೆ ಎಂದು ಹೇಳುತ್ತಾರೆ ಇಲಾಖೆಯ ಅಧಿಕಾರಿಗಳು.

‘ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ಅಥವಾ ವಿವಿಧ ರೀತಿಯ ಶೋಷಣೆಗೆ ಒಳ‍ಪಟ್ಟ ಮಕ್ಕಳು ಇಲ್ಲಿಗೆ ಬರುತ್ತಾರೆ. ಹಾಗಾಗಿ, ಬಾಲಮಂದಿರಗಳಲ್ಲಿ ಅವರಿಗೆ ಒಳ್ಳೆಯ ವಾತಾವರಣ ಬೇಕು, ಉತ್ತಮ ಸೌಲಭ್ಯಗಳಿರಬೇಕು. ಹಾಗಿದ್ದರೆ ಮಾತ್ರ ಅವರ ಮನಸ್ಸು ಪರಿವರ್ತನೆ ಆಗುತ್ತದೆ’ ಎಂದು ಹೇಳುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರುಣ್‌ ರೇ.

‘ಹುಡುಗರ ಬಾಲಮಂದಿರದಲ್ಲಿ ಕಡಿಮೆ ಜನ ಇದ್ದಾರೆ. ಹಾಗಾಗಿ‌ತೊಂದರೆ ಇಲ್ಲ. ಆದರೆ, ಬಾಲಕಿಯರ ಬಾಲಮಂದಿರದಲ್ಲಿ ಹೆಚ್ಚು ಹೆಣ್ಣುಮಕ್ಕಳು ಇದ್ದಾರೆ. ಮೊದಲೆಲ್ಲ 5–6 ಮಕ್ಕಳು ಇರುತ್ತಿದ್ದರು. ಆದರೆ, ಈಗೀಗ ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ/ದೌರ್ಜನ್ಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಹಾಗಾಗಿ ಬಾಲಮಂದಿರಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳುತ್ತಾರೆ ಅವರು.

‘ಮೊದಲಿಗೆ ಹೋಲಿಸಿದರೆ ಬಾಲಕಿಯರ ಬಾಲಮಂದಿರದಲ್ಲಿ ಈಗ ಪ‌ರಿಸ್ಥಿತಿ ಸುಧಾರಿಸಿದೆ. ಕಟ್ಟಡದ ಸಮಸ್ಯೆಯೊಂದನ್ನು ಬಿಟ್ಟರೆ ಬೇರೆ ದೊಡ್ಡ ಸಮಸ್ಯೆಗಳು ಇಲ್ಲ. ಈಗ ಉತ್ತಮ ಆಹಾರ ಸಿಗುತ್ತಿದೆ. ಮಕ್ಕಳೆಲ್ಲ ಖುಷಿಯಿಂದ ಇದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗ ಮಂಜೂರು: ಸುವ್ಯವಸ್ಥಿತ ಬಾಲಮಂದಿರಗಳ ನಿರ್ಮಾಣಕ್ಕೆ ಕರಿನಂಜನಪುರ ಗ್ರಾಮದಲ್ಲಿ 844 ಚದರ ಮೀಟರ್‌ಗಳಷ್ಟು ಜಮೀನನ್ನುವರ್ಷದ ಹಿಂದೆಯೇ ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದೆ. ಜಿಲ್ಲಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ರಕ್ಷಣಾ ಘಟಕವು ಈ ಜಮೀನಿನಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಬಾಲಮಂದಿರಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಅನುದಾನ ಬಿಡುಗಡೆಗಾಗಿ ಕಾಯುತ್ತಿದೆ.

ಬಜೆಟ್‌ ಅಧಿವೇಶನ ಮುಗಿದ ತಕ್ಷಣ, ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ‘ಪ್ರಸ್ತಾವನೆಯನ್ನು ಈಗಾಗಲೇ ಇಲಾಖೆಯ ಉನ್ನತ ಮಟ್ಟಕ್ಕೆ ಕಳುಹಿಸಲಾಗಿದೆ. ನೀಲನಕ್ಷೆಗಳೆಲ್ಲ ಸಿದ್ಧವಾಗಿವೆ.ಈ ವಿಷಯವಾಗಿ ಕಳೆದ ವಾರ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿಸಭೆಯೂ ನಡೆದಿದೆ. ಈ ಬಾರಿ ಅನುದಾನ ಸಿಗುವುದು ಖಚಿತ. ಬಜೆಟ್‌ ಆದ ತಕ್ಷಣವೇ ಅನುಮತಿ ಸಿಗಬಹುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜಯಶೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಇಬ್ಬರು ಶಾಸಕರು ಈ ಬಾರಿ ಸಚಿವರಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಜಿಲ್ಲಾ ಕೇಂದ್ರವಿರುವ ಕ್ಷೇತ್ರವನ್ನು (ಚಾಮರಾಜನಗರ) ಪ್ರತಿನಿಧಿಸುತ್ತಿರುವ ಸಿ. ಪುಟ್ಟರಂಗಶೆಟ್ಟಿ ಅವರು ಮಂತ್ರಿಯಾಗಿದ್ದಾರೆ. ಸರ್ಕಾರದ ಉನ್ನತ ಮಟ್ಟದಲ್ಲಿ ಒತ್ತಡ ಹಾಕಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅವರು ಪ್ರಯತ್ನಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT