ಒಂದೇ ಕೊಠಡಿಯಲ್ಲಿ ಮೂರು ತರಗತಿ

7
ದುರಸ್ತಿಯಾಗದ ಶಾಲಾ ಕೊಠಡಿ, ಮನವಿಗೆ ಸಿಗದ ಸ್ಪಂದನೆ

ಒಂದೇ ಕೊಠಡಿಯಲ್ಲಿ ಮೂರು ತರಗತಿ

Published:
Updated:
Deccan Herald

ಹನೂರು: ಮಕ್ಕಳು ಪಾಠ ಕೇಳುತ್ತಿದ್ದ ಕೊಠಡಿ ಶಿಥಿಲಗೊಂಡು ನಾಲ್ಕು ವರ್ಷಗಳು ಕಳೆದರೂ, ದುರಸ್ತಿಯಾಗಿಲ್ಲ. ಇರುವ ನಾಲ್ಕು ಕೊಠಡಿಗಳು ಸರಿ ಇದೆಯೇ ಎಂದರೆ ಅದೂ ಇಲ್ಲ. ಮಕ್ಕಳಿಗೆ ಭಯದಲ್ಲೇ ಪಾಠ ಕೇಳಬೇಕಾದ ಸ್ಥಿತಿ. ಅಗತ್ಯವಿರುವಷ್ಟು ಕೊಠಡಿಗಳು ಇಲ್ಲದಿರುವುದರಿಂದ ಒಂದೇ ಕೊಠಡಿಯಲ್ಲಿ ಎರಡು– ಮೂರು ತರಗತಿಗಳನ್ನು ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದು.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

1ರಿಂದ 7ನೇ ತರಗತಿಗಳಿದ್ದು 112 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಪ್ರತಿ ತರಗತಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲ. ನಲಿ ಕಲಿ ಕೊಠಡಿಯೊಳಗೆ 1ರಿಂದ 3ನೇ ತರಗತಿ ನಡೆಸಲಾಗುತ್ತಿದೆ. ಇನ್ನೊಂದರಲ್ಲಿ 5 ಮತ್ತು 6ನೇ ತರಗತಿಗಳು ನಡೆಯುತ್ತಿವೆ. ಮುಖ್ಯೋಪಾಧ್ಯಾಯರ ಕೊಠಡಿಯಲ್ಲೇ 7ನೇ ತರಗತಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ. ಈ ಶಾಲೆಗೆ ಕನಿಷ್ಠ ಇನ್ನೂ ಮೂರು ಕೊಠಡಿಗಳ ಅವಶ್ಯಕತೆ ಇದೆ.

ಮಳೆ ಬಂದರೆ ಸೋರುವ ಕೊಠಡಿ: ಶಾಲೆಯಲ್ಲಿರುವ ಅಷ್ಟೂ ಮಕ್ಕಳಿಗೆ ಇರುವುದು ನಾಲ್ಕು ಕೊಠಡಿಗಳು. ಇವುಗಳ ಪೈಕಿ ಒಂದು ಕೊಠಡಿಗೆ ಹೆಂಚಿನ ಚಾವಣಿ ಇದೆ. ಮಳೆಗಾಲದಲ್ಲಿ ನೀರು ಸೋರುವುದರಿಂದ ಮಕ್ಕಳು ನಿಂತುಕೊಂಡೆ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಮತ್ತೊಂದು ಕೊಠಡಿಯ ಮೇಲ್ಚಾವಣಿಯ ಗಾರೆ ಕಿತ್ತು ಬೀಳಲು ಆರಂಭಿಸಿದ್ದು, ಕಟ್ಟಡ ದಿನೇ ದಿನೇ ಶಿಥಿಲಗೊಳ್ಳುತ್ತಿದೆ. ಇಂತಹ ಕಟ್ಟಡಗಳಲ್ಲಿ ಮಕ್ಕಳು ಕಲಿಯುತ್ತಿರುವುದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

ದುರಸ್ತಿಗೆ ಇನ್ನೆಷ್ಟು ವರ್ಷ ಬೇಕು?: ಮುಖ್ಯ ಶಿಕ್ಷಕರ ಕೊಠಡಿಗೆ ಹೊಂದಿಕೊಂಡಂತೆ ಇರುವ ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ಚಾವಣಿಯ ಹೆಂಚುಗಳೆಲ್ಲ ಕಿತ್ತು ಹೋಗಿವೆ. ಕೊಠಡಿಗೆ ಈ ದುಃಸ್ಥಿತಿ ಬಂದು ನಾಲ್ಕು ವರ್ಷಗಳಾಯಿತು. ಇನ್ನೂ ದುರಸ್ತಿಯಾಗಿಲ್ಲ.

‘ಕೊಠಡಿ ಸರಿಪಡಿಸುವಂತೆ ಅಧಿಕಾರಿಗಳಿಗೆ ನಾಲ್ಕು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಜೊತೆಗೆ ಪ್ರತಿ ಪೋಷಕರ ಸಭೆಯಲ್ಲೂ ಮುಖ್ಯ ಶಿಕ್ಷಕರ ಮೂಲಕ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇಷ್ಟಾದರೂ ನೂತನ ಕಟ್ಟಡ ನಿರ್ಮಾಣ ಆಗುವುದು ಬಿಡಿ; ಇರುವುದೂ ದುರಸ್ತಿಗೊಂಡಿಲ್ಲ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಶಿವಮೂರ್ತಿ ಅಳಲು ತೋಡಿಕೊಂಡರು.

‘ಕೊಠಡಿ ಬೀಳುವ ಹಂತದಲ್ಲಿದೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮಾಡುತ್ತಿರುವ ಇಂದಿನ ಸಂದರ್ಭದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಬೇಕು’ ಎಂದು ಅವರು ಒತ್ತಾಯಿಸಿದರು. 

* ಕಟ್ಟಡ ದುರಸ್ತಿಗಾಗಿ ಮನವಿ ಮಾಡಲಾಗಿತ್ತು. ಈಗ ಶಿಥಿಲಗೊಂಡಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಶಾಸಕರ ನಿಧಿಯಿಂದ ₹ 8.70 ಲಕ್ಷ ಅನುದಾನ ಮೀಸಲಿಡಲಾಗಿದೆ

-ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !