7
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್ ಹೇಳಿಕೆ

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ

Published:
Updated:

ಚಾಮರಾಜನಗರ: ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳು ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ (ಓಪನ್‌ ಬುಕ್‌ ಎಕ್ಸಾಮ್‌) ವ್ಯವಸ್ಥೆಯನ್ನು ಜಾರಿಗೆ ತರುವ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರು‌ ಭಾನುವಾರ ಇಲ್ಲಿ ಹೇಳಿದರು.

ಬಹುಜನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗ ಜಾರಿಯಲ್ಲಿರುವ ಪರೀಕ್ಷಾ ಪದ್ಧತಿ (ಕ್ಲೋಸ್ಡ್‌ ಬುಕ್‌ ಎಕ್ಸಾಮ್‌) ಅವೈ‌ಜ್ಞಾನಿಕ. ಕೇವಲ ಶೇ 2ರಿಂದ 3ರಷ್ಟು ಇರುವ ವರ್ಗಕ್ಕಾಗಿ ಸೃಷ್ಟಿ ಮಾಡಿದ್ದು’ ಎಂದು ಪ್ರತಿಪಾದಿಸಿದರು.

‘ಪರೀಕ್ಷಾ ಕೇಂದ್ರದಲ್ಲಿ ‘ಆ ಕಡೆ ಈ ಕಡೆ ನೋಡಬೇಡಿ’ ಎಂದು ಮಕ್ಕಳಿಗೆ ಹೇಳಲಾಗುತ್ತದೆ. ಅವರೇನು ಕ್ರಿಮಿನಲ್‌ಗಳಾ? ಪುಸ್ತಕ ನೋಡದೇ ಬರೆಯುವವರು ಬುದ್ಧಿವಂತರು. ಉಳಿದವರು ದಡ್ಡರು ಎಂಬುದು ಸರಿಯಲ್ಲ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ತರಗತಿಗಳಲ್ಲಿ ಶಿಕ್ಷಕರು ಪಾಠ ಮಾಡಿದ ನಂತರ ಮಕ್ಕಳ ಕೈಯಲ್ಲಿ ಬರೆಸುವ ಪದ್ಧತಿ ಹೋಗಬೇಕು. ಪಾಠದ ನಂತರ ಪ್ರಶ್ನೆಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ಕೊಟ್ಟು, ಪಠ್ಯಪುಸ್ತಕ ನೋಡಿ ಉತ್ತರ ಬರೆಯುವುದಕ್ಕೆ ಬೋಧಕರು ಸೂಚಿಸಬೇಕು. ಮಕ್ಕಳಿಗೆ ಆಗಲೂ ಬರೆಯಲು ಸಾಧ್ಯವಾಗದಿದ್ದರೆ, ಪಕ್ಕದಲ್ಲಿರುವ ವಿದ್ಯಾರ್ಥಿಯನ್ನು ಕೇಳಿ ಬರೆಯುವಂತೆ ಸಲಹೆ ನೀಡಬೇಕು. ಹೀಗೆ ಬರೆದರೆ, ಪರೀಕ್ಷೆ ಕುರಿತು ಮಕ್ಕಳಿಗಿರುವ ಭಯ ದೂರವಾಗುತ್ತದೆ. ಮಕ್ಕಳು ಇನ್ನಷ್ಟು ಸೃಜನಶೀಲರಾಗುತ್ತಾರೆ’ ಎಂದರು. 

‘ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳೇ ಕೇಂದ್ರ ಬಿಂದುಗಳು. ಆದರೆ ರಾಜ್ಯದಲ್ಲಿ ಶಿಕ್ಷಕರ ಕಡೆಗೇ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ’ ಎಂದು ಹೇಳಿದರು. ‘ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಬೋಧನಾ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಹೊಸ ವ್ಯವಸ್ಥೆಯಲ್ಲಿ ಬದಲಾಗಬೇಕಾಗಿರುವವರು ಶಿಕ್ಷಕರೇ ವಿನಾ ಮಕ್ಕಳಲ್ಲ’ ಎಂದರು.

‘ಪ್ರಸ್ತಾವಿತ ಹೊಸ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಾಗಿ ಕಾರ್ಯಾಗಾರವನ್ನು ಏರ್ಪಡಿಸಿ ಅಲ್ಲಿ ಶಿಕ್ಷಣ ತಜ್ಞರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ’ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್‌: ‘ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್‌ ಅನಿವಾರ್ಯ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮಾತೃ ಭಾಷೆಯ ಜೊತೆ ಜೊತೆಗೆ ಇಂಗ್ಲಿಷ್‌ ಅನ್ನೂ ಒಂದು ಭಾಷೆಯನ್ನಾಗಿ ಕಲಿಸುವ ಯೋಚನೆ ಇದೆ. ಮುಖ್ಯಮಂತ್ರಿಗಳು ಕೂಡ ಈ ಪ್ರಸ್ತಾವದ ಪರವಾಗಿದ್ದಾರೆ. ಮಕ್ಕಳಿಗೆ ಕೌಶಲ್ಯದಾಯಕ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಲಾಗುವುದು’ ಎಂದು ಅವರು ಹೇಳಿದರು. 

‘ಶಿಕ್ಷಕರು ತರಗತಿಗೆ ಮೊಬೈಲ್‌ ಒಯ್ಯುವಂತಿಲ್ಲ’: ಮಕ್ಕಳು ಮಾತ್ರವಲ್ಲ ಬೋಧಕರು ಕೂಡ ತರಗತಿಗಳಿಗೆ ಮೊಬೈಲ್‌ಗಳನ್ನು ಕೊಂಡುಹೋಗಬಾರದು ಎಂದು ಎನ್‌. ಮಹೇಶ್‌ ಹೇಳಿದರು.

‘ತರಗತಿಗೂ ಹೋಗುವ ಮುನ್ನ ಮುಖ್ಯಶಿಕ್ಷಕರ ಮೇಜಿನಲ್ಲಿ ಮೊಬೈಲ್‌ಗಳನ್ನು ಇಟ್ಟು ಹೋಗಬೇಕು. ನಾವು ಮೊಬೈಲ್‌ಗಳ ವಿರೋಧಿಗಳಲ್ಲ. ಆದರೆ, ತರಗತಿಯಲ್ಲಿ ಅದು ಕಿರಿಕಿರಿ ಮಾಡುತ್ತದೆ’ ಎಂದರು.

ಶಿಕ್ಷಕರು ತರಗತಿಗಳಲ್ಲಿ ಮೊಬೈಲ್‌ ಬಳಸುತ್ತಿದ್ದಾರೋ ಇಲ್ಲವೋ ಎಂಬುದರ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳೊಂದಿಗೆ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.  

ಬರಹ ಇಷ್ಟವಾಯಿತೆ?

 • 19

  Happy
 • 7

  Amused
 • 2

  Sad
 • 3

  Frustrated
 • 6

  Angry

Comments:

0 comments

Write the first review for this !