ಕಷ್ಟ ಕೇಳುವವರಿಲ್ಲ: ಸೋಲಿಗರ ಅಳಲು

7
ಮಲೇರಿಯ ಪೀಡಿತ ಗ್ರಾಮಸ್ಥರತ್ತ ಸುಳಿಯದ ಜನಪ್ರತಿನಿಧಿಗಳು, ಅಧಿಕಾರಿಗಳು

ಕಷ್ಟ ಕೇಳುವವರಿಲ್ಲ: ಸೋಲಿಗರ ಅಳಲು

Published:
Updated:
Deccan Herald

ಮಲೆ ಮಹದೇಶ್ವರ ಬೆಟ್ಟ: ‘ಮತ ಕೇಳುವುದಕ್ಕೆ ಮಾತ್ರ ನಮ್ಮ ಬಳಿಗೆ ಜನನಾಯಕರು ಬರುತ್ತಾರೆ, ಕಷ್ಟ ಬಂದಾಗ ಯಾರೊಬ್ಬರೂ ಬರುವುದಿಲ್ಲ’

– ಮಲೆ ಮಹದೇಶ್ವರ ಬೆಟ್ಟದ ಸಮೀಪವಿರುವ ಪಾಲಾರ್ ಗ್ರಾಮದಲ್ಲಿ ವಾಸವಾಗಿರುವ ಸೋಲಿಗ ಸಮುದಾಯದವವರು ದುಃಖ ಹಾಗೂ ಆಕ್ರೋಶ ಭರಿತರಾಗಿ ಹೇಳುವ ಮಾತು.

ಪಾಲಾರ್ ಗ್ರಾಮದಲ್ಲಿರುವ ನಿವಾಸಿಗಳು ಸಾಮೂಹಿಕವಾಗಿ ಮಾರಣಾಂತಿಕ ಮಲೇರಿಯಕ್ಕೆ ತುತ್ತಾಗಿ ತಿಂಗಳೇ ಉರುಳಿ ಹೋಯಿತು. ವಾರದಿಂದೀಚೆಗೆ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಚೇತನ್‌ ಕುಮಾರ್‌ ಅವರು ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದು ಬಿಟ್ಟರೆ, ಗ್ರಾಮ ಪಂಚಾಯಿತಿಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಸುಳಿದಿಲ್ಲ. ತಾವು ಕಷ್ಟದಲ್ಲಿದ್ದರೂ ಯಾರೊಬ್ಬರೂ ತಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ನೀರಿನ ಸಮಸ್ಯೆ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪಾಲಾರ್‌ನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ನೀರು ಪೂರೈಸಲು ಅಳವಡಿಸಿರುವ ನೀರಿನ ಪೈಪ್‌ನಿಂದ ನೇರವಾಗಿ ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿದೆ (ಬೆಟ್ಟದಲ್ಲಿ ನೀರು ಶುದ್ಧೀಕರಣ ಘಟಕ ಇದೆ). ಈ ನೀರನ್ನು ಕುಡಿಯುತ್ತಿರುವ ಗ್ರಾಮಸ್ಥರು ಹಲವಾರು ಸಾಂಕ್ರಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. 

ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ‘ನಮ್ಮ ಗ್ರಾಮಕ್ಕೆ ಕಾಯಿಲೆ ಹರಡಿ ತಿಂಗಳು ಕಳೆಯಿತು. ಇಲ್ಲಿಯವರೆಗೆ ಯಾರೂ ನಮ್ಮ ಕಷ್ಟ ಸುಖಗಳನ್ನು ವಿಚಾರಿಸಲು ಬಂದಿಲ್ಲ’ ಎಂದು ದುಃಖಿಸಿದರು.

ದಿನವೂ ಚಿಕಿತ್ಸೆ: ‘ಪ್ರತಿ ದಿನವೂ ವೈದ್ಯರು ಅಥವಾ ಕಿರಿಯ ಸಹಾಯಕಿಯರು ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಶನಿವಾರ ಜಿಲ್ಲಾ ವೈದ್ಯಾಧಿಕಾರಿಗಳೂ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದರೆ, ಪಂಚಾಯಿತಿ ವತಿಯಿಂದ ಗ್ರಾಮವನ್ನು ಸ್ವಚ್ಛ ಮಾಡಲು ಅಥವಾ ಯೋಗಕ್ಷೇಮ ವಿಚಾರಿಸಲು ಯಾರೂ ಬಂದಿಲ್ಲ. ಪೌರ ಕಾರ್ಮಿಕರೊಬ್ಬರು ಬಂದು ಮನೆ ಮನೆಗೆ ಬ್ಲೀಚಿಂಗ್ ಪೌಡರ್ ಕೊಟ್ಟು ಹೋಗಿದ್ದಾರೆ. ಅದು ಬಿಟ್ಟರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ. ಇದೇ ರೀತಿಯಾಗಿ ಮುಂದುವರೆದರೆ ಮುಂದಾಗಬಹುದಾದ ಅನಾಹುತಗಳಿಗೆ ಜನಪ್ರತಿನಿಧಿಗಳೇ ನೇರ ಹೊಣೆಗಾರರಾಗುತ್ತಾರೆ’ ಎಂದು ಗ್ರಾಮದ ನಾಗರಾಜು ಹೇಳಿದರು.

‘ಸಾಮಾನ್ಯ ಜ್ವರ ಎಂದು ತಿಳಿದಿದ್ದೆವು’

‘ಯಾವ ಕಾಯಿಲೆ ಬಂದಿದೆ ಎಂಬುದೇ ನಮಗೆ ಗೊತ್ತಾಗಲಿಲ್ಲ. ಸಾಮಾನ್ಯ ಜ್ವರ ಬಂದಿದೆ ಎಂದು ತಿಳಿದಿದ್ದೆವು. ನಂತರ ಕೊಳತ್ತೂರಿನ ಖಾಸಗಿ ಆಸ್ವತ್ರೆಗೆ ತೆರಳಿ ಒಬ್ಬನನ್ನು ಚಿಕಿತ್ಸೆಗೆ ಒಳಪಡಿಸಿದಾಗಲೇ ಮಲೇರಿಯ ಎಂದು ಗೊತ್ತಾಯಿತು’ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

‘ಅನಂತರ ಕೊಳತ್ತೂರಿನ ಖಾಸಗಿ ಆಸ್ವತ್ರೆಯ ಗೌರಿಶಂಕರ್ ಮಲೆ ಮಹದೇಶ್ವರ ಬೆಟ್ಟದ ವೈದ್ಯರಿಗೆ ತಿಳಿಸಿದ ಮೇಲೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಒಂದು ವಾರದಿಂದ ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಗ್ರಾಮದಲ್ಲಿರುವ ಸುಮಾರು 60 ಜನರಿಗೆ ಈ ಕಾಯಿಲೆ ಹರಡಿದ್ದು, ಇದೇ ರೀತಿ ನಮ್ಮನ್ನು ಕಡೆಗಣಿಸಿದರೆ ಇಡೀ ಗ್ರಾಮವೇ ಮಲೇರಿಯಕ್ಕೆ ತುತ್ತಾಗುತ್ತದೆ’ ಎಂದು ಗ್ರಾಮದ ಶಿವಣ್ಣ, ಕರಡಿಮಾದ, ರಂಗಯ್ಯ, ಗವಿ ಮಾದಯ್ಯ ಆತಂಕ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !