ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಮನೆಗೆ ಓಡಿಸ್ತೀನಿ

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಕೆ
Last Updated 17 ಜೂನ್ 2018, 11:16 IST
ಅಕ್ಷರ ಗಾತ್ರ

ಹಾಸನ: ‘ಹೆರಿಗೆ, ತಲೆ ನೋವಿನಂತಹ ಸಣ್ಣ ಕಾಯಿಲೆಗಳಿಗೆ ಬರುವ ಜನರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಮನೆಗೆ ಓಡಿಸ್ತೀನಿ’ ಎಂದು ಸಚಿವ ಎಚ್‌.ಡಿ.ರೇವಣ್ಣ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಂಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ಸರ್ಕಾರಿ ಆಸ್ಪತ್ರೆಗೆ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ದೊರೆಯಬೇಕು. ಚಿಕಿತ್ಸೆ ವಿವರ ಪ್ರಕಟಿಸಬೇಕು. ವೈದ್ಯರ ಕೊರತೆ ಇದ್ದರೆ ನೇರ ಸಂದರ್ಶನ ಮೂಲಕ ನೇಮಿಸಿಕೊಳ್ಳಬೇಕು ಎಂದು ಹಿಮ್ಸ್‌ ನಿರ್ದೇಶಕ ರವಿಕುಮಾರ್‌ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್‌ ಅವರಿಗೆ ಸೂಚನೆ ನೀಡಿದರು.

‘ದೇಗುಲದ ಗೋಪುರ ನಿರ್ಮಿಸಲು ಮರಳು ಕೊಡುತ್ತಿಲ್ಲ. ಹೀಗಾದರೆ ಜನ ಸಾಮಾನ್ಯರ ಗತಿ ಏನು. ಅಕ್ರಮ ಮರಳು ಎಗ್ಗಿಲ್ಲದೆ ಸಾಗುತ್ತಿದೆ. ಎಲ್ಲೂ ಚೆಕ್‌ಪೋಸ್ಟ್‌ ಹಾಕಿಲ್ಲ. ಬುಧವಾರದಿಂದ ಮರಳು ಕೊಡಲೇಬೇಕು’ ಎಂದು ಗಣಿ ಮತ್ತು ಭೂ ವಿಜ್ಞಾ ಇಲಾಖೆ ಉಪ ನಿರ್ದೇಶಕ ಪದ್ಮಜಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಪದ್ಮಜಾ, ಮರಳು ಸಂಗ್ರಹಕ್ಕಾಗಿ ಜಿಲ್ಲೆಯ 40 ಕಡೆ ಬ್ಲಾಕ್‌ ತೆರೆಯಲಾಗಿದೆ. ಒಟ್ಟು 36 ಬ್ಲಾಕ್‌ಗಳಿಗೆ ಟೆಂಡರ್‌ ಕರೆದಿದ್ದು, 4ಕ್ಕೆ ತಕರಾರು ಅರ್ಜಿ ಬಂದಿದೆ. ಭೈರಾಪುರ, ಆಲೂರಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗುತ್ತಿದೆ ಎಂದರು.

ಹೇಮಾವತಿ ಹಾಗೂ ಯಗಚಿ ನಾಲೆಗಳಲ್ಲಿ ಹೂಳು ತೆಗೆದು ವಾರದಲ್ಲಿ ನೀರು ಹರಿಸಬೇಕು. ಯಾವುದೇ ಸಮಯದಲ್ಲಿ ನಾಲೆಗಳಿಗೆ ನೀರು ಹರಿಸಲು ಸಿದ್ದರಿರಬೇಕು. ನಾಲೆಗಳ ದುರಸ್ತಿ, ಹೂಳೆತ್ತುವಿಕೆ ಸೇರಿದಂತೆ ಯಾವುದೇ ಕೆಲಸಗಳಿದ್ದರೂ ತುರ್ತು ಕಾಮಗಾರಿಗಳ ಪಟ್ಟಿಯಲ್ಲಿ ಸೇರಿಸಿ, ಕೆಲಸ ಮಾಡಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ. ಪದ್ಮ ಮಾತನಾಡಿ, ಜಿಲ್ಲೆಯಲ್ಲಿರುವ 2851 ಅಂಗನವಾಡಿ ಕೇಂದ್ರಗಳ ಪೈಕಿ 1700 ಕ್ಕೆ ಮಾತ್ರವೇ ಸ್ವಂತ ಕಟ್ಟಡಗಳಿವೆ. ಈ ಪೈಕಿ 650 ಖಾಲಿ ಇರುವ ಸರ್ಕಾರಿ ಶಾಲೆ ಕಟ್ಟಡಗಳಲ್ಲಿ ನಡೆಯುತ್ತಿವೆ. 499 ಕಟ್ಟಡಗಳ ಅವಶ್ಯಕತೆ ಇದೆ ಎಂದರು.

ಇದಕ್ಕೆ ದನಿಗೂಡಿಸಿದ ಶಾಸಕ ಪ್ರೀತಂ ಜೆ.ಗೌಡ, ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಬಾಡಿಗೆ ಪಾವತಿಯಾಗುತ್ತಿಲ್ಲ. ಕೆಲವೆಡೆ ಅಂಗನವಾಡಿ ಸಹಾಯಕಿಯರೇ ಬಾಡಿಗೆ ಕಟ್ಟಿಕೊಂಡಿದ್ದಾರೆ ಎಂದು ಗಮನ ಸೆಳೆದರು.

‘ಸದ್ಯ ಖಾಲಿ ಇರುವ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಬೇಕು. ಬಾಕಿ ಇರುವ ಬಾಡಿಗೆ ಹಣವನ್ನು ಪಾವತಿಸುವಂತೆ’ ಉಪ ನಿರ್ದೇಶಕರಿಗೆ ರೇವಣ್ಣ ನಿರ್ದೇಶಿಸಿದರು.

ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ
‘ಬಡವರ ಮಕ್ಕಳು ಕನ್ನಡ ಶಾಲೆಯಲ್ಲಿ ಸೌಲಭ್ಯಗಳಿಲ್ಲದೆ ಓದಬೇಕು. ಶಾಸಕರ ಮಕ್ಕಳು ಇಂಗ್ಲಿಷ್‌ ಶಾಲೆಯಲ್ಲಿ ಓದಬೇಕು ಎನ್ನುವುದು ಯಾವ ನ್ಯಾಯ? ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತೇವೆ. ಪ್ರತಿಭಟನೆಗೆ ಜಗ್ಗುವುದಿಲ್ಲ, ಹೆದರುವುದೂ ಇಲ್ಲ’ ಎಂದು ರೇವಣ್ಣ ಹೇಳಿದರು.

ಜಿಲ್ಲೆಯ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ಅವರು, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ದಾಖಲು ಮಾಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನು ಎರಡು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಖಾಲಿ ಹೊಡೆಯುತ್ತವೆ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವರದಿ ನೀಡಿದರೆ ಶೀಘ್ರವೇ ಮಂಜೂರಾತಿ ದೊರಕಿಸಿಕೊಡುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT