ಗಿರಿಜನರಿಗೂ ಅಂಚೆ ಬ್ಯಾಂಕಿಂಗ್‌ ಸೌಲಭ್ಯ ಸಿಗಲಿ: ಬಿ.ಬಿ. ಕಾವೇರಿ

7
ಅಂಚೆ ಪಾವತಿ ಬ್ಯಾಂಕ್‌ (ಐಪಿಪಿಬಿ) ಉದ್ಘಾಟಿಸಿದ ಜಿಲ್ಲಾಧಿಕಾರಿ

ಗಿರಿಜನರಿಗೂ ಅಂಚೆ ಬ್ಯಾಂಕಿಂಗ್‌ ಸೌಲಭ್ಯ ಸಿಗಲಿ: ಬಿ.ಬಿ. ಕಾವೇರಿ

Published:
Updated:
Deccan Herald

ಚಾಮರಾಜನಗರ: ‘ಗಡಿ ಜಿಲ್ಲೆಯ ಗಿರಿಜನರಿಗೂ ಅಂಚೆ ಪಾವತಿ ಬ್ಯಾಂಕ್‌ನ ಸವಲತ್ತುಗಳು ದೊರೆತರೆ, ಎಲ್ಲ ಬಗೆಯ ಜನರಿಗೂ ಸೌಲಭ್ಯ ದೊರೆತಂತೆ ಆಗುತ್ತದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಶನಿವಾರ ಹೇಳಿದರು.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ಅಂಚೆ ಪಾವತಿ ಬ್ಯಾಂಕ್‌ (ಐಪಿಪಿಬಿ) ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ ಅಂಚೆ ಲಕೋಟೆ ಮೂಲಕ ಸುದ್ದಿಗಳು ಬಿತ್ತರವಾಗುತ್ತಿದ್ದ ಸಂದರ್ಭದಲ್ಲಿ ಅಂಚೆ ಕಾಗದ ತೆರೆದು ಓದುವುದೇ ಖುಷಿಯ ಸಂಗತಿಯಾಗಿತ್ತು. ಅದರಲ್ಲಿನ ಖುಷಿ ಈಗಿನ ಇಂಟರ್‌ನೆಟ್‌, ಈ ಮೇಲ್‌ನಲ್ಲಿ ಸಿಗುತ್ತಿಲ್ಲ. ಇದರಿಂದ ಸಂಬಂಧಗಳಲ್ಲಿನ ಸಂವಹನ ಪ್ರಕ್ರಿಯೆಗಳು ಕಣ್ಮರೆಯಾಗಿವೆ. ಆದರೆ, ಆಧುನಿಕತೆಗೆ ಹೊಂದಿಕೊಳ್ಳುವ ಅನಿವಾರ್ಯತೆಯಿಂದ ಬದಲಾಗಬೇಕಿದೆ’ ಎಂದು ಹೇಳಿದರು.

‘ಅಂಚೆ ಇಲಾಖೆಯಲ್ಲಿ ಬ್ಯಾಂಕಿಂಗ್‌ ಸೇವೆ ಸಿಗುತ್ತಿರುವುದು ಕ್ರಾಂತಿಕಾರಕ ಬದಲಾವಣೆ. ಪಟ್ಟಣ ಮಾತ್ರವಲ್ಲದೆ ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೇವೆ ತಲುಪುವಂತೆ ನೌಕರರು ಕರ್ತವ್ಯ ನಿರ್ವಹಿಸಬೇಕು. ಈ ಸೇವೆಯಲ್ಲಿ ಸ್ಪರ್ಧೆಯ ಅವಶ್ಯಕತೆ ಇಲ್ಲ. ಸೇವಾ ಕಾರ್ಯ ಮುಖ್ಯವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ‘ಬ್ರಿಟಿಷರು ಬಿಟ್ಟು ಹೋಗಿರುವ ಇಂಡಿಯನ್‌ ಪೋಸ್ಟ್‌ ವ್ಯವಸ್ಥೆಯಿಂದ ಹೆಚ್ಚಿನ ಅನುಕೂಲಗಳು ಆಗುತ್ತಿವೆ. ಆಧುನಿಕತೆಯ ಸವಾಲಿರುವ ಕ್ಷೇತ್ರದಲ್ಲಿ ಅಂಚೆ ಇಲಾಖೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಬದಲಾವಣೆಗೊಂಡಿರುವುದು ಶ್ಲಾಘನೀಯ’ ಎಂದರು.

‘ಅಂಚೆ ಇಲಾಖೆಯ ಸಿಬ್ಬಂದಿಯಿಂದ ಗುಣಮಟ್ಟದ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ಇಲಾಖೆಯ ಸಿಬ್ಬಂದಿಯ ಮನಃಸ್ಥಿತಿಗಳು ಆಧುನಿಕತೆಗೆ ಒಗ್ಗಿಕೊಳ್ಳಬೇಕು. ಇಂದಿನ ಬ್ಯಾಂಕಿಂಗ್‌ ಕ್ಷೇತ್ರದ ವೇಗಕ್ಕೆ ಒತ್ತು ನೀಡಬೇಕು. ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಅಂಚೆ ಇಲಾಖೆಯ ಸಿಬ್ಬಂದಿ ಸೇವೆಯಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ ತೋರಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರೆತು, ಅವನು ಸಂತೋಷಗೊಂಡರೆ ಸೇವೆಗೆ ಸಾರ್ಥಕ್ಯ ದೊರೆಯಲಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕ ಎಚ್‌.ಸಿ. ಸದಾನಂದ, ಚಾಮರಾಜನಗರ ವಿಭಾಗದ ಮ್ಯಾನೇಜರ್‌ ಮಾನುಸ್‌ ಸಿ. ಜಾರ್ಜ್‌ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !