ಶೌಚಾಲಯ ಬಂದ್‌: ರೈತರ ಪ್ರತಿಭಟನೆ

7
ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮಸ್ಯೆ; ತಾಂಡವಾಡುತ್ತಿದೆ ಅನೈರ್ಮಲ್ಯ

ಶೌಚಾಲಯ ಬಂದ್‌: ರೈತರ ಪ್ರತಿಭಟನೆ

Published:
Updated:
ರೈತ ಸಂಘದ ಪ್ರತಿನಿಧಿಗಳು ಯಳಂದೂರು ಪಟ್ಟಣ ಪಂಚಾಯಿತಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು

ಯಳಂದೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಂದ್‌ ಮಾಡಿರುವುದನ್ನು ಖಂಡಿಸಿ ರೈತ ಸಂಘದ ಪ್ರತಿನಿಧಿಗಳು ಪಟ್ಟಣ ಪಂಚಾಯಿತಿ ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಇದನ್ನು ನಿರ್ವಹಣೆ ಮಾಡಲಾಗುತ್ತದೆ. ಆದರೆ, ಕಳೆದ ಒಂದು ವಾರದಿಂದ ಶೌಚಾಲಯದ ಬಾಗಿಲನ್ನು ಬಂದ್‌ ಮಾಡಲಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘ಬಸ್ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಪ್ರವಾಸಿ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ಬರುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದರೆ, ಶೌಚಾಲಯ ತೆರೆಯದ ಕಾರಣ, ಬಯಲು ಬಹಿರ್ದೆಸೆಗೆ ಹೋಗುವ ಸ್ಥಿತಿ ಇದೆ. ಮಹಿಳೆಯರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣವೂ ಸೇರಿದಂತೆ ಹಲವೆಡೆ ಇರುವ ಎಲ್ಲಾ ಶೌಚಾಲಯಗಳು ಬಳಕೆಯಾಗದೆ ಬಂದ್ ಆಗಿವೆ. ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಟ್ಯಾಂಕಿದ್ದರೂ ಬಳಕೆಯಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ. ಪಾದಚಾರಿ ಮಾರ್ಗವನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆ ಆಗಿದೆ ಎಂದು ದೂರಿದರು.

ಮುಖ್ಯಾಧಿಕಾರಿ ಎಸ್. ಉಮಾಶಂಕರ ಮಾತನಾಡಿ, ‘ಬಸ್ ನಿಲ್ದಾಣದ ಶೌಚಾಲಯದ ಪೈಪ್ ಒಡೆದಿದೆ. ಇದು ಸದಾ ಜನದಟ್ಟಣೆ ಪ್ರದೇಶ. ಹೀಗಾಗಿ ಇಂದು ರಾತ್ರಿ ಪೈಪ್ ಹಾಕಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಅಂಬಳೆ ಶಿವಪ್ರಸಾದ್, ಚಂದ್ರಶೇಖರ್, ವೆಂಕಟರಾಮು, ವೃಷಭೇಂದ್ರ, ಮಹಾದೇವಪ್ಪ, ಗುರುವೆಂಕಟರಾಮು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !