ರಾಜ್ಯ ವಿಭಜನೆ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

7

ರಾಜ್ಯ ವಿಭಜನೆ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಚಾಮರಾಜನಗರ: ರಾಜ್ಯದ ವಿಭಜನೆಗೆ ಸಂಬಂಧಿಸಿದ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ಪಟ್ಟಣದ ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗದಲ್ಲಿ ಬುಧವಾರ ಉರುಳುಸೇವೆ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯ ವಿಭಜನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಅಂಗಿ ತೆಗೆದು ಬರಿ ಮೈಯಲ್ಲಿ ಉರುಳು ಸೇವೆ ಮಾಡಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ‘ಇತ್ತೀಚಿನ ದಿನಗಳಲ್ಲಿ ಕೆಲ ರಾಜಕಾರಣಿಗಳು ರಾಜ್ಯ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪಟ್ಟಭದ್ರ ಹಿತಾಶಕ್ತಿಗಳು ಇದಕ್ಕೆ ಬೆಂಬಲ ನೀಡುತ್ತಿವೆ. ಅಖಂಡ ಕರ್ನಾಟಕವನ್ನು ಉಳಿಸುವುದು ನಮ್ಮೆಲ್ಲರ ಗುರಿಯಾಗಿದೆ. ಲಕ್ಷಾಂತರ ಜನರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣಗೊಂಡು ಅಖಂಡ ರಾಝ್ಯ ರಚನೆಯಾಗಿದೆ. ಯಾವುದೋ ಕುಂಟನೆಪ ಹೇಳಿಕೊಂಡು ಕರ್ನಾಟಕ ವಿಭಜನೆಯ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ’ ಎಂದರು.

‘ಕರ್ನಾಟಕ ವಿಭಜನೆ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ, ಸರ್ಕಾರ ತಕ್ಷಣವೇ ಆ ಭಾಗದ ಸಮಗ್ರ ಅಭಿವೃದ್ದಿಗಾಗಿ ಕ್ರಮ ಕೈಗೊಳ್ಳಬೇಕು. ರಾಜ್ಯ ವಿಭಜನೆಯ ವಿಷಬೀಜ ಬಿತ್ತಲು ಹೊರಟಿರುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೊಳ್ಳಬೇಕು, ಅವರನ್ನು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

ಸೇನಾಪಡೆಯ ಗೌರವ ಅಧ್ಯಕ್ಷ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿರಾಜು, ಚಾ.ಹ. ಶಿವರಾಜ್, ಗು.ಪುರುಷೋತ್ತಮ, ತಾಂಡವಮೂರ್ತಿ, ಎಂ.ಶಿವು, ವೀರಭದ್ರ, ಶಿವಶಂಕರ್, ಚಾ.ಸಿ.ಸಿದ್ದರಾಜು, ನಾಗರಾಜ್ ಟೈಲರ್ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !