ಶೌಚಾಲಯಕ್ಕೆ ಒತ್ತಾಯಿಸಿ ಪ್ರತಿಭಟನೆ

7

ಶೌಚಾಲಯಕ್ಕೆ ಒತ್ತಾಯಿಸಿ ಪ್ರತಿಭಟನೆ

Published:
Updated:
ಶೌಚಾಲಯ ನಿರ್ಮಿಸಲು ಒತ್ತಾಯಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು‌ ನಗರಸಭೆ ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ

ಚಾಮರಾಜನಗರ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ತಕ್ಷಣ ಶೌಚಾಲಯಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ನಗರಸಭೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಇರುವ ಶೌಚಾಲಯಗಳನ್ನೂ ಮುಚ್ಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಗರ ಸಭೆಯ ಅಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್‌ ವಾಜಪೇಯಿ, ‘ಪಟ್ಟಣದ ಪ್ರಮುಖ ಸ್ಥಳ, ವಾರ್ಡ್‌ಗಳಲ್ಲಿ ಶೌಚಾಲಯಗಳಿಲ್ಲದೇ ಜನರಿಗೆ ತೊಂದರೆಯಾಗುತ್ತಿದೆ. ನಗರಸಭೆಯು ತಕ್ಷಣ 50 ಶೌಚಾಲಯಗಳನ್ನು ನಿರ್ಮಿಸಬೇಕು. ಮುಚ್ಚಿರುವ ಶೌಚಾಲಯಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಬೇಡಿಕೆಗಳನ್ನು 15 ದಿನಗಳ ಒಳಗಾಗಿ ಈಡೇರಿಸದಿದ್ದರೆ ಚಾಮರಾಜನಗರ ಬಂದ್‌ಗೆ ಕರೆ ಕೊಡುತ್ತೇವೆ’ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ  ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಸತ್ಯಮೂರ್ತಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.

‘ನಗರಸಭೆಯ 26 ಸ್ಥಳಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈಗಾಗಲೇ ಎರಡು ಬಾರಿ ಟೆಂಡರ್‌ ಕರೆದರೂ ಯಾರೂ ಬಂದಿಲ್ಲ. ನಾಲ್ಕು ಕಡೆಗಳಲ್ಲಿ ನಿರ್ಮಿಸಲಷ್ಟೇ ಸಂಸ್ಥೆಗಳು ಮುಂದೆ ಬಂದಿವೆ. ಜಿಎಸ್‌ಟಿ ದರ ಹೆಚ್ಚಿರುವ ಕಾರಣಕ್ಕೆ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಯೋಜನೆಯ ವೆಚ್ಚವನ್ನು ಮರು ನಿಗದಿ ಮಾಡಿ ಮತ್ತೊಮ್ಮೆ ಟೆಂಡರ್‌ ಕರೆಯಲು ಸಿದ್ಧತೆ ನಡೆಸಲಾಗಿದೆ’ ಎಂದು ಸತ್ಯಮೂರ್ತಿ ಭರವಸೆ ನೀಡಿದರು.

ಈಗ ಮುಚ್ಚಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಮಾತಿನ ಚಕಮಕಿ: ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಧಿಕಾರಿಗಳು ಮಾತ್ರವಲ್ಲದೇ ನಗರಸಭಾ ಸದಸ್ಯರ ವಿರುದ್ಧವೂ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸದಸ್ಯರನ್ನು 420 ಎಂದು ಉಲ್ಲೇಖಿಸಿದರು.

ಸಾಮಾನ್ಯಸಭೆಗೆ ಹಾಜರಾಗಲು ಬರುತ್ತಿದ್ದ ಕೆಲವು ಸದಸ್ಯರು ಇದರಿಂದ ಕೆರಳಿ ಪ್ರತಿಭಟನಾಕಾರರೊಂದಿಗೆ ವಾಗ್ವಾದಕ್ಕಿಳಿದರು. ಒಂದು ಸಂದರ್ಭದಲ್ಲಿ ಪರಿಸ್ಥಿತಿ ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಗರಸಭೆಯ ಸಾಮಾನ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ನೀವು ಮಾಡುವ ತಪ್ಪಿನಿಂದಾಗಿ ನಾವು ಹೊರಗಡೆ ಹೀನಾಯವಾಗಿ ಬೈಯಿಸಿಕೊಳ್ಳಬೇಕು’ ಎಂದು ಅಸಮಾಧಾನ ಹೊರಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !