ವರುಣನ ಅಪ್ಪುಗೆಯಲ್ಲಿ ಅರಳಿದ ಸಸ್ಯಲೋಕ

6
ಹಿಂಗಾರು ಮಳೆಯ ಆಗಮನ, ತರುಲತೆಗಳಿಗೆ ಮತ್ತಷ್ಟು ಸಂಭ್ರಮ

ವರುಣನ ಅಪ್ಪುಗೆಯಲ್ಲಿ ಅರಳಿದ ಸಸ್ಯಲೋಕ

Published:
Updated:
Deccan Herald

ಯಳಂದೂರು: ಜಿಲ್ಲೆಗೆ ಹಿಂಗಾರು ಮಳೆಯ ಆಗಮನವಾಗಿದೆ. ಬಿಸಿಲು ಮೋಡಗಳ ಕಣ್ಣಮುಚ್ಚಾಲೆಯ ನಡುವೆ ಭೂಮಿಯಲ್ಲಿ ಹೊಸ ಸಸ್ಯಲೋಕವೊಂದು ಸೃಷ್ಟಿಯಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಬೀಸುವ ಮಾರುತ ಮತ್ತು ವರುಣನ ಕಣ್ಣಾಮುಚ್ಚಾಲೆಯ ನಡುವೆ ಬಿಸಿಲ ಅಪ್ಪುಗೆಗೆ ಕಾಯುವ ತರುಲತೆಗಳನ್ನು ವೀಕ್ಷಿಸುವುದೇ ಚೆಂದ. 

ತಾಲ್ಲೂಕು ಮಾತ್ರವಲ್ಲ ಜಿಲ್ಲೆಯಾದ್ಯಂತ ಕೆರೆ ಕಟ್ಟೆ, ಅಣೆಕಟ್ಟೆ, ನದಿ ತೊರೆ, ಪುಟ್ಟ ಸರೋ‌ವರಗಳ ಬದಿಯಲ್ಲಿ ಈಗ ಅಂದ ಚಂದದ ಅನಾಮಧೇಯ ಕುಸುಮಗಳು ಮುಂಜಾನೆಯಿಂದಲೇ ಅರಳಿ ನಗುತ್ತಿರುತ್ತವೆ. ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳು, ಮೂಲಿಕೆಗಳು ನಮ್ಮ ಸುತ್ತಮುತ್ತ ಈ ಸಮಯಯಲ್ಲಿ ಹೆಚ್ಚು ಕಾಣ ಸಿಗುತ್ತವೆ. ಆಹಾರವೋ, ಇಲ್ಲ ಔಷಧದ ಉದ್ದೇಶಕ್ಕಾಗಿ ಇವುಗಳನ್ನು ಸಂಗ್ರಹಿಸುತ್ತಿರುವ ಜನರೂ ಕಂಡು ಬರುತ್ತಾರೆ.

ಸೌಂದರ್ಯ ಬಿಚ್ಚಿಡುವ ಸಸ್ಯವರ್ಗ: ‘ಔಷಧೀಯ ಸಸ್ಯಗಳನ್ನು ಈಗ ಹೆಚ್ಚೆಚ್ಚು ಕಾಣಬಹುದು. ಕೆಲವುಗಳನ್ನು ಸ್ಥಳೀಯ ಹೆಸರಿನಿಂದಲೇ ಗುರುತಿಸಲಾಗಿದೆ. ಬೇದಿಸೊಪ್ಪು ಮತ್ತು ಒಂದೆಲಗವನ್ನು ಈಗ ಎಲ್ಲೆಡೆ ಇವೆ. ಪೊದೆಗಳ ನಡುವೆ ತ್ವಚೆಯ ಆರೋಗ್ಯ ವೃದ್ಧಿಸುವ ಹೂಗಳು ಕೂಡ ಕಾಣಸಿಗುತ್ತವೆ. ಕ್ಯಾಕ್ಟಸ್‌ನಂತಹ ಪ್ರಭೇದಗಳು ಹತ್ತಾರು ವರ್ಷಗಳ ನಂತರ ತೆನೆ ಅಗಲಿಸಿದಾಗ ಸುಂದರವಾಗಿ ಕಾಣಿಸುತ್ತವೆ. ಇವು ಬಹು ಉಪಯೋಗಿ ಆಯರ್ವೇದ ಸಸ್ಯವರ್ಗ. ಇವು ಮುಂಜಾನೆ ಅರಳಿ ಸಂಜೆ ವೇಳೆಗೆ ತಮ್ಮ ಸೌಂದರ್ಯ ಕಳೆದುಕೊಳ್ಳುತ್ತವೆ’ ಎನ್ನುತ್ತಾರೆ ಅಶೋಕ ಪರಿಸರ ಸಂರಕ್ಷಣಾ ಸಂಸ್ಥೆಯ ಡಾ.ಸಿ. ಮಾದೇಗೌಡ.

 ‘ಹಲವು ಸಸ್ಯಗಳ ಬೇರು, ತೊಗಟೆ, ಎಲೆ, ಬೀಜಗಳನ್ನು ಮದ್ದಿನಂತೆ ಬಳಸಬಹುದು. ಅಂತಹ ಗಿಡಗಳು ಈ ಸಮಯದಲ್ಲಿ ಹೆಚ್ಚಿರುತ್ತವೆ. ಯಾವುದು ಔಷಧದ ಗಿಡ, ಯಾವುದನ್ನು ಆಹಾರವಾಗಿ ಬಳಸಬೇಕು, ಯಾವ ಹೊತ್ತಿನಲ್ಲಿ ಕೊಯ್ಯಬಹುದು ಎಂಬುದರ ಬಗ್ಗೆ ಜನರಿಗೆ ಸರಿಯಾದ ಅರಿವಿರಬೇಕು. ಉದಾಹರಣೆಗೆ ದೊಂಬೆಡ್ಡ, ಮಾಲೆ, ಹರಿವೆ ಸೊಪ್ಪನ್ನು ಬಿಸಿಲು ಬಿದ್ದ ನಂತರವೇ ಕೊಯ್ಯಬೇಕು. ಮಳೆ ಸಾಸಿವೆ, ಮಳೆ ತೊಗರಿಯನ್ನು ಹೂ ಇರುವಾಗ ಆರಿಸಿಕೊಳ್ಳಬೇಕು. ತೊಂಡೆ ಜಾತಿಗೆ ಸೇರಿದ ಅಪ್ಪುಗೆ ಸಸ್ಯಗಳನ್ನು ಸಾಂಬಾರಿಗೆ ಬಳಸಬಹುದು’ ಎಂದು ನಾಟಿ ವೈದ್ಯೆ ಹೊಸಪೋಡಿನ ಜಡೇಮಡ್ಡಿ ವಿವರಿಸುತ್ತಾರೆ.

ತರಹೇವಾರಿ ಸಸ್ಯಗಳು

ತಾಲ್ಲೂಕಿನ 20ಕ್ಕೂ ಹೆಚ್ಚು ಕೆರೆಗಳ ಸುತ್ತ ಈಗ ಹತ್ತಾರು ಸಸ್ಯ ಪ್ರಭೇದಗಳು ಕಾಣಸಿಗುತ್ತವೆ. ಒನಗೊನೆ, ಗಣಿಕೆ, ಕೀರೆ, ಎಳೆ ಸಾಸಿವೆ ಸೊಪ್ಪನ್ನು ಎಳೆ ಬಿಸಿಲು ತಗಲಿದ ನಂತರ ಸಂಗ್ರಹಿಸಬೇಕು. ಈಗ ತುಂತುರು ಮಳೆ ಸುರಿಯುತ್ತಿರುತ್ತದೆ. ತೇವಾಂಶ ಇರುವ ಕಡೆ ಮೂರು ನಾಲ್ಕು ದಿನಕ್ಕಾಗುವಷ್ಟು ಪೌಷ್ಟಿಕಾಂಶಯುಕ್ತ ಸೊಪ್ಪು, ಹೂಗಳನ್ನು ಶೇಖರಿಸಬಹುದು ಎಂದು ಹೇಳುತ್ತಾರೆ ಕೆಸ್ತೂರಿನ ದೊಡ್ಡಮ್ಮ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !