ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ ನೆಮ್ಮದಿ ಸಾರುತ್ತಿರುವ ಬಾಂದಾರಗಳು!

ತಾಲ್ಲೂಕಿನಲ್ಲಿ ಧಾರಾಕಾರ ಮಳೆ; ಅಂತರ್ಜಲ ವೃದ್ಧಿ; ಕೃಷಿಗೆ ನೀಗಿದ ನೀರಿನ ಬವಣೆ
Last Updated 12 ಜೂನ್ 2018, 11:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಳೆದ ಎರಡು ವಾರಗಳಿಂದ ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಳ್ಳಗಳಿಗೆ ಕಟ್ಟಿರುವ ಬಾಂದಾರಗಳು ಭರ್ತಿಯಾಗಿವೆ.

ಮಾಗಡಿಯಿಂದ ಬಟ್ಟೂರು, ಪುಟಗಾಂವ್ ಬಡ್ನಿ, ಹುಲ್ಲೂರು, ಬೂದಿಹಾಳ, ಕೊಕ್ಕರಗುಂದಿ, ಕೊಂಚಿಗೇರಿ ಮೂಲಕ ಹರಿದು ಕೊನೆಗೆ ಇಟಗಿ ಸಾಸಲವಾಡದ ಹತ್ತಿರ ತುಂಗಭದ್ರಾ ನದಿ ಸೇರುವ ದೊಡ್ಡ ಹಳ್ಳದ 10ಕ್ಕೂ ಹೆಚ್ಚು ಬಾಂದಾರಗಳ ಒಡಲ ತುಂಬ ನೀರು ತುಂಬಿಕೊಂಡು ನೀರ ನೆಮ್ಮದಿಯನ್ನು ಸಾರುತ್ತಿವೆ.

ಪ್ರತಿ ಮಳೆಗಾಲದಲ್ಲಿ ಈ ಹಳ್ಳದ ಮೂಲಕ ಹರಿಯುವ ಲಕ್ಷಾಂತರ ಲೀಟರ್‌ ನೀರು ವ್ಯರ್ಥವಾಗಿ ಹರಿದು ತುಂಗಭದ್ರಾ ನದಿ ಸೇರುತ್ತಿತ್ತು. ಬಾಂದಾರ ಕಟ್ಟಿದ ನಂತರ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದು ಈ ಭಾಗದ ರೈತರಿಗೆ ಕೃಷಿಗೆ ವರದಾನವಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 14 ಬಾಂದಾರಗಳನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಈ ವರ್ಷ ಸುರಿದ ಭಾರಿ ಮಳೆಗೆ ಎಲ್ಲ ಬಾಂದಾರಗಳು ಮೈದುಂಬಿಕೊಂಡಿದ್ದು, ರೈತರಲ್ಲಿ ಸಂತಸ ಮೂಡಿದೆ.

ಅಂತರ್ಜಲ ವೃದ್ಧಿ: ಹಳ್ಳಕ್ಕೆ ಬಾಂದಾರ ಕಟ್ಟುವ ಮೊದಲು ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದು ರೈತರ ಕೊಳವೆ ಬಾವಿಗಳು ಒಣಗಿ ಹೋಗಿದ್ದವು. ಈ ಹಳ್ಳಕ್ಕೆ ಅಲ್ಲಲ್ಲಿ ಕಟ್ಟಿದ ಬಾಂದಾರಿನಿಂದ ಅಂತರ್ಜಲ ಪ್ರಮಾಣ ವೃದ್ಧಿಯಾಗಿದ್ದು, ರೈತರ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.

‘ಮಳಿ ಇಲ್ಲದೆ ಹಳ್ಳ ಒಣಗಿ ರೈತರ ಬೋರ್‌ವೆಲ್‌ನಲ್ಲಿ ನೀರು ಬಾಳ ಕಡಿಮಿ ಆಗಿತ್ರೀ. ಆದರ ಮಳಿ ಬಂದು ಎಲ್ಲಾ ಬಾಂದಾರ ತುಂಬಿ ಹರದಾವು. ಬಾಂದಾರ ಕಟ್ಟಿದ ಮ್ಯಾಲೆ ಬೋರ್‍ನಾಗ ನೀರ ಬಂದೇತ್ರೀ' ಎಂದು ಸಮೀಪದ ಪುಟಗಾಂವ್‌ ಬಡ್ನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶಗೌಡ ಪಾಟೀಲ ಖುಷಿಯಿಂದ ಹೇಳಿದರು.

‘ನಮ್ಮ ಹೊಲದಾನ ಬೋರ್ ಒಣಗಿತ್ರೀ. ಆದರೀಗ ಬಾಂದಾರ ತುಂಬಿ ಬೋರ್‍ನಾಗ ಚಲೋ ನೀರು ಬಂದೇತಿ' ಎಂದು ಕೊಕ್ಕರಗುಂದಿ ಗ್ರಾಮದ ವೀರನಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದರು.

ನಾಗರಾಜ ಎಸ್. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT