ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮೆರೆದ ಸಾರ್ವಜನಿಕರು

ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಗೆ ನೆರವು
Last Updated 30 ಮೇ 2018, 11:34 IST
ಅಕ್ಷರ ಗಾತ್ರ

ಕುಷ್ಟಗಿ: ಆಕೆ ತಾಯಿ ಇಲ್ಲದ ತಬ್ಬಲಿ. ಸಂದಿವಾತದಿಂದ ಕಳೆದ ಐದಾರು ತಿಂಗಳಿನಿಂದ ನೆಲಬಿಟ್ಟು ಎದ್ದಿಲ್ಲ. ಪಟ್ಟಣದಲ್ಲಿ  ಸಂಬಂಧಿಗಳಿದ್ದರೂ ಹತ್ತಿರ ಸುಳಿದಿಲ್ಲ. ಸ್ನಾನ ಮಾಡಿ ಎಷ್ಟೋ ತಿಂಗಳು ಕಳೆದಿವೆ. ಜಿಡ್ಡುಗಟ್ಟಿದ ತಲೆ, ಕೃಶದೇಹ, ಸ್ಥಳದಲ್ಲಿಯೇ ನಿತ್ಯಕರ್ಮ. ಅನಾರೋಗ್ಯದಿಂದ ಬಳಲುತ್ತಿರುವ ತಂದೆ. ಆ ಯುವತಿಯದ್ದು ಅಕ್ಷರಶಃ ನರಕಯಾತನ..

ಪಟ್ಟಣದ ವಿದ್ಯಾನಗರದಲ್ಲಿ ಒಂದು ಚಿಕ್ಕ ಮನೆಯಲ್ಲಿ ದಿಕ್ಕಿಲ್ಲದಂತೆ ಜೀವ ಹಿಡಿದಿರುವ ಪೂಜಾ ಈರಣ್ಣ ಯಾದಗಿರಿ ಎಂಬ ಯವತಿಯ ಸ್ಥಿತಿ ಇದು.

ಯಾರ ಕಾಳಜಿಯೂ ಇಲ್ಲದೆ ಅನಾರೋಗ್ಯದ ನಡುವೆಯೂ ದ್ವಿತೀಯ ಪಿಯುಸಿ ಮುಗಿಸಿರುವ ಪೂಜಾ ಐದಾರು ತಿಂಗಳಿನಿಂದ ಸಂದಿವಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾಲು, ಕೈಗಳು ಬೆಂಡಾಗಿದ್ದರೂ ಮಾನಸಿಕ ಆರೋಗ್ಯ ಕೆಟ್ಟಿಲ್ಲ. ಆದರೆ, ಕೆಲ ತಿಂಗಳಿನಿಂದ ಈಕೆ ಹೊರ ಜಗತ್ತಿನ ಸಂಪರ್ಕಕ್ಕೆ ಬಂದಿಲ್ಲ.

ಪೂಜಾ ಅವರ ತಂದೆ ಈರಣ್ಣ ಅವರಿಗೆ ಒಂದು ಮನೆ ಮಾತ್ರ ಇದೆ. ಕೂಡಿಟ್ಟ ಒಂದಷ್ಟು ಹಣವನ್ನು ಬೇರೆಯವರಿಗೆ ನೀಡಿದ್ದು ಅದರಿಂದ ಬರುವ ಅಲ್ಪಸ್ವಲ್ಪ ಮಾಸಿಕ ಬಡ್ಡಿಯಲ್ಲಿಯೇ ಇವರಿಬ್ಬರ ಜೀವನ ನಡೆಯಬೇಕು. ಇಬ್ಬರೂ ಹಾಸಿಗೆ ಹಿಡಿದಿರುವುದರಿಂದ ಒಂದು ರೀತಿಯ ಸಂಕಷ್ಟದ ಸ್ಥಿತಿ. ತಾನೇ ಅನಾರೋಗ್ಯಕ್ಕೀಡಾದ ಕಾರಣ ಮಗಳನ್ನು ನೋಡಿಕೊಳ್ಳಲು ಈರಣ್ಣ ಅವರಿಗೆ ಕಷ್ಟವಾಗುತ್ತಿದೆ ಎಂದು ಅಲ್ಲಿಯ ನಿವಾಸಿಗಳು ಮಾಹಿತಿ ನೀಡಿದರು.

ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಪುರಸಭೆ ಸದಸ್ಯ ಕಲ್ಲೇಶ ತಾಳದ ಅವರಿಗೆ ಪೂಜಾ ಅವರ ಸ್ಥಿತಿ ಗಮನಕ್ಕೆ ಬಂದಿದೆ. ತಂದೆ ಈರಣ್ಣ ಯಾದಗಿರಿ ಅವರ ಜೊತೆಯಲ್ಲಿಯೇ ಕಲ್ಲೇಶ ಮತ್ತು ಅವರ ಸ್ನೇಹಿತ ಆರ್‌.ಟಿ.ಸುಬಾನಿ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಸಹಕಾರದಿಂದ ಆಸ್ಪತ್ರೆ ಸಿಬ್ಬಂದಿ ಸ್ನಾನ ಮಾಡಿಸಿದರು. ಕಲ್ಲೇಶ ತಾಳದ ಹೊಸ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ.

ಬಾಲಕಿಯ ರಕ್ತ ತಪಾಸಣೆ ನಡೆಸಲಾಗಿದ್ದು, ಸಂದಿವಾತ ಬಿಟ್ಟರೆ ಯಾವುದೇ ರೀತಿಯ ಕಾಯಿಲೆಗಳಿಲ್ಲ ಎಂಬುದನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ಕರೆತರುವಾಗ ಜೊತೆಯಲ್ಲಿದ್ದ ತಂದೆ ನಾಪತ್ತೆಯಾಗಿದ್ದು ಎಲ್ಲಿದ್ದಾರೊ ಗೊತ್ತಿಲ್ಲ. ಮುಂದೆ ಅವರಿಗೆ ಯಾರು ದಿಕ್ಕು  ಎಂಬ ಪ್ರಶ್ನೆ ಎದುರಾದಾಗ ಆಕೆಯನ್ನು ಜಿಲ್ಲಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಸೂಕ್ತ ಚಿಕಿತ್ಸೆಗೆ ನೆರವಾಗುವುದಲ್ಲದೆ ಕೇಂದ್ರದ ಮೂಲಕ ಆಕೆಯ ಭವಿಷ್ಯದ ಕಾಳಜಿ ವಹಿಸುವುದಾಗಿ ತಾಲ್ಲೂಕು ಸಾಂತ್ವನ ಕೇಂದ್ರದ ವಿಜಯಲಕ್ಷ್ಮಿ ತಿಳಿಸಿದ್ದಾರೆ ಎಂದು ಕಲ್ಲೇಶ ತಾಳದ ಅವರು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಇನ್ನರ್‌ವೀಲ್‌ ಕ್ಲಬ್‌ನ ಅಧ್ಯಕ್ಷೆ ಪ್ರಭಾ ಬಂಗಾರಶೆಟ್ಟರ, ಪ್ರಮುಖರಾದ ಡಾ.ಪಿ.ಎಂ.ಪಾರ್ವತಿ, ವೀರೇಶ ಬಂಗಾರಶೆಟ್ಟರ ಅವರು ಯುವತಿಗೆ ನೆರವು  ನೀಡಲಾಗುವುದು ಎಂದು ಹೇಳಿದರು.

**
ಪೂಜಾ ಅವರ ಸ್ಥಿತ ಕಂಡು ಸಾರ್ವಜನಿಕರು ನೆರವಿನ ಹಸ್ತ ಚಾಚುತ್ತಿರುವುದನ್ನು ಗಮನಿಸಿದರೆ ನಾಗರಿಕರಲ್ಲಿ ಮಾನವೀಯತೆ ಇದೆ ಎಂಬುದನ್ನು ನಿರೂಪಿಸಿದೆ
ಕಲ್ಲೇಶ ತಾಳದ, ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT