ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಂದ್‌ಗೆ ನೀರಸ ಪ್ರತಿಕ್ರಿಯೆ

ತಿಪಟೂರು ನಗರದಲ್ಲಿ ಮಾತ್ರ ಅಂಗಡಿ, ಹೋಟೆಲ್‌ಗಳು ಬಂದ್, ಪಾವಗಡದಲ್ಲಿ ಹೆದ್ದಾರಿ ತಡೆದ ಕಾರ್ಯಕರ್ತರು
Last Updated 29 ಮೇ 2018, 9:51 IST
ಅಕ್ಷರ ಗಾತ್ರ

ತುಮಕೂರು: ಜೆಡಿಎಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಸೋಮವಾರ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಿಪಟೂರು ನಗರದಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಿಪಟೂರಿನಲ್ಲಿ ಅಂಗಡಿ, ಹೋಟೆಲ್‌ಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಬಸ್, ಆಟೊ ಸಂಚಾರ ಎಂದಿನಂತೆ ಇತ್ತು. ತುಮಕೂರು ನಗರದ ಬಿಜಿಎಸ್ ವೃತ್ತ ಹಾಗೂ ಪಾವಗಡ ತಾಲ್ಲೂಕಿನ ಚಳ್ಳಕೆರೆ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕೆಲ ಕಾಲ ರಸ್ತೆ ತಡೆ ನಡೆಸಿದರು. ನಗರದಲ್ಲಿ ಜನಜೀವನ ಎಂದಿನಂತಿತ್ತು.

ಧರಣಿ ನಿರತರ ಬಂಧನ: ಬಿಜಿಎಸ್ ವೃತ್ತದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಮಾನವ ಸರಪಳಿ ರೂಪಿಸಿ ಪ್ರತಿಭಟಿಸಿದರು. ಇದರಿಂದ ವಾಹನ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಗಿತ್ತು.

ಮುಖಂಡರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕೊಟ್ಟ ಮಾತಿನಂತೆ ನಡೆಯದ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಮುಂದುವರಿಸಲು ಪ್ರಯತ್ನಿಸಿದಾಗ ಪೊಲೀಸರು ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದರು.

ಹಿರಿಯ ಮುಖಂಡ ಜಿ.ಎಸ್.ಬಸವರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಬಾಕ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ, ನಗರ ಘಟಕದ ಅಧ್ಯಕ್ಷ ಸಿ.ಎನ್.ರಮೇಶ್, ಮಹಾನಗರ ಪಾಲಿಕೆ ಸದಸ್ಯ ನಾಗಣ್ಣ ಬಾವಿಕಟ್ಟೆ, ವೆಂಕಟೇಶ್, ಜಿಲ್ಲಾ ಘಟಕ ಉಪಾಧ್ಯಕ್ಷ ಟಿ.ಆರ್.ಸದಾಶಿವಯ್ಯ, ಕಾರ್ಯದರ್ಶಿ ರುದ್ರೇಶ್, ಖಜಾಂಚಿ ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯ ಮುನಿಯಪ್ಪ, ಮುಖಂಡರಾದ ಎಚ್.ಎಂ.ರವೀಶ್, ಕೊಪ್ಪಲ್ ನಾಗರಾಜ್, ನಿರಂಜನ್, ಮಂಜುಳಾ ಆದರ್ಶ್, ಮಲ್ಲಿಕಾರ್ಜುನ ಹೆಬ್ಬಾಕ, ಟಿ.ಎಚ್.ಹನುಮಂತರಾಜು, ನಯಾಜ್ ಅಹಮದ್, ಶಬ್ಬೀರ್ ಅಹಮದ್, ಫರ್ಜಾನಾ, ಜ್ಯೋತಿ ತಿಪ್ಪೇಸ್ವಾಮಿ, ರಾಧಾ ಗಂಗಾಧರ್, ಭಾರತಿ ರಾಜ್, ಸಿದ್ದರಾಜುಗೌಡ, ಸಂದೀಪ್‌ ಗೌಡ, ಹರೀಶ್, ವರದರಾಜ್, ವಿಷ್ಣುವರ್ಧನ್, ರಮೇಶ್, ರಕ್ಷಿತ್, ಗಣೇಶ್, ರವಿ ಚೆಂಗಾವಿ, ಶಂಭುಲಿಂಗಸ್ವಾಮಿ, ರೇಣು, ಆಟೊ ಶಿವಕುಮಾರ್, ಜಗದೀಶ್, ಶಂಕರ್ ಪುರುಷೋತ್ತಮ್ ಇದ್ದರು.

ನೀರಸ ಪ್ರತಿಕ್ರಿಯೆ

ಮಧುಗಿರಿ: ಬಂದ್‌ಗೆ ಮಧುಗಿರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲ್ಲೂಕು ಹಾಗೂ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಕೆಎಸ್ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊ, ಕಾರು, ಅಂಗಡಿ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಸರ್ಕಾರದ ವಿರುದ್ಧ ಘೋಷಣೆ

ಗುಬ್ಬಿ: ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಮುಖಂಡರು ಬಸ್ ನಿಲ್ದಾಣದ ಬಳಿ ಪ್ರತಿಭಟನಾ ನಿರತರು ಜಮಾಯಿಸಿ ಧಿಕ್ಕಾರ ಕೂಗಿದರು. ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷ ಅ.ನ.ಲಿಂಗಪ್ಪ ನೇತೃತ್ವ ವಹಿಸಿದ್ದರು. ಎಸ್.ವಿಜಯ್ ಕುಮಾರ್, ಯೋಗೀಶ್, ಅಣ್ಣಪ್ಪಸ್ವಾಮಿ, ಪ್ರಸನ್ನಕುಮಾರ್, ಉಮೇಶ್, ಚಂದ್ರಮೌಳಿ, ಬಸವರಾಜು, ಹಿತೇಶ್ ಇದ್ದರು.

ರಸ್ತೆ ತಡೆದು ಪ್ರತಿಭಟನೆ

ಪಾವಗಡ: ಬಂದ್‌ಗೆ ತಾಲ್ಲೂಕಿನಾ ದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿ ಬಿಜೆಪಿ ಕಾರ್ಯಕರ್ತರು ಕಲ್ಯಾಣದುರ್ಗ, ಚಳ್ಳಕೆರೆ ರಸ್ತೆ ತಡೆದು ಪ್ರತಿಭಟಿಸಿದರು. ಯಾವುದೇ ವಾಹನಗಳು ಸಂಚರಿಸದಂತೆ ಕಲ್ಲು, ಕಟ್ಟಿಗೆಗಳನ್ನು ಅಡ್ಡ ಹಾಕಿದರು.

ಪಟ್ಟಣ ಠಾಣೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಬಂದು, ‘ನ್ಯಾಯಾಲಯದ ಆದೇಶದಂತೆ ರಸ್ತೆ ತಡೆ ನಡೆಸುವಂತಿಲ್ಲ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಿ’ ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಳಿಗ್ಗೆ ರಸ್ತೆ ತಡೆ ಮಾಡಿದ್ದನ್ನು ಹೊರತು ಪಡಿಸಿದರೆ, ವಾಹನಗಳು, ಬಸ್‌ಗಳು ಎಂದಿನಂತೆ ಸಂಚರಿಸಿದವು. ತರಕಾರಿ, ಕುರಿ ಸಂತೆ ಮೇಲೆ ಬಂದ್ ಪರಿಣಾಮ ಬೀರಲಿಲ್ಲ.

ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಸೂರ್ಯನಾರಾಯಣ್, ದವಡಬೆಟ್ಟ ಪೂಜಾರಪ್ಪ, ಅರುಣ್, ಕರಿಯಣ್ಣ, ಚಂದ್ರಾನಾಯ್ಕ, ಬ್ಯಾಡ ನೂರು ಶಿವು, ಹರೀಶ್, ಮದೂಶ್, ಅಪ್ಪಾಜಿಹಳ್ಳಿ ಅನಿಲ್, ಗುರು, ಶೇಖರ್ ಬಾಬು, ಅಮಿತ್ ಇದ್ದರು.

ಕಿವಿಗೊಡಲಿಲ್ಲ

ಕೊರಟಗೆರೆ: ಬಂದ್‌ಗೆ ಕೊರಟಗೆರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ ಹಾಗೂ ಕಾರ್ಯಕರ್ತರು ಬೆಳಿಗ್ಗೆಯೇ ಬಂದ್ ಬೆಂಬಲಿಸುವಂತೆ ಆಟೊದಲ್ಲಿ ಪ್ರಚಾರ ಮಾಡಿದರಾದರೂ ಸಾರ್ವಜನಿಕರು ಮಾತ್ರ

ಕಿವಿಗೊಡಲಿಲ್ಲ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಕಾರ್ಯದರ್ಶಿ ಸ್ವಾಮಿ, ಮುಖಂಡರಾದ ರಂಗರಾಜು, ಬಿ.ಕೆ.ಗುರುದತ್, ಮೆಡಿಕಲ್ ಕುಮಾರ್, ಪ್ರಸನ್ನ, ಮೋಹನ್, ಸುಮನ್, ದೇವರಾಕಿ, ಅಜಯ್, ಗಂಗಣ್ಣ, ವಿಜಯ್ ಇದ್ದರು.

ರೈತ ವಿರೋಧಿ ಸರ್ಕಾರ

ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿ ರುವ ಎಚ್.ಡಿ. ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ. ಅವರ ಸರ್ಕಾರ ರೈತ ವಿರೋಧಿಯಾಗಿದೆ. ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಶಾಸಕ ಮತ್ತು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಒತ್ತಾಯಿಸಿದರು.

‘ಬಿಜೆಪಿ ರೈತರ ಪರವಾಗಿದೆ. ಸಾಲ ಮನ್ನಾ ಮಾಡುವವರೆಗೂ ಪಕ್ಷ ಹೋರಾಟ ನಡೆಸಲಿದೆ. ಇಂದಿನ ಹೋರಾಟ ಕೇವಲ ಸಾಂಕೇತಿಕವಾದುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT