ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆ ಪ್ರಕರಣ; ನಾಲ್ವರು ಎಸ್‌ಐಟಿ ಕಸ್ಟಡಿಗೆ

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗಾಗಿ 10 ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ.

ಗೌರಿ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಭಗವಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಮಾಹಿತಿಯನ್ನು ಪತ್ತೆ ಹಚ್ಚಿದ್ದರು. ಆ ಸಂಬಂಧ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಎಂಬಾತನನ್ನು ಇತ್ತೀಚೆಗಷ್ಟೇ ಬಂಧಿಸಿದ್ದರು.

ಬಂಧಿತ ನಾಲ್ವರನ್ನೂ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು. ‘ಗೌರಿ ಲಂಕೇಶ್ ಹತ್ಯೆಯಲ್ಲೂ ಆರೋಪಿಗಳ ಕೈವಾಡವಿರುವ ಅನುಮಾನವಿದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. 13 ದಿನ ಕಸ್ಟಡಿಗೆ ನೀಡಬೇಕು’ ಎಂದು ಎಸ್‌ಐಟಿ ಅಧಿಕಾರಿಗಳು ಕೋರಿದರು.

ವಾದ ಆಲಿಸಿದ ನ್ಯಾಯಾಲಯ, 10 ದಿನಗಳವರೆಗೆ ಮಾತ್ರ ಆರೋಪಿಗಳನ್ನು ಕಸ್ಟಡಿಗೆ ನೀಡಿತು.

ಮಂಡ್ಯ, ಗೋವಾಕ್ಕೆ ಕರೆದೊಯ್ಯಲಿರುವ ಎಸ್‌ಐಟಿ; ಗೌರಿ ಹತ್ಯೆ ಸಂಬಂಧ ಕೆ.ಟಿ.ನವೀನ್‌ ಕುಮಾರ್‌ ಎಂಬಾತನನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ ಆರೋಪಿಗಳಿಗೂ ನವೀನ್‌ಗೂ ಸಂಬಂಧವಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ.

ಕಸ್ಟಡಿಗೆ ಪಡೆದಿರುವ ನಾಲ್ವರನ್ನೂ ಎಸ್‌ಐಟಿ ಅಧಿಕಾರಿಗಳು, ಮಂಡ್ಯ ಹಾಗೂ ಗೋವಾ ಸೇರಿದಂತೆ ಹಲವು ಸ್ಥಳಗಳಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಜತೆಗೆ, ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ದಾದಾ ಅಲಿಯಾಸ್ ನಿಹಾಲ್ ಎಂಬಾತನನ್ನು ಎಸ್‌ಐಟಿ ಪತ್ತೆ ಮಾಡುತ್ತಿದೆ.

ಒಟ್ಟಾಗಿಯೇ ಹತ್ಯೆಗೆ ಸಂಚು

‘ಕಸ್ಟಡಿಗೆ ಪಡೆದಿರುವ ನಾಲ್ವರು ಆರೋಪಿಗಳು, ನವೀನ್‌ ಕುಮಾರ್‌ ಜತೆ ಸೇರಿ ಗೌರಿ ಹತ್ಯೆಗೂ ಸಂಚು ರೂಪಿಸಿದ್ದರು ಎಂಬುದಕ್ಕೆ ಕೆಲ ಪುರಾವೆಗಳು ಸಿಕ್ಕಿವೆ. ಅವುಗಳನ್ನೇ ನ್ಯಾಯಾಲಯಕ್ಕೆ ಕೊಟ್ಟು, ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಅವುಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಗೌರಿ ಹತ್ಯೆಯಲ್ಲಿ ನಾಲ್ವರೂ ಆರೋಪಿಗಳ ಪಾತ್ರ ಏನು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ’ ಎಂದಿವೆ.

*  ಗೌರಿ ಲಂಕೇಶ್ ಪ್ರಕರಣದಲ್ಲಿ ವಿಚಾರಣೆ ನಡೆಸಲು ಈ ನಾಲ್ವರನ್ನು ಕಸ್ಟಡಿಗೆ ಪಡೆದಿದ್ದೇವೆ. ಈ ಪ್ರಕರಣದಲ್ಲಿ ಅವರೇ ಆರೋಪಿಗಳು ಎಂದು ಈಗಲೇ ಹೇಳಲಾಗದು

– ಬಿ.ಕೆ.ಸಿಂಗ್, ಎಸ್‌ಐಟಿ ಮುಖ್ಯಸ್ಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT