ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಚಿತ್ತ ರಾಜ್ಯಪಾಲರತ್ತ: ಅಧಿಕಾರ ಸೂತ್ರ ಹಿಡಿಯಲು ‘ಮೈತ್ರಿ’ ಕಸರತ್ತು?

Last Updated 15 ಮೇ 2018, 10:22 IST
ಅಕ್ಷರ ಗಾತ್ರ

ಬೆಂಗಳೂರು: ಮತ ಎಣಿಕೆ ‍ಪ್ರಕ್ರಿಯೆ ಮುಂದುವರಿಯುತ್ತಿರುವಾಗ 114 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದ ಬಿಜೆಪಿ, ಸ್ಪಷ್ಟ ಬಹುಮತ ಪಡೆದು ಅಧಿಕಾರ ಸೂತ್ರ ಹಿಡಿಯುವ ಸಂಭ್ರಮದಲ್ಲಿತ್ತು.

ಆದರೆ, ಮುನ್ನಡೆಯಲ್ಲಿದ್ದ ಸ್ಥಾನಗಳ ಸಂಖ್ಯೆ ಬಹುತಮಕ್ಕೆ ಅಗತ್ಯವಾದ ‘ಮ್ಯಾಜಿಕ್‌ ಸಭೆ 113’ ಕ್ಕಿಂತಲೂ ಕೆಳಗಿಳಿದು 104ರಲ್ಲಿ ಬಂದು ನಿಲ್ಲುತ್ತಿದ್ದಂತೆ ಪಕ್ಷದ ಆಂತರಿಕ ವಲಯದಲ್ಲಿ ಕಾರ್ಮೋಡ ಆವರಿಸಿದೆ.

ಕಾಂಗ್ರೆಸ್‌ 77 ಮತ್ತು ಜೆಡಿಎಸ್‌ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಎರಡೂ ಪಕ್ಷಗಳು ‘ಮೈತ್ರಿ’ಗೆ ಮುಂದಾದರೆ ಬಹುಮತಕ್ಕೆ ಅಗತ್ಯವಾದ ಸಂಖ್ಯೆ (113) ದಾಟುತ್ತದೆ. ಈ ಮಧ್ಯೆ, ಜೆಡಿಎಸ್‌ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ನಡೆಸಲು ಕಾಂಗ್ರೆಸ್‌ ಹಿರಿಯ ನಾಯಕರು ಪ್ರಯತ್ನ ಆರಂಭಿಸಿದ್ದಾರೆ.

ಈ ಹಿಂದೆ ಗೋವಾದಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಬಹುಮತಕ್ಕೆ ಅಗತ್ಯ ಸಂಖ್ಯೆ ಸಿಗದೇ ಇದ್ದಾಗ ಇತರ ಪಕ್ಷಗಳ ಜೊತೆ ಮಾತುಕತೆ ಮಾಡಲು ವಿಳಂಬವಾದ ಕಾರಣ ಕಾಂಗ್ರೆಸ್‌ಗೆ ಅಧಿಕಾರ ಕೈ ತಪ್ಪಿತ್ತು. ಅಲ್ಲಿ ಬಿಜೆಪಿ ನಾಯಕರು ಚಾಣಾಕ್ಷತನ ಪ್ರದರ್ಶಿಸಿ ಅಧಿಕಾರ ಹಿಡಿಯಲು ಸಫಲರಾಗಿದ್ದರು. ಕರ್ನಾಟಕದಲ್ಲಿ ಆ ರೀತಿ ಆಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್‌ ತಕ್ಷಣವೇ ಎಚ್ಚೆತ್ತುಕೊಂಡಿದೆ ಎಂದು ಗೊತ್ತಾಗಿದೆ.

ಈ ಮಧ್ಯೆ, ಬಿಜೆಪಿ ಕೂಡಾ ಹೊಂದಾಣಿಕೆ ರಾಜಕೀಯಕ್ಕೆ ಮುಂದಾಗಿದ್ದು, ದೆಹಲಿಯಲ್ಲಿರುವ ಪಕ್ಷದ ಹಿರಿಯ ನಾಯಕ ಸಂದೇಶಕ್ಕೆ ಕಾಯುತ್ತಿದೆ. ಜೆಡಿಎಸ್‌ ಜೊತೆ ಮೈತ್ರಿ ಕುದುರಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರೂ ಒಲವು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಸಭೆಯ 224 ಸ್ಥಾನಗಳ ಪೈಕಿ ಚುನಾವಣೆ 222 ಸ್ಥಾನಗಳಿಗೆ ನಡೆದಿದೆ. ವಿಧಾನಸಭೆಯಲ್ಲಿರುವ ಒಟ್ಟು ಸ್ಥಾನಗಳನ್ನು ಪರಿಗಣಿಸಿದರೆ ಬಹುಮತಕ್ಕೆ 113 ಸ್ಥಾನಗಳು ಅಗತ್ಯವಾಗಿದೆ. ಆದರೆ ಈಗಿನ ಸ್ಥಿತಿಯಲ್ಲಿ 222ರ ಅರ್ಧಕ್ಕಿಂತ ಹೆಚ್ಚು ಅಂದರೆ 112 ಸ್ಥಾನಗಳ ಅಗತ್ಯವಿದೆ. ಹೈಕೋರ್ಟ್‌ನ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರ ಪ್ರಕಾರ, ಒಟ್ಟು ಸ್ಥಾನಗಳನ್ನು (224 ) ಪರಿಗಣಿಸಿ, ಬಹುಮತ ತೋರಿಸಿ ಅಧಿಕಾರ ರಚನೆಗೆ ಅವಕಾಶ ಕೋರಬೇಕಿದೆ.

‘ಇದೀಗ ಎಲ್ಲರ ಚಿತ್ತ ರಾಜ್ಯಪಾಲರತ್ತ ನೆಟ್ಟಿದೆ. ಅವರು ತಮ್ಮ ವಿವೇಚನಾ ಅಧಿಕಾರ ಬಳಸಬೇಕಿದ್ದು, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬಹುದು ಅಥವಾ ಚುನಾವಣೆ ನಂತರ ಮೈತ್ರಿ ಮಾಡಿಕೊಂಡು ಅಗತ್ಯ ಸಂಖ್ಯಾ ಬಲ ತೋರಿಸುವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು’ ಎನ್ನುತ್ತಾರೆ ಕಾನೂನು ಕಾಲೇಜು ಪ್ರಾಂಶುಪಾಲ ಕೆ.ಎನ್‌. ವಿಶ್ವನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT