ಅಕ್ಕಿ ಉಚಿತ, ತರಬೇಕಾದರೆ ಖರ್ಚು ₹100, 8 ಕಿ.ಮೀ ದೂರದಲ್ಲಿ ನ್ಯಾಯಬೆಲೆ ಅಂಗಡಿ

7
ಕಂಚಗಳ್ಳಿ, ಪುಟ್ಟೀರಮ್ಮನದೊಡ್ಡಿ ಗಿರಿಜನ ಹಾಡಿಗಳ ಜನರ ಕಷ್ಟ ಕೇಳುವವರಿಲ್ಲ

ಅಕ್ಕಿ ಉಚಿತ, ತರಬೇಕಾದರೆ ಖರ್ಚು ₹100, 8 ಕಿ.ಮೀ ದೂರದಲ್ಲಿ ನ್ಯಾಯಬೆಲೆ ಅಂಗಡಿ

Published:
Updated:
Deccan Herald

ಹನೂರು: ‘ಸ್ವಾಮಿ, ತಿಂಗಳಿಗೆ ಕೊಡೋ ಅಕ್ಕಿ ತಗಳಾಕ ಕೂಲಿ ಕೆಲಸ ಬಿಟ್ಟು ₹100 ಖರ್ಚು ಮಾಡ್ಕಂಡ್ 8 ಮೈಲಿ ದೂರ ಹೋಗ್ಬೇಕು. ಅದು ತಿಂಗಳ ಮೊದಲ ವಾರದಲ್ಲಿ ಹೋದ್ರ ಮಾತ್ರ ಅಕ್ಕಿ ಕೊಡ್ತಾರ. ಒಂದೆರಡು ದಿನ ತಡವಾದ್ರೆ ಅಕ್ಕಿ ತೀರೋಗಿದೆ... ಮುಂದಿನ ತಿಂಗಳು ಬಾ ಅಂತಾರ’ ಎಂದು ಕಂಚಗಳ್ಳಿ ದೊಡ್ಡಿ ಹಾಡಿಯ ಮಸಣಮ್ಮ ಅಳಲು ತೋಡಿಕೊಂಡರು.

ಇದು ಮಸಣಮ್ಮ ಅವರ ಅಳಲಷ್ಟೇ ಅಲ್ಲ, ತಾಲ್ಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಹುಲಿರಕ್ಷಿತಾರಣ್ಯದ ತಪ್ಪಲಿನಲ್ಲಿರುವ ಕಂಚಗಳ್ಳಿ, ಪುಟ್ಟೀರಮ್ಮನದೊಡ್ಡಿ ಗಿರಿಜನ ಹಾಡಿಯ ನಿವಾಸಿಗಳ ಅಳಲು. ಅನ್ನಭಾಗ್ಯದ ಅಕ್ಕಿ ಪಡೆಯಲು ಇಲ್ಲಿನ ಜನರು ಪ್ರತಿ ತಿಂಗಳು ಐದಾರು ಮೈಲಿ ದೂರವಿರುವ ಕಾಮಗೆರೆಗೆ ಅಲೆಯಬೇಕು.

ಈ ಎರಡು ಪೋಡುಗಳಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂ‌ದಿವೆ. ತಾಲ್ಲೂಕಿನ ಇತರೆ ಗಿರಿಜನ ಹಾಡಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆದು ಸ್ಥಳದಲ್ಲೇ ಪಡಿತರ ವಿತರಿಸಲಾಗುತ್ತಿದೆ. ಅದರಂತೆ ತಮ್ಮ ಹಾಡಿಯಲ್ಲೂ ಸರ್ಕಾರ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹ.

ಅಕ್ಕಿ ತರಲು ಬೇಕು ದುಡ್ಡು: ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಸರ್ಕಾರಿ ಪ್ರತಿ ಬಿಪಿಎಲ್ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಅದನ್ನು ಪಡೆಯಲು ಇಲ್ಲಿನ ನಿವಾಸಿಗಳು ₹100 ಖರ್ಚು ಮಾಡಬೇಕಿದೆ. ಹಾಡಿಯಿಂದ 7 ಕಿ.ಮೀ ದೂರವಿರುವ ಕಾಮಗೆರೆಯಿಂದ ಅಕ್ಕಿಯನ್ನು ಹೊತ್ತು ತರುವ ಅನಿವಾರ್ಯ ಇಲ್ಲಿನವರಿಗೆ ಇದೆ.

ಯುವಕರು, ಮಹಿಳೆಯರೂ ಹೇಗೋ ಕಷ್ಟಪಟ್ಟು ತರುತ್ತಾರೆ. ಆದರೆ ವೃದ್ಧರು ಏನು ಮಾಡಬೇಕು? ಅಕ್ಕಿ ಉಚಿತ ಸಿಕ್ಕಿದರೂ ಅದನ್ನು ದುಡ್ಡು ಖರ್ಚು ಮಾಡಿ ಆಟೊಗಳಲ್ಲಿ ತರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳುತ್ತಾರೆ ಬಸಮ್ಮ.

ಮತಗಟ್ಟೆ ಇದೆ, ನ್ಯಾಯಬೆಲೆ ಅಂಗಡಿ ಇಲ್ಲ

ಚುನಾವಣೆಗಳಲ್ಲಿ ಹಾಡಿ ನಿವಾಸಿಗಳಿಗೆ ಮತದಾನ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಗುಂಡಾಲ್‌ ಜಲಾಶಯಕ್ಕೆ ಹೊಂದಿಕೊಂಡಂತೆ ಮತಗಟ್ಟೆ ತೆರೆಯಲಾಗಿದೆ. ಆದರೆ, ಹತ್ತಿರದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ.

‘ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಎಂದು ದಶಕದಿಂದಲೂ ಮನವಿ ಮಾಡುತ್ತಾ ಬಂದಿದ್ದೇವೆ. ಈಗಾಗಲೇ ಸೂಳೆಕೋಬೆ, ಉದ್ಧಟಿ ಮುಂತಾದ ಹಾಡಿಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗಿದೆ. ಎರಡು ಹಾಡಿಗಳಲ್ಲಿ 130 ಪಡಿತರ ಚೀಟಿಗಳಿವೆ. ಅದರಂತೆ ಇಲ್ಲೂ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಅಧಿಕಾರಿಗಳನ್ನು ಮನವಿ ಮಾಡಿದರೆ, 200 ಕಾರ್ಡ್‌ಗಳಿಗಿಂತ ಹೆಚ್ಚು ಇದ್ದಲ್ಲಿ ಮಾತ್ರ ನ್ಯಾಯಬೆಲೆ ಅಂಗಡಿ ತೆರೆಯಬಹುದು ಎಂದು ಹೇಳುತ್ತಾರೆ. ಅಧಿಕಾರಿಗಳಿಗೆ ನಮ್ಮ ಮೇಲೆ ಅನುಕಂಪ ಬರಲು, ನಾವು ಇನ್ನು ಎಷ್ಟು ವರ್ಷ ಅಕ್ಕಿಗಾಗಿ ಮೈಲಿಗಟ್ಟಲೆ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಹಾಡಿಯ ಮಾದೇವ ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !