ಹೀಗೊಂದು ಮಾದರಿ ಆಶ್ರಮ ವಸತಿ ಶಾಲೆ!

7
ಜೀರಿಗೆಗದ್ದ ಶಾಲೆಯಲ್ಲಿ ಸುಂದರ ಕೈತೋಟ, ಸುಸಜ್ಜಿತ ಕಟ್ಟಡ

ಹೀಗೊಂದು ಮಾದರಿ ಆಶ್ರಮ ವಸತಿ ಶಾಲೆ!

Published:
Updated:
ಹನೂರು ತಾಲ್ಲೂಕಿನ ಜೀರಿಗೆಗದ್ದೆಯಲ್ಲಿರುವ ಗಿರಿಜನ ಆಶ್ರಮ ವಸತಿ ಶಾಲೆ

ಹನೂರು: ಸರ್ಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುವ ಪ್ರಸ್ತುತ ಸಂದರ್ಭದಲ್ಲಿ ಅತ್ಯುತ್ತಮ ನಿರ್ವಹಣೆಯ ಮೂಲಕ ಪ್ರಕೃತಿ ಮಡಿಲಿನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಜೀರಿಗೆಗದ್ದ ಆಶ್ರಮ ವಸತಿ ಶಾಲೆ.

ಸಮಾಜದ ಕಟ್ಟ ಕಡೆಯ ಸಮುದಾಯದ ಜನರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ತೆರೆಯಲಾದ ಆಶ್ರಮ ವಸತಿ ಶಾಲೆಗಳು ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ತಾಲ್ಲೂಕಿನ ಜೀರಿಗೆಗದ್ದೆಯಲ್ಲಿರುವ ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಿಕೊಡುವುದರ ಮೂಲಕ ಮಾದರಿ ವಸತಿ ಶಾಲೆಯಾಗಿ ಹೊರಹೊಮ್ಮಿದೆ.

ಈಚೆಗೆ ಶಾಲೆಗೆ ಬೇಟಿ ನೀಡಿದ್ದ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಬಿ. ಫೌಜಿಯಾ ತರನ್ನುಮ್‌ ಅವರು ಶಾಲಾ ವಾತಾವರಣ ಹಾಗೂ ವಸತಿ ನಿಲಯದ ನಿರ್ವಹಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸುಸಜ್ಜಿತ ಕಟ್ಟಡ ಹಾಗೂ ಸಮರ್ಪಕ ಸೌಲಭ್ಯ ಹೊಂದಿರುವ ಈ ಶಾಲೆಯಲ್ಲಿ 55 ಮಕ್ಕಳು ಕಲಿಯುತ್ತಿದ್ದಾರೆ. ಯರಗಬಾಳು, ಮಾವತ್ತೂರು, ಉದ್ಧಟಿ, ಜೀರಿಗೆಗದ್ದೆ ಹಾಗೂ ಕೌಳಿಹಳ್ಳಕಟ್ಟೆ ಗಿರಿಜನ ಹಾಡಿಗಳ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಒಂದನೇ ತರಗತಿಗೆ ಜೀರಿಗೆಗದ್ದೆ ಹಾಗೂ ಮಾವತ್ತೂರು ಗ್ರಾಮಗಳಿಂದ ಮಾತ್ರ ಮಕ್ಕಳು ಬರುವುದರಿಂದ ಈಚೆಗೆ ದಾಖಲಾತಿ ಸಂಖ್ಯೆ ಕೊಂಚ ಕ್ಷೀಣಿಸಿದೆ.

ಉತ್ತಮ ಪರಿಸರ: ಆಕರ್ಷಕವಾದ ಕೈತೋಟ ಹಾಗೂ ತರಗತಿ ಮುಂಭಾಗದಲ್ಲಿ ನೆಡಲಾಗಿರುವ ಸುಂದರವಾದ ಗಿಡಗಳು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಶಾಲಾ ಆವರಣದಲ್ಲಿ ಅಗತ್ಯವಿರುವ ತರಕಾರಿ, ಹಣ್ಣು, ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೈ ತೋಟದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಇರುವ ವಿದ್ಯಾರ್ಥಿಗಳನ್ನೇ ವಿವಿಧ ತಂಡಗಳಾಗಿ ರಚಿಸಿ ಕೈ ತೋಟದ ನಿರ್ವಹಣಾ ಜವಾಬ್ದಾರಿ ವಹಿಸಲಾಗಿದೆ. ಪ್ರತಿನಿತ್ಯ ಒಂದೊಂದು ತಂಡದವರು ಗಿಡಗಳಿಗೆ ನೀರು ಹಾಕಿ ಪೋಷಿಸಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಶಾಲಾ ಆವರಣದಲ್ಲಿ ಖಾಲಿಯಿರುವ ಸ್ಥಳಗಳಲ್ಲಿ ಗಿಡ ನೆಡುವುದು, ಪ್ರತಿನಿತ್ಯ ಶ್ರಮದಾನ ಮಾಡುವುದು ಮುಂತಾದವುಗಳನ್ನು ಸ್ವಯಂಪ್ರೇರಿತರಾಗಿ ಮಾಡುತ್ತಾರೆ ಎಂದು ನಿಲಯ ಪಾಲಕ ಸಿದ್ದರಾಜು ಹೇಳಿದರು.

ಹಾಸ್ಟೆಲ್‌ನಲ್ಲಿ ಈ ಹಿಂದೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಮಕ್ಕಳೆಲ್ಲಾ ಸಂಜೆಯಾಗುತ್ತಲೇ ಮನೆಗೆ ಬರುತ್ತಿದ್ದರು. ಆದರೆ, ಈ ಬಾರಿ ಇಲಾಖೆಯು ಉತ್ತಮ ಮಲಗುವ ಕೊಠಡಿ, ಉತ್ತಮ ಆಹಾರ... ಮುಂತಾದ ಅಗತ್ಯ ಸೌಲಭ್ಯ ಕಲ್ಪಿಸಿರುವುದರಿಂದ ಮಕ್ಕಳೆಲ್ಲಾ ವಸತಿ ಶಾಲೆಯಲ್ಲಿಯೇ ಉಳಿಯುವಂತಾಗಿದೆ. ಒಂದನೇ ತರಗತಿ ಮಕ್ಕಳು ಮಾತ್ರ ಸಂಜೆಯಾಗುತ್ತಲೇ ಮನೆಗೆ ಬರುತ್ತಾರೆ. ಪುನಃ ಬೆಳಿಗ್ಗೆ ಶಿಕ್ಷಕರೇ ಬಂದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. 5ನೇ ತರಗತಿ ಬಳಿಕ ಮಕ್ಕಳನ್ನು ಬೇರೆ ಶಾಲೆಗೆಳಿಗೆ ಸೇರಿಸಬೇಕಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ನಾಗರಿಕ ಸಮಾಜದಿಂದ ದೂರ ಉಳಿದಿದ್ದ ಬುಡಕಟ್ಟು ಸಮುದಾಯಕ್ಕೆ ಈ ಆಶ್ರಮ ವಸತಿ ಶಾಲೆ ಒಂದು ಹೊಸ ಆಶಾಕಿರಣವನ್ನು ಮೂಡಿಸಿದೆ. ಶಿಕ್ಷಣ ಎಂಬ ಪರಿಕಲ್ಪನೆಯೇ ಅರಿವಿಲ್ಲದ ಸಮುದಾಯವೊಂದು ಇಂದು ವಿದ್ಯಾಭ್ಯಾಸಕ್ಕೆ ಮುಂದಾಗಿರುವುದಕ್ಕೆ ಸಂತಸವಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !