ಮಕ್ಕಳಿಗೆ ಸರಳ ವಿಜ್ಞಾನ ಕಲಿಸಬೇಕು: ಪ್ರೊ.ಜಿ.ಎಸ್.ಜಯದೇವ

7
ದೀನಬಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರಿ ವಿಜ್ಞಾನಿಗಳ ಕಲರವ

ಮಕ್ಕಳಿಗೆ ಸರಳ ವಿಜ್ಞಾನ ಕಲಿಸಬೇಕು: ಪ್ರೊ.ಜಿ.ಎಸ್.ಜಯದೇವ

Published:
Updated:
Deccan Herald

ಚಾಮರಾಜನಗರ: ಸರಳವಾದ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಪೂರ್ಣ ಮಾಹಿತಿಗಳೊಂದಿಗೆ ಮಕ್ಕಳಿಗೆ ತಿಳಿ ಹೇಳುವ ಕೆಲಸ ಶಾಲೆಗಳಲ್ಲಿ ಆಗಬೇಕು ಎಂದು ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಹೇಳಿದರು.

ಪಟ್ಟಣದ ರಾಮಸಮುದ್ರ ಸಮೀಪವಿರುವ ದೀನಬಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಮಕ್ಕಳಿಗೆ ಅತ್ಯಗತ್ಯ. ವಿಜ್ಞಾನವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಅದರ ಅವಶ್ಯಕತೆ ಏನು ಎಂಬುದು ಗೊತ್ತಾಗುತ್ತದೆ. ಸರಳ ವಿಜ್ಞಾನ ಕಲಿಸಲು ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ಮುಂದಾಗಬೇಕು ಎಂದು ಅವರು ಹೇಳಿದರು.

ಮಕ್ಕಳ ಸೃಜನಶೀಲ ಕಲಿಕೆಗೆ ಪೂರಕವಾದ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಬೇಕು. ಶಾಲೆಗೆ ಮಕ್ಕಳೇ ಮುಖ್ಯವಾಗುತ್ತಾರೆ. ಮಕ್ಕಳನ್ನೇ ಮುಖ್ಯವಾಗಿಸುವ ಶಾಲೆ ಉನ್ನತ ಮಟ್ಟಕ್ಕೆ ಏರುತ್ತದೆ. ಅಲ್ಲಿ ಶಿಕ್ಷಣ ವ್ಯವಸ್ಥೆ ಪರಿಪೂರ್ಣತೆ ಪಡೆದುಕೊಳ್ಳುತ್ತದೆ. ಎಲ್ಲ ಶಾಲೆಗಳಲ್ಲಿ ಇಂತಹ ಕಲಿಕಾ ವಿಧಾನಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಮಾತನಾಡಿ, ‘ಮಕ್ಕಳು ಎಳೆ ವಯಸ್ಸಿನಲ್ಲಿ ಪ್ರಯೋಗ ಹಾಗೂ ಇನ್ನಿತರ ಕಲಿಕಾ ವಿಧಾನಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ಜಿಲ್ಲೆಯಲ್ಲಿ ಮಕ್ಕಳಿಗೆ ಅಂತಃಕರಣ ಶಿಕ್ಷಣ ನೀಡುತ್ತಿರುವ ಇಂತಹ ಶಿಕ್ಷಣ ಸಂಸ್ಥೆ ಇರುವುದು ಹೆಮ್ಮೆಯ ಸಂಗತಿ. ಇದೊಂದು ಕಿರು ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಂದ ಕಡಿಮೆ ವೆಚ್ಚದಲ್ಲಿ ವಿಜ್ಞಾನ ಮಾದರಿ ಹಾಗೂ ಪ್ರಯೋಗ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ವಿಜ್ಞಾನ ಮೇಳ: ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಜಯದೇವ ಅವರ ಜನ್ಮದಿನದ (ಆಗಸ್ಟ್‌ 30) ಅಂಗವಾಗಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ವಿಜ್ಞಾನ ಮೇಳ ಆಯೋಜಿಸುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವ ಪರಿಪಾಠ ಮುಂದುವರಿದಿದೆ. 9 ವರ್ಷಗಳಿಂದ ಇಲ್ಲಿ ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ವಿಜ್ಞಾನ ಮೇಳ ನಡೆಯುತ್ತಿದೆ.

ಶಾಲೆಯ 4ನೇ ತರಗತಿಯಿಂದ 10ನೇ ತರಗತಿಯ ಶೇ 90ರಷ್ಟು ಮಕ್ಕಳು 100ಕ್ಕೂ ಹೆಚ್ಚು ವಿಜ್ಞಾನ ಮಾದರಿ ಹಾಗೂ ಪ್ರಯೋಗಗಳನ್ನು ಮಾಡಿದ್ದರು. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಜೀವ ವಿಜ್ಞಾನ, ಗಾಳಿ, ನೀರು, ಬೆಳಕು, ಶಾಖ ವಿಭಾಗಗಳಲ್ಲಿ ಸಿದ್ಧಪಡಿಸಿದ್ದ ಈ ಮಾದರಿಗಳನ್ನು 10 ಕೊಠಡಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

50ಕ್ಕೂ ಹೆಚ್ಚು ಶಾಲೆಗಳ ಭೇಟಿ: ಜಿಲ್ಲೆಯ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಶಾಲೆ, ಆದರ್ಶ ವಿದ್ಯಾಲಯ, ಜೆಎಸ್‌ಎಸ್‌ ಬಾಲಕರ ಹಾಗೂ ಬಾಲಕಿಯರ ಶಾಲೆಗಳು ಸೇರಿದಂತೆ 50ಕ್ಕೂ ಹೆಚ್ಚು ಶಾಲೆಗಳಿಂದ ಶಿಕ್ಷಕರು ಹಾಗೂ ಮಕ್ಕಳು ಪ್ರಯೋಗಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಶಿಕ್ಷಣ ಸಂಯೋಜಕ ಕುಮಾರ್‌, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿ.ಆರ್. ಹರೀಶ್‌ ಆರಾಧ್ಯ, ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಇದ್ದರು.

‘ಹೆಚ್ಚು ಹಣ ಪಡೆದು ಶಿಕ್ಷಣ ಕೊಡುವ ಪದ್ಧತಿ ಸರಿ ಇಲ್ಲ’

ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮ ಹೆಗ್ಗಳಿಕೆಗೆ ಮಕ್ಕಳ ಬಳಕೆ ಮಾಡಿಕೊಳ್ಳುತ್ತಿರುವ ವ್ಯವಸ್ಥೆ ಉತ್ತಮ ಶಿಕ್ಷಣವಲ್ಲ. ಮಕ್ಕಳಿಗೆ ಆದ್ಯತೆ ನೀಡದೆ ಹೆಚ್ಚು ಹಣ ಪಡೆದು ಶಿಕ್ಷಣ ನೀಡುವಂತಹ ವ್ಯವಸ್ಥೆ ಸರಿ ಇಲ್ಲ. ಶಿಕ್ಷಣ ಸಂಸ್ಥೆಗೆ ಮಕ್ಕಳೇ ಜೀವಾಳ. ಮಕ್ಕಳ ಕಾಳಜಿ, ಭವಿಷ್ಯದ ಕುರಿತು ಚಿಂತಿಸದ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಕಲಿಕೆ ಸಿಗುವುದಿಲ್ಲ ಎಂದು ಜಿ.ಎಸ್.ಜಯದೇವ ಹೇಳಿದರು.

ಆರ್ಥಿಕವಾಗಿ ಹಾಗೂ ಮೂಲ ಸೌಕರ್ಯಗಳಿಂದ ಅಭಿವೃದ್ಧಿ ಹೊಂದಿರುವ ಇಂಟರ್‌ನ್ಯಾಷನಲ್‌ ಸ್ಕೂಲ್‌ಗಳು, ಸಮೀಪದ ಬೇರೆ ಶಾಲೆಗಳ ಉನ್ನತಿಗೆ ಸಹಕರಿಸಬೇಕು. ಸಹಕರಿಸದ ಸ್ಕೂಲ್‌ಗಳಿಗೆ ಸರ್ಕಾರ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !