ಗುರುವಾರ , ಫೆಬ್ರವರಿ 25, 2021
29 °C
ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸಾಲು ಸಾಲು ಹಿನ್ನಡೆ

ಭದ್ರಕೋಟೆ ‘ಕೈ’ ಜಾರುತ್ತಿದೆಯೇ?

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಕಾಂಗ್ರೆಸ್‌ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೈ ಪಕ್ಷದ ಹಿಡಿ‌ತ ಸಡಿಲವಾಗುತ್ತಿದೆಯೇ? 

ನಾಲ್ಕು ತಿಂಗಳ ಹಿಂದೆಯಷ್ಟೇ ನಡೆದಿದ್ದ ವಿಧಾನಸಭಾ ಚುನಾವಣೆ ಮತ್ತು ಈಚೆಗೆ ಮುಕ್ತಾಯಗೊಂಡ ನಗರಸಭಾ ಚುನಾವಣೆಗಳ ಫಲಿತಾಂಶ ಹಾಗೂ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹ ಪ್ರಶ್ನೆ ಸಹಜವಾಗಿ ಏಳುತ್ತದೆ.

ಎರಡೂ ಚುನಾವಣೆಯ ಫಲಿತಾಂಶಗಳು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿರುವುದು ನಿಜ. ಇದನ್ನು ಜಿಲ್ಲೆಯ ಮುಖಂಡರು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ, ಖಾಸಗಿಯಾಗಿ ಮಾತನಾಡುವಾಗ ‘ಹೌದು’ ಎನ್ನುತ್ತಾರೆ.  

2013ರ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು (ಚಾಮರಾಜನಗರ–ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ– ಎಚ್‌.ಎಸ್‌.ಮಹದೇವ ಪ್ರಸಾದ್‌, ಕೊಳ್ಳೇಗಾಲ– ಜಯಣ್ಣ, ಹನೂರು– ಆರ್‌.ನರೇಂದ್ರ). ಈ ಬಾರಿ ಚಾಮರಾಜನಗರ ಮತ್ತು ಹನೂರು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಗುಂಡ್ಲುಪೇಟೆ ಬಿಜೆಪಿ ಪಾಲಾಗಿದ್ದರೆ, ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಗೆದ್ದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕೈ ಪಕ್ಷಕ್ಕೆ ದಕ್ಕಿದ್ದು ಹೀನಾಯ ಸೋಲು.

ಚಾಮರಾಜನಗರದಲ್ಲಿ ಸಿ.ಪುಟ್ಟರಂಗಶೆಟ್ಟಿ ಹಾಗೂ ಹನೂರಿನಲ್ಲಿ ಆರ್‌.ನರೇಂದ್ರ ಅವರು ಈ ಸಲ ವಿಧಾನಸಭೆಗೆ ಮರು ಆಯ್ಕೆ ಆಗಿದ್ದರೂ, ಗೆಲುವಿನ ಅಂತರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

2013ರಲ್ಲಿ ಪುಟ್ಟರಂಗಶೆಟ್ಟಿ ಅವರು ಕೆಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ ಅವರ ವಿರುದ್ಧ 11,196 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಗೆಲುವಿನ ಅಂತರ 4,913 ಮತಗಳಿಗೆ ಕುಸಿದಿದೆ. ಅತ್ತ ಹನೂರಿನಲ್ಲಿ ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿ ಪರಿಮಳ ನಾಗಪ್ಪ ಅವರನ್ನು 11,549 ಮತಗಳಿಂದ ಸೋಲಿಸಿದ್ದ ಆರ್‌. ನರೇಂದ್ರ ಅವರು ಈ ಬಾರಿ ಬಿಜೆಪಿಯ ಪ್ರೀತನ್‌ ನಾಗಪ್ಪ ಅವರ ವಿರುದ್ಧ ಜಯ ಗಳಿಸಿದ್ದರಾದರೂ, ಗೆಲುವಿನ ಅಂತರ 3,513 ಮತಗಳಿಗೆ ಇಳಿದಿದೆ.

ಎಸ್‌ಡಿಪಿಐ ಸವಾಲು: ‘ಪಕ್ಷದ ಕೆಲವು ಮುಖಂಡರು ಕೊನೇ ಕ್ಷಣದಲ್ಲಿ ತಟಸ್ಥರಾಗಿದ್ದರಿಂದ ನನಗೆ ಕಡಿಮೆ ಮತಗಳು ಬಂತು’ ಎಂದು ಪುಟ್ಟರಂಗಶೆಟ್ಟಿ ಅವರು ಫಲಿತಾಂಶದ ಬಳಿಕ ಹೇಳಿಕೆ ನೀಡಿದ್ದರು. ಆದರೆ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಲವಾದ ಏಟು ನೀಡಿರುವ ಎಸ್‌ಡಿಪಿಐ, ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರೆ ‘ಹ್ಯಾಟ್ರಿಕ್‌ ವೀರ’ ಪುಟ್ಟರಂಗಶೆಟ್ಟಿ ಅವರ ಗೆಲುವು ಸುಲಭವಾಗುತ್ತಿರಲಿಲ್ಲ. 

ಚಾಮರಾಜನಗರದ ನಗರಸಭೆ ಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಆರು ವಾರ್ಡ್‌ಗಳಲ್ಲಿ ಗೆದ್ದಿದೆ. ಐದು ವಾರ್ಡ್‌ಗಳಲ್ಲಿ ಅದು ಕಾಂಗ್ರೆಸ್‌ ಅಭ್ಯರ್ಥಿಗಳಿಗೇ ಸೋಲಿನ ರುಚಿ ತೋರಿಸಿದೆ. 

ಚಾಮರಾಜನಗರ ಪಟ್ಟಣದ ವ್ಯಾಪ್ತಿಯ ಏಳು ವಾರ್ಡ್‌ಗಳಲ್ಲಿ ಎಸ್‌ಡಿಪಿಐನ ಏಳು ಅಭ್ಯರ್ಥಿಗಳು 3,765 ಮತಗಳನ್ನು ಪಡೆದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸಿದ್ದರೆ, ಅದು ಗೆಲ್ಲುತ್ತಿರಲಿಲ್ಲ ಎಂಬುದು ನಿಜ. ಆದರೆ, ಕಾಂಗ್ರೆಸ್‌ನ ಕೆಲವು ಮತಗಳನ್ನು ಕಸಿದುಕೊಳ್ಳುತ್ತಿದ್ದುದಂತೂ ಸತ್ಯ. ಒಂದು ವೇಳೆ ಹಾಗಾಗಿದ್ದರೆ, ಸಮೀಪದ ಪ್ರತಿಸ್ಪರ್ಧಿಯಿಂದ 4,913 ಹೆಚ್ಚು ಮತಗಳನ್ನು ಪಡೆದು ಗೆದ್ದಿದ್ದ ಪುಟ್ಟರಂಗಶೆಟ್ಟಿ ಅವರು ಸೋಲುವ ಸಾಧ್ಯತೆಯೇ ಹೆಚ್ಚಿತ್ತು. 

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಸ್‌ಡಿಪಿಐ ಬಯಸಿತ್ತು. ಇದರಿಂದ ಪಕ್ಷಕ್ಕೆ ತೊಂದರೆ ಆಗುತ್ತದೆ ಎಂಬುದನ್ನು ಅರಿತ ಪುಟ್ಟರಂಗಶೆಟ್ಟಿ ಹಾಗೂ ಕಾಂಗ್ರೆಸ್‌ ಮುಖಂಡರು ಎಸ್‌ಡಿಪಿಐ ಮುಖಂಡರ ಮನವೊಲಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದರು.

ನಗರಸಭಾ ಚುನಾವಣೆಯ ಬಳಿಕವೂ, ಎಸ್‌ಡಿಪಿಐ ಒಡ್ಡುತ್ತಿರುವ ಸವಾಲನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

‘ಕಾಂಗ್ರೆಸ್‌ ಬೇರೆ ಅಲ್ಲ; ಎಸ್‌ಡಿಪಿಐ ಬೇರೆ ಅಲ್ಲ. ಅದು ಬಿಜೆಪಿಯೊಂದಿಗೆ ಕೈಜೋಡಿಸಲು ಯಾವತ್ತೂ ಸಾಧ್ಯವಿಲ್ಲ. ಅವರು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಆ ‌ಚುನಾವಣೆಗಳಲ್ಲಿ ಅವರ ಬೆಂಬಲ ನಮಗೇ’ ಎಂದು ಹೇಳಿಕೊಂಡು ಕಾಂಗ್ರೆಸ್‌ ಮುಖಂಡರು ತಿರುಗುತ್ತಿದ್ದಾರೆ. 

ಒಂದು ವೇಳೆ, ಎಸ್‌ಡಿಪಿಐ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದರೆ, ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬುದರ ಅರಿವು ಕೈ ಮುಖಂಡರಲ್ಲಿ ಇದೆ. ಆದರೆ, ಇಲ್ಲಿವರೆಗೆ ಎಸ್‌ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಮಾಡಲು ಅವರು ಯಶಸ್ವಿಯಾಗಿದ್ದಾರೆ. ಅದು ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ನೋಡಬೇಕು.

ಬಿಎಸ್‌ಪಿ ಓಟಕ್ಕೆ ಕಡಿವಾಣ ಸಾಧ್ಯವೇ?: ದಶಕಗಳಿಂದ ಕಾಂಗ್ರೆಸ್‌ ನಿಯಂತ್ರಣದಲ್ಲಿದ್ದ ಕೊಳ್ಳೇಗಾಲದಲ್ಲಿ ಪಕ್ಷದ ಪ್ರಾಬಲ್ಯ ಈಗ ಕುಸಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕೈ ಪಕ್ಷಕ್ಕೆ, ನಗರಸಭೆ ಚುನಾವಣೆಯ ಫಲಿತಾಂಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಎಸ್‌ಪಿ ‘ಆನೆ’ಯ ಓಟವನ್ನು ನಿಯಂತ್ರಿಸಲು ಅದು ಹೆಣಗಾಡುತ್ತಿದೆ.

‘ನಗರಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ನಾವು ಗಳಿಸಿದ್ದೇವೆ. ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಆದರೆ, ಹಿಂದೆ 21 ಸ್ಥಾನಗಳನ್ನು ಹೊಂದಿದ್ದ ಅದು ಈ ಬಾರಿ 10 ವಾರ್ಡ್‌ಗಳನ್ನು ಕಳೆದುಕೊಂಡಿರುವುದರ ಬಗ್ಗೆ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಎನ್‌.ಮಹೇಶ್‌ ಅವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ದಿನೇ ದಿನೇ ಸದೃಢವಾಗುತ್ತಿರುವ ಬಿಎಸ್‌ಪಿಗೆ ಕಡಿವಾಣ ಹಾಕಲು ಕಾಂಗ್ರೆಸ್‌ ರಣತಂತ್ರ ರೂಪಿಸದಿದ್ದರೆ, ಕೊಳ್ಳೇಗಾಲದಲ್ಲಿ ಅದರ ಅಸ್ತಿತ್ವಕ್ಕೇ ಧಕ್ಕೆ ಬರಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಲೋಕಸಭೆ ಚುನಾವಣೆ: ಕಾಂಗ್ರೆಸ್‌ ಮುಂದೆ ಸವಾಲು

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ 1.41 ಲಕ್ಷ ಮತಗಳ ಅಂತರದಿಂದ ಭರ್ಜರಿಯಾಗಿ ಗೆದ್ದಿದ್ದ ಕಾಂಗ್ರೆಸ್‌ಗೆ ಈ ಬಾರಿ ದೊಡ್ಡ ಸವಾಲು ಮುಂದಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಮಾತ್ರವಲ್ಲದೇ, ಮೈಸೂರು ಜಿಲ್ಲೆಯ ವರುಣಾ, ನಂಜನಗೂಡು, ತಿ.ನರಸೀಪುರ ಮತ್ತು ಎಚ್‌.ಡಿ.ಕೋಟೆ ಕ್ಷೇತ್ರಗಳೂ ಬರುತ್ತವೆ.

2014ರ ಚುನಾವಣೆಯ ಸಂದರ್ಭದಲ್ಲಿ ಎಂಟು ಕ್ಷೇತ್ರಗಳ ಪೈಕಿ ಎಚ್‌.ಡಿ.ಕೋಟೆ ಒಂದು ಬಿಟ್ಟು ಉಳಿದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರೇ ಇದ್ದರು. ಈಗ ನಾಲ್ಕು ಕ್ಷೇತ್ರಗಳು (ಚಾಮರಾಜನಗರ, ಹನೂರು, ಎಚ್‌.ಡಿ.ಕೋಟೆ ಮತ್ತು ವರುಣಾ) ಮಾತ್ರ ಕಾಂಗ್ರೆಸ್‌ ವಶದಲ್ಲಿವೆ. ತಿ.ನರಸೀಪುರದಲ್ಲಿ ಜೆಡಿಎಸ್‌, ಕೊಳ್ಳೇಗಾಲದಲ್ಲಿ ಬಿಎಸ್‌ಪಿ, ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಬಿಜೆಪಿ ಶಾಸಕರಿದ್ದಾರೆ.

ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಗೆಲ್ಲಬೇಕಾದರೆ ಕಾಂಗ್ರೆಸ್‌ ಹೆಚ್ಚು ಬೆವರು ಹರಿಸಬೇಕಾಗಿದೆ.

ನಗರಸಭಾ ಚುನಾವಣೆಯ ಫಲಿತಾಂಶದ ದಿನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ಸಂಸದ ಆರ್‌. ಧ್ರುವನಾರಾಯಣ, ‘ಸ್ಥಳೀಯ ಸಂಸ್ಥೆಗಳ ಫಲಿತಾಂಶ, ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸ್ಥಳೀಯ ವಿಚಾರಗಳ ಮೇಲೆ ನಡೆಯುತ್ತವೆ. ಲೋಕಸಭೆ ಚುನಾವಣಾ ವಿಷಯಗಳೇ ಬೇರೆ’ ಎಂದು ಹೇಳಿದ್ದರು.

ಮತ್ತೊಮ್ಮೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಧ್ರುವನಾರಾಯಣ ಅವರು 2019ರ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು