ಇಲ್ಲಿ ಗಲ್ಲಿಗಳೇ ಬಯಲು ಶೌಚಾಲಯ!

7
ಪಟ್ಟಣದಲ್ಲಿ ಕೇವಲ 3 ಸಾರ್ವಜನಿಕ ಶೌಚಾಲಯ; ಜನರಿಗೆ ತೊಂದರೆ

ಇಲ್ಲಿ ಗಲ್ಲಿಗಳೇ ಬಯಲು ಶೌಚಾಲಯ!

Published:
Updated:
Deccan Herald

ಚಾಮರಾಜನಗರ: ಜಿಲ್ಲಾ ಕೇಂದ್ರವಾದ ಚಾಮರಾಜನಗರ ಪಟ್ಟಣದಲ್ಲಿರುವ ಕೆಲವು ಗಲ್ಲಿಗಳು ಈಗ ಶೌಚಾಲಯಗಳಾಗಿ ಬದಲಾಗಿವೆ. ಕಾರಣ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವುದು.

ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯ ಹಾಗೂ ಬಡಾವಣೆಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಬೇಕು ಎಂಬುದು ನಿಯಮ. ಪಟ್ಟಣದಲ್ಲಿ ಅಂದಾಜಿನ ಪ್ರಕಾರ 80 ಸಾವಿರ ಜನಸಂಖ್ಯೆ ಇದ್ದಾರೆ. ಆದರೆ, ಸಾರ್ವಜನಿಕ ಶೌಚಾಲಯಗಳು ಇರುವುದು ಕೇವಲ 3. ಮಾರಿಗುಡಿ ದೇವಸ್ಥಾನದ ಬಳಿ, ಖಾಸಗಿ ಬಸ್‌ ನಿಲ್ದಾಣ ಹಾಗೂ ಹಳೇ ಮಾರುಕಟ್ಟೆ ಸಮೀಪ ಈ ಶೌಚಾಲಯಗಳಿವೆ. ಉಳಿದಂತೆ ನಗರಸಭೆಯ 31 ವಾರ್ಡ್‌ಗಳಲ್ಲಿ 9 ಸಮುದಾಯ ಶೌಚಾಲಯಗಳಿವೆ.

ಕೆಲವು ಬಡಾವಣೆಗಳಲ್ಲಿ ಸಮುದಾಯ ಶೌಚಾಲಯಗಳಿದ್ದರೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗೂ ಸ್ಥಳೀಯ ಆಡಳಿತ ಗಮನ ಹರಿಸಬೇಕು ಎಂದು ಪಟ್ಟಣವಾಸಿಗಳು ಒತ್ತಾಯಿಸುತ್ತಾ‌ರೆ.

ದೂರದ ಹಳ್ಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಜನರು ಬಹಿರ್ದೆಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಮಹಿಳೆಯರಿಗೆ ತುಂಬಾ ಕಷ್ಟವಾಗುತ್ತಿದೆ. ಇರುವ ಶೌಚಾಲಯಗಳು ಸ್ವಚ್ಛವಾಗಿಲ್ಲದಿದ್ದರೆ ಯಾರೂ ಅವುಗಳತ್ತ ಸುಳಿಯುವುದಿಲ್ಲ. 

‘ಖಾಸಗಿ ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ. ಮಳೆಗಾಲದ ಸಂದರ್ಭದಲ್ಲಿ ಶೌಚಾಲಯದ ಒಳಗೆ ಕಾಲಿಡಲು ಆಗುವುದಿಲ್ಲ’ ಎನ್ನುತ್ತಾರೆ ಮಹಿಳೆಯರು.

ಶೌಚಾಲಯಗಳು ಇಲ್ಲದಿರುವುದರಿಂದ ಜನರು ಬಹಿರ್ದೆಸೆಗಾಗಿ ಓಣಿಗಳನ್ನು ಅವಲಂಬಿಸಿದ್ದಾರೆ.

‘ಪ್ರತಿದಿನ ಈ ಗಲ್ಲಿಯಲ್ಲಿ ಮೂತ್ರ ವಿಸರ್ಜನೆಗೆ ಹಲವಾರು ಮಂದಿ ಬರುತ್ತಾರೆ. ಯಾರೊಬ್ಬರೂ ಅರಿವು ಮೂಡಿಸುತ್ತಿಲ್ಲ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗಿದೆ. ಮಳೆ ಸುರಿದ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿ ಹೇಳತೀರದು. ರೋಗರುಜಿನ ಹರಡುವ ಭೀತಿ ಎದುರಾಗಿದೆ. ದುರ್ವಾಸನೆ ಬಡಿಯುತ್ತದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಪಟ್ಟಣ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಬಯಲು ಶೌಚಾಲಯ ನಿರ್ಮೂಲನೆಗೆ ಒತ್ತು ಕೊಡಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ನ ಸ್ವಚ್ಛ ಸರ್ವೇಕ್ಷಣ್‌ ಕಾರ್ಯಕ್ರಮವನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಯಲು ಶೌಚಾಲಯದಿಂದ ಮುಕ್ತಿ ಸಿಗಲಿದೆ ಎಂದು ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !