7

ಬೆಳಗದ ಸೋಲಾರ್ ದೀಪಗಳು: ಕ್ರಮಕ್ಕೆ ಆಗ್ರಹ

Published:
Updated:

ಗುಂಡ್ಲುಪೇಟೆ: ಪಟ್ಟಣದ ಅನೇಕ ವಾರ್ಡ್‍ಗಳಲ್ಲಿ ಪುರಸಭೆ ವತಿಯಿಂದ ಆಳವಡಿಸಿದ್ದ ಸೋಲಾರ್ ದೀಪಗಳು ಬೆಳಗುತ್ತಿಲ್ಲವಾದ್ದರಿಂದ ಸಾರ್ವಜನಿಕರು ಕತ್ತಲೆಯಲ್ಲಿ ತಿರುಗಾಡುವಂತಾಗಿದೆ.

2016-17ನೇ ಸಾಲಿನಲ್ಲಿ ಪುರಸಭೆ ವತಿಯಿಂದ ₹ 30 ಸಾವಿರ ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಸುಮಾರು 20ಕ್ಕೂ ಹೆಚ್ಚಿನ ಸೋಲಾರ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ದಿನದಿಂದ ದಿನಕ್ಕೆ ಲೈಟ್‍ಗಳು ಹಾಳಾಗುವುದು, ಕಳ್ಳತನವಾಗುವುದು, ಕಿಡಿಗೇಡಿಗಳು ಕಲ್ಲು ಹೊಡೆಯುವುದರಿಂದ ಸುಮಾರು 15ಕ್ಕೂ ಹೆಚ್ಚಿನ ದೀಪಗಳು ಬೆಳಗುತ್ತಿಲ್ಲ.

ಕೆಲ ವಾರ್ಡ್‍ಗಳು ಪಟ್ಟಣದಿಂದ ದೂರವಿದ್ದು ಬೀದಿ ದೀಪಗಳು ಇಲ್ಲ. ರಾತ್ರಿ ಸಮಯದಲ್ಲಿ ಮಹಿಳೆ ಮತ್ತು ಮಕ್ಕಳು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ  ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಮಹದೇವಪ್ರಸಾದ್ ನಗರ, 11ನೇ ವಾರ್ಡ್, ಕುರುಬಗೇರಿ, ತೋಟದಬೀದಿ, ಹೊಸೂರು, ಹಳೇಆಸ್ಪತ್ರೆ ರಸ್ತೆ, ನಾಯಕರಬೀದಿ ಸೇರಿದಂತೆ  ಹಲವೆಡೆ ಸೋಲಾರ್ ಲೈಟ್‍ಗಳು ಕೆಟ್ಟು ನಿಂತಿದೆ. ಕೆಲವೊಂದು ಕಡೆ ಬ್ಯಾಟರಿಗಳಿಲ್ಲ, ಕೆಲ ಕಡೆ ಡಿಸ್ಟಲರಿ ವಾಟರ್ ಪೂರೈಕೆಯಾಗದ ಕಾರಣ ಲೈಟ್‍ಗಳು ಕೆಟ್ಟು ನಿಂತಿದೆ. ಈಗಲಾದರು ಅಧಿಕಾರಿಗಳು ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಹೊಸೂರಿನ ಕುಮಾರ್  ಮನವಿ ಮಾಡಿದ್ದಾರೆ.

ಸೋಲಾರ್‌ ದೀಪಗಳ ಉರಿಯುವಂತಾಗಲು ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮ ಇಲ್ಲವಾದಲ್ಲಿ ಪುರಸಭಾ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಯೋಗೇಶ್ ಎಚ್ಚರಿಕೆ ನೀಡಿದರು.

ಸೋಲಾರ್ ಬ್ಯಾಟರಿಗಳು ಹೆಚ್ಚು ಬೆಲೆ ಬಾಳುವುದರಿಂದ ಕಳ್ಳತನ ಮಾಡುತ್ತಿದ್ದಾರೆ. ಇದರ ನಿರ್ವಹಣೆಯೇ ದುಬಾರಿಯಾಗುತ್ತಿದೆ. ಆದ್ದರಿಂದ ಇವುಗಳ ಬದಲಾಗಿ ಎಲ್‍ಇಡಿ ಬಲ್ಟ್‌ಗಳನ್ನೇ ಅಳವಡಿಸಲಾಗುವುದು. ಆಯಾ ಬಡಾವಣೆಯವರು ಒಗ್ಗಟ್ಟಾಗಿ ಇದರ ಬಗ್ಗೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಳ್ಳತನ ಹೆಚ್ಚಾಗುತ್ತಲೇ ಇದ್ದರೆ ನಿರ್ವಹಣೆ ತೊಂದರೆಯಾಗುತ್ತದೆ ಎಂದು ಪುರಸಭೆ ಕಾರ್ಯನಿರ್ವಹಣಾಧಿಕಾರಿ ರಮೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !