ಆರ್‌ಟಿಐ: ನೆಪ ಹೇಳಿ ಮಾಹಿತಿ ನಿರಾಕರಿಸುವಂತಿಲ್ಲ

7
ಅಧಿಕಾರಿಗಳಿಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಸೂಚನೆ

ಆರ್‌ಟಿಐ: ನೆಪ ಹೇಳಿ ಮಾಹಿತಿ ನಿರಾಕರಿಸುವಂತಿಲ್ಲ

Published:
Updated:
Deccan Herald

ಚಾಮರಾಜನಗರ: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗುವ ಅರ್ಜಿಗಳಿಗೆ ಅರ್ಜಿಗೆ 30 ದಿನಗಳ ಒಳಗೆ ಮಾಹಿತಿ ನೀಡಬೇಕು. ಸಿಬ್ಬಂದಿ ಕೊರತೆ, ಸಮಯ ಅಭಾವ... ಇತರೆ ಸಬೂಬು ಹೇಳಿ ಮಾಹಿತಿ ನಿರಾಕರಿಸುವಂತಿಲ್ಲ. ಲಭ್ಯವಿರುವ ಮಾಹಿತಿಯನ್ನು ವಿಳಂಬಕ್ಕೆ ಅವಕಾಶವಿಲ್ಲದೆ ಅರ್ಜಿದಾರರಿಗೆ ಒದಗಿಸುವುದು ಅಧಿಕಾರಿಗಳ ಕರ್ತವ್ಯ’ ಎಂದು  ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಸುಚೇತನ ಸ್ವರೂಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಗುರುವಾರ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳ ಜತೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ, ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಜಾರಿಗೆ ಬಂದಿರುವ ಈ ಕಾಯ್ದೆಯ ಬಗ್ಗೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತಿಳಿವಳಿಕೆ ಹೊಂದಿರಬೇಕು’ ಎಂದು ಅವರು ಹೇಳಿದರು.

‘ಆರ್‌ಟಿಐ ಅತ್ಯಂತ ಪ್ರಬಲ ಕಾಯ್ದೆ. ಅರ್ಜಿದಾರರಿಂದ ಸ್ವೀಕರಿಸಲಾಗುವ ಅರ್ಜಿ ಹಾಗೂ ನೀಡಬೇಕಿರುವ ಮಾಹಿತಿ ವಿವರಗಳ ಕುರಿತು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಎಲ್ಲವನ್ನೂ ಸರಿಯಾಗಿ ಮನನ ಮಾಡಿಕೊಂಡರೆ ಅನಗತ್ಯವಾಗಿ ಗೊಂದಲಕ್ಕೆ ಈಡಾಗುವುದು ತಪ್ಪಲಿದೆ’ ಎಂದರು.

‘ಯಾವುದೇ ನೌಕರರ ಸೇವಾ ಪುಸ್ತಕ, ನೇಮಕಾತಿ ಆದೇಶದಂತಹ ದಾಖಲಾತಿಗಳನ್ನು ಮಾಹಿತಿ ಹಕ್ಕಿನಡಿ ನೀಡುವಂತಿಲ್ಲ. ಸಹಕಾರಿ ಸಂಸ್ಥೆ, ಸರ್ಕಾರದ ಅನುದಾನ ಪಡೆಯದ ಸಂಸ್ಥೆಗಳ ಮಾಹಿತಿಯನ್ನೂ ಸಹ ನೀಡುವಂತಿಲ್ಲ. ಆದರೆ, ಸಹಕಾರಿ ಸಂಸ್ಥೆಗಳಿಗೆ ಕಾಮಗಾರಿ ಹಾಗೂ ಇತರೆ ಕೆಲಸಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದರೆ ಅಂತಹ ಮಾಹಿತಿಯನ್ನು ಅದಕ್ಕೆ ಸಂಬಂಧಪಟ್ಟವರಿಂದ ಪಡೆಯಬಹುದಾಗಿದೆ’ ಎಂದರು.

‘ಮಾಹಿತಿ ನೀಡಲು ಕೋರಿ ಬರುವ ಅರ್ಜಿದಾರರಿಗೆ ಎಷ್ಟು ಪುಟಗಳ ಮಾಹಿತಿ ಒದಗಿಸಬೇಕಿದೆ ಎಂಬುದನ್ನು ನಿರ್ಧರಿಸಿ ಪ್ರತಿ ಪುಟಕ್ಕೆ ₹2ರಂತೆ ಶುಲ್ಕ ಪಡೆಯಬೇಕಾಗುತ್ತದೆ. ಅರ್ಜಿದಾರರ ವರಮಾನ ಕಡಿಮೆ ಇದ್ದಲ್ಲಿ 100 ಪುಟಗಳವರೆಗೆ ಮಾತ್ರ ಉಚಿತವಾಗಿ ಕೊಡಲು ಅವಕಾಶವಿದೆ. ಆದರೆ ಅರ್ಜಿದಾರರು ಇತ್ತೀಚಿನ ದೃಢೀಕೃತ ವರಮಾನ ಪ್ರಮಾಣ ಪತ್ರವನ್ನು ಲಗತ್ತಿಸಬೇಕಾಗುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !