ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೌಡಿಗಳ ವಿರುದ್ಧ ರಿವಾಲ್ವರ್‌’: ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ

Last Updated 15 ಮಾರ್ಚ್ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ರೌಡಿಗಳ ಉಪಟಳ, ಮಟ್ಕಾ ಮತ್ತು ಹುಕ್ಕಾ ಬಾರ್‌ಗಳ ಹಾವಳಿ ಮಟ್ಟ ಹಾಕಲು ಸರ್ವೀಸ್ ರಿವಾಲ್ವರ್ ಮತ್ತು ಗೂಂಡಾ ಕಾಯ್ದೆಯನ್ನು ಮುಲಾಜಿಲ್ಲದೆ ಬಳಸುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾರ್, ರೆಸ್ಟೋರೆಂಟ್‌ಗಳನ್ನು ನಿಗದಿತ ಸಮಯದೊಳಗೆ ಬಾಗಿಲು ಮುಚ್ಚಿಸಬೇಕು. ವಿದೇಶಿ ಪ್ರಜೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ಕದ್ದ ಮಾಲುಗ
ಳನ್ನು ಖರೀದಿ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

‘ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ತಿಳಿಸಿದ್ದೇನೆ’ ಎಂದರು.

ಹುಕ್ಕಾಬಾರ್ ಬಾರ್‌ಗಳ ಬಾಗಿಲು ಮುಚ್ಚಿಸಿದರೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಿದ್ದಾರೆ. ಇವುಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರತ್ಯೇಕ ಕಾನೂನಿನ ಅವಶ್ಯಕತೆ ಇದೆ ಎಂದೂ ಅವರು ಹೇಳಿದರು.

‘ಬಿಜೆಪಿ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರಿನಲ್ಲಿ 1,160 ಕೊಲೆ ಪ್ರಕರಣಗಳು ದಾಖಲಾಗಿದ್ದು, ನಮ್ಮ ಅವಧಿಯಲ್ಲಿ 998 ಪ್ರಕರಣ ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕೂಡ ಕಡಿಮೆಯಾಗಿವೆ’ ಎಂದರು.

‘ಬಿಜೆಪಿ ಅವಧಿಯಲ್ಲಿ ಮೂರು ಕಡೆ ಬಾಂಬ್‌ ಸ್ಪೋಟವಾಯಿತು. ಚರ್ಚ್‌ಗಳ ಮೆಲೆ ದಾಳಿ, ಈಶಾನ್ಯ ರಾಜ್ಯಗಳ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಊರು ಬಿಟ್ಟು ಹೋದರು. ಈ ರೀತಿಯ ಸ್ಥಿತಿ ನಮ್ಮ ಅವಧಿಯಲ್ಲಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಯೋಗಿ ಆದಿತ್ಯನಾಥರ ಗಾಳಿ ಹೋಗಿದೆ: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಗಾಳಿ ಅವರ ರಾಜ್ಯದಲ್ಲಿಯೇ ಹೋಗಿದೆ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ’ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ಬಿಜೆಪಿಯವರು ಸಂಧ್ಯಾವಂದನೆ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಜಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಸುಳ್ಳು ಹೇಳಿಸುತ್ತಿದ್ದಾರೆ. ಅಂಕಿ–ಅಂಶ ನೋಡಿ ಮೋದಿ ಮಾತನಾಡಬೇಕಿತ್ತು ಎಂದರು.

ಉತ್ತರ ಪ್ರದೇಶದಿಂದ ಬಂದಿರುವ ಸರಗಳ್ಳ ‘ಬವೇರಿಯಾ ಗ್ಯಾಂಗ್’ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಅವರನ್ನು ವಾಪಸ್ ಊರಿಗೆ ಹೋಗಲು ಬಿಡದೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದೂ ಹೇಳಿದರು.

ಆರ್ಡರ್ಲಿ ಪದ್ಧತಿ ಇದೆ
ಜಿ. ಪರಮೇಶ್ವರ ಗೃಹ ಸಚಿವರಾಗಿದ್ದಾಗ ಪೊಲೀಸ್ ಇಲಾಖೆಯಲ್ಲಿನ ಆರ್ಡರ್ಲಿ ಪದ್ಧತಿ ರದ್ದು ಪಡಿಸಲು ಆದೇಶ ಮಾಡಿದ್ದರು. ಪರ್ಯಾಯವಾಗಿ ಸಿಬ್ಬಂದಿ ನೇಮಕಾತಿ ಆಗದ ಕಾರಣ ಅದು ಇನ್ನೂ ಮುಂದುವರಿದಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಬ್ರಿಟಿಷರ ಕಾಲದಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಕೂಡಲೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಸಿ ಪೊಲೀಸರನ್ನು ಆರ್ಡರ್ಲಿ ಕೆಲಸದಿಂದ ಬಿಡುಗಡೆ ಮಾಡಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT