ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌ ವಿರುದ್ಧ ಪೊರಕೆ ಪ್ರತಿಭಟನೆ

ನಾಗರಿಕ ಹೋರಾಟ ಸಮಿತಿ ಹೋರಾಟ
Last Updated 8 ಮಾರ್ಚ್ 2018, 8:39 IST
ಅಕ್ಷರ ಗಾತ್ರ

ಮಂಗಳೂರು: ಮಾಲಿನ್ಯ ನಿಯಂತ್ರಣದ ವಿಷಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪಾಲಿಸದಿರುವ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್) ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಕಂಪೆನಿಯ ನಾಲ್ಕನೇ ಹಂತದ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜೋಕಟ್ಟೆ ಸುತ್ತಮುತ್ತಲ ಜನರು ನಾಗರಿಕ ಹೋರಾಟ ಸಮಿತಿ ಸದಸ್ಯರು ಬುಧವಾರ ನಗರದಲ್ಲಿ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು.

ನಗರದ ಹಂಪನಕಟ್ಟೆಯ ಮಿನಿ ವಿಧಾನಸೌಧದ ಎದುರಿನಿಂದ ಪೊರಕೆ ಹಿಡಿದು ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಎಂಆರ್‌ಪಿಎಲ್‌ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿದರು. ಜಿಲ್ಲಾಧಿಕಾರಿ ಕಚೇರಿ ಆವರಣದ ಎದುರು ಪ್ರತಿಭಟನಾ ಸಭೆ ನಡೆಸಿ, ಕಂಪೆನಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಮಾತನಾಡಿ, ‘ಎಂಆರ್‌ಪಿಎಲ್ ಘಟಕಗಳಿಂದ ಶಬ್ದಮಾಲಿನ್ಯ ತಪ್ಪಿಸಲು ಸೈಲೆನ್ಸರ್ ಅಳವಡಿಸಬೇಕು, ರಾಸಾಯನಿಕ ಸಲ್ಫರನ್ನು ಶೇಖರಿಸಿಡುವ ತೆರೆದ ಆವರಣವನ್ನು ಮುಚ್ಚಿದ ಆವರಣವನ್ನಾಗಿ ಪರಿವರ್ತಿಸಬೇಕು. ಜನವಸತಿ ಪ್ರದೇಶದೊಳಗೆ ಕೋಕ್ ಹುಡಿ ಹಾರದಂತೆ ನೋಡಿಕೊಳ್ಳಬೇಕು. ಕೋಕ್ ಲೋಡಿಂಗ್ ಯಾರ್ಡ್, ಸೈಲೋಸ್‌ಗಳನ್ನು ಈಗಿರುವ ಸ್ಥಳದಿಂದ ಕಂಪೆನಿಯ ಒಳಭಾಗಕ್ಕೆ ಸ್ಥಳಾಂತರಿಸಬೇಕು ಎಂದು ರಾಜ್ಯ ಸರ್ಕಾರ ನೀಡಿದ್ದ ಆದೇಶವನ್ನು ಈವರೆಗೂ ಪಾಲಿಸಿಲ್ಲ’ ಎಂದು ಆರೋಪಿಸಿದರು.

ರಾಸಾಯನಿಕ ದುರ್ವಾಸನೆ ತಪ್ಪಿಸಲು ಕೈಗಾರಿಕಾ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರವುಗೊಳಿಸಿ ಜನವಸತಿ ಪ್ರದೇಶದಿಂದ ದೂರಕ್ಕೆ ಸ್ಥಳಾಂತರಿಸಬೇಕು. ಬಾಕಿ ಉಳಿದಿರುವ 27 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಬೇಕು ಎನ್ನುವ ಸೂಚನೆಯುಳ್ಳ ಆದೇಶವನ್ನು 2016ರಲ್ಲೇ ಹೊರಡಿಸಲಾಗಿತ್ತು. ಆದರೆ, ಅವೆಲ್ಲವೂ ಕಡತಗಳಲ್ಲೇ ಉಳಿದಿವೆ. ಎಂಆರ್‌ಪಿಎಲ್‌ನಿಂದ ಆಗುತ್ತಿರುವ ಮಾಲಿನ್ಯದಿಂದ ಸುತ್ತಮುತ್ತಲ ಜನರ ಬದುಕು ಅಸಹನೀಯವಾಗಿದೆ ಎಂದು ದೂರಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿಯ ತೀರ್ಮಾನದಂತೆ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸಗಳು 2017ರಲ್ಲೇ ಮುಗಿಯಬೇಕಿತ್ತು. ಆದರೆ, ಯಾವ ಕೆಲಸವೂ ಈವರೆಗೆ ಆರಂಭವಾಗಿಲ್ಲ. ಕಂಪೆನಿ ಜನರಿಗೆ ಸುಳ್ಳು ಹೇಳುತ್ತಿದೆ. ಈಗಲೂ ಜೋಕಟ್ಟೆ ಪರಿಸರದ ನಿವಾಸಿಗಳು ಶಬ್ದಮಾಲಿನ್ಯ, ರಾಸಾಯನಿಕ ವಾಸನೆ, ಹಾರು ಬೂದಿ ಸಮಸ್ಯೆಗಳಿಂದ ಬಳಲುತ್ತಲೇ ಇದ್ದಾರೆ. ಇಂತಹ ಕಂಪೆನಿಯ ವಿಸ್ತರಣಾ ಚಟುವಟಿಕೆಗೆ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಸಿದ್ಧತೆ ನಡೆದಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಸಂಚಾಲಕ ಬಿ.ಎಸ್.ಹುಸೇನ್,  ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ಹೋರಾಟ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಬಾವ, ಶರೀಫ್ ಜೋಕಟ್ಟೆ, ಸಂಶುದ್ದೀನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT