ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೊಠಡಿಗಳ ತೆರವು: ಇಲಾಖೆಗಳ ಹಗ್ಗಜಗ್ಗಾಟ

ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
Last Updated 5 ಜುಲೈ 2018, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ80 ಕೊಠಡಿಗಳನ್ನು ತೆರವುಗೊಳಿಸುವ ವಿಷಯದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದ ಕುರಿತು ಗುರುವಾರ ನಡೆದ ತಾಲ್ಲೂಕು ಪಂಚಾಯಿತಿಯ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಪ್ರಗತಿ ವರದಿಯನ್ನು ಮಂಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಲಕ್ಷ್ಮಿಪತಿ, ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 80 ಕೊಠಡಿಗಳು ಶಿಥಿಲಗೊಂಡಿವೆ ಎಂದು ಹೇಳಿದರು. ಮಧ್ಯಪ್ರವೇಶಿಸಿದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ರಮೇಶ್‌, ‘ತೆರವುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

‘ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ ರಾಜ್‌ ಇಲಾಖೆಯತಾಂತ್ರಿಕ ವಿಭಾಗದವರ ಗಮನಕ್ಕೆ ತಂದಿದ್ದೇವೆ. ಆದರೆ, ಶಿಥಿಲ ಕೊಠಡಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಎರಡೂ ಇಲಾಖೆಗಳ ನಡುವೆ ಗೊಂದಲ ಇದೆ. ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಕಡೆಯವರು ಹೇಳುತ್ತಿದ್ದಾರೆ’ ಎಂದು ಶಿಕ್ಷಣಾಧಿಕಾರಿ ತಿಳಿಸಿದರು.

ಪಂಚಾಯತ್‌ ರಾಜ್‌ ಇಲಾಖೆಯ ಎಂಜಿನಿಯರ್‌ಗಳು, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜನವರಿ 30ರಂದೇ ಲಿಖಿತವಾಗಿ ತಿಳಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ‘ಶಿಥಿಲವಾಗಿರುವ ಕೊಠಡಿಗಳು ಶಾಲಾ ಮಕ್ಕಳ ಜೀವಕ್ಕೆ ಅಪಾಯ ತರಬಹುದು. ತಾಂತ್ರಿಕ ಗೊಂದಲದ ಬಗ್ಗೆಆದಷ್ಟು ಬೇಗ ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಸ್ಪಷ್ಟನೆ ಪಡೆದು, ಕೊಠಡಿಯನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದು ರಮೇಶ್‌ ಸೂಚಿಸಿದರು. ತಾಲ್ಲೂಕಿನಲ್ಲಿರುವ ಅಂಗನವಾಡಿಗಳ ಬಗ್ಗೆ ಚರ್ಚೆ ನಡೆಯುವಾಗಲೂ ಇದೇ ವಿಷಯ ಮತ್ತೆ ಚರ್ಚೆಗೆ ಬಂತು. ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ 13 ಅಂಗನವಾಡಿ ಕೊಠಡಿಗಳನ್ನು ಕೆಡವಲು ಕ್ರಮ ಕೈಗೊಳ್ಳುವಂತೆಯೂ ಅವರು ನಿರ್ದೇಶಿಸಿದರು.

ಶಾ‌ಲೆಗಳಲ್ಲಿ ಉದ್ಯಾನ: ನರೇಗಾ ಅಡಿಯಲ್ಲಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಉದ್ಯಾನ ನಿರ್ಮಿಸುವ ಪ್ರಸ್ತಾವವನ್ನು ರಮೇಶ್‌ ಸಭೆ ಮುಂದಿಟ್ಟರು.‘ನರೇಗಾ ಅಡಿಯಲ್ಲಿ ಶಾಲೆಗೆ ಆವರಣ ಗೋಡೆ, ಉದ್ಯಾನ, ಆಟದ ಮೈದಾನ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ಇದೆ. ಇಂತಹ ಶಾಲೆಗಳ ಪಟ್ಟಿ ನೀಡಿ’ ಎಂದು ಲಕ್ಷ್ಮಿಪತಿ ಅವರಿಗೆ ಸೂಚಿಸಿದರು. ‘ಶೌಚಾಲಯ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ₹1 ಲಕ್ಷ ನೀಡುತ್ತದೆ. ಪಂಚಾಯಿತಿ ವತಿಯಿಂದ ₹75 ಸಾವಿರ ನೀಡಬಹುದು. ಈ ಮೊತ್ತದಲ್ಲಿ ಅಗತ್ಯವಿರುವ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬಹುದು’ ಎಂದು ಅವರು ಹೇಳಿದರು.

‌64 ಸೀಟು ಉಳಿಕೆ:ಈ ಬಾರಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 64 ಸೀಟುಗಳು ಉಳಿಕೆಯಾಗಿವೆ ಎಂದು ಲಕ್ಷ್ಮಿಪತಿ ಮಾಹಿತಿ ನೀಡಿದರು. ‘389 ಸೀಟುಗಳು ಲಭ್ಯವಿದ್ದವು. ಈ ಪೈಕಿ 325 ಮಕ್ಕಳು ದಾಖಲಾಗಿದ್ದಾರೆ’ ಎಂದು ಅವರು ವಿವರಿಸಿದರು.

ಬಿಇಒ ಅಳಲು: ತಾಲ್ಲೂಕಿನ ಬಿಇಒ ಕಚೇರಿ ಶಿಥಿಲಾವಸ್ಥೆಯಲ್ಲಿದೆ. ಸದ್ಯ ಅದರಹಿಂಭಾಗದಲ್ಲಿರುವ ಶಾಲೆಯಲ್ಲಿ ಕಚೇರಿ ನಡೆಸುತ್ತಿದ್ದೇವೆ.ಆವರಣ ಗೋಡೆ ಇಲ್ಲದಿರುವುದರಿಂದ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಕಚೇರಿಗೆ ಸಂಬಂಧಿಸಿದ ಜಮೀನು ದಾಖಲೆಗಳು ಸರಿಯಾಗಿಲ್ಲ ಎಂದು ಲಕ್ಷ್ಮಿಪತಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌, ‘ನೀವೇ ವಕೀಲರನ್ನು ಇಟ್ಟು ದಾಖಲೆಗಳನ್ನು ಪರಿಷ್ಕರಿಸಿಕೊಳ್ಳಬೇಕು. ಕಟ್ಟಡದ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಏನಾದರೂ ಮಾಡೋಣ’ ಎಂದರು. ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷೆ ದೊಡ್ಡಮ್ಮ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ನಾಗರಾಜಮ್ಮ ಇದ್ದರು.

13,698 ಹೆಕ್ಟೇರ್‌ನಲ್ಲಿ ಬಿತ್ತನೆ

ತಾಲ್ಲೂಕಿನಲ್ಲಿ ಒಟ್ಟು 29,450 ಹೆಕ್ಟೇರ್‌ನಷ್ಟು ಬಿತ್ತನೆ ಭೂಮಿ ಇದ್ದು, ಈಗ 13,698 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ ಸಭೆಗೆ ತಿಳಿಸಿದರು. ಹೆಸರು ಬೆಳೆಗೆ ಹಳದಿ ನಂಜುರೋಗ ಕಾಣಿಸಿಕೊಂಡಿದ್ದು, 480 ಎಕರೆಯಷ್ಟು ಹಾನಿಗೀಡಾಗಿದೆ ಎಂದು ಮಾಹಿತಿ ನೀಡಿದರು.

ಸಾಕಷ್ಟು ಲಭ್ಯ: ಇದುವರೆಗೆ ವಿವಿಧ ಬೆಳೆಗಳ 685.59 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಮಾರಾಟಮಾಡಲಾಗಿದ್ದು, ಇನ್ನು 200.64 ಕ್ಷಿಂಟಲ್‌ಗಳಷ್ಟು ದಾಸ್ತಾನು ಇದೆ. ಒಟ್ಟು 4,638 ರೈತರು ಬಿತ್ತನೆ ಬೀಜ ಖರೀದಿಸಿದ್ದಾರೆ ಎಂದು ಅವರು ತಿಳಿಸಿದರು.

ಕೃಷಿ ಹೊಂಡಕ್ಕೆ ಒತ್ತು ನೀಡಿ: ನರೇಗಾ ಅಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚು ಒತ್ತು ನೀಡುವಂತೆ ರಮೇಶ್‌ ಅವರು ಸುಂದರಮ್ಮ ಅವರಿಗೆ ಸೂಚಿಸಿದರು.13,698 ಹೆಕ್ಟೇರ್‌ನಲ್ಲಿ ಬಿತ್ತನೆ

ಎರಡು ಕುಷ್ಠರೋಗ ಪ್ರಕರಣ

ತಾಲ್ಲೂಕಿನ ಅರಕಲವಾಡಿ ಮತ್ತು ಆಲೂರಿನಲ್ಲಿ ತಲಾ ಒಂದೊಂದು ಕುಷ್ಠರೋಗ ಪ್ರಕರಣ ಪತ್ತೆಯಾಗಿವೆ. ಸಭೆಯಲ್ಲಿ ಇಲಾಖೆಯ ಪ್ರಗತಿ ವರದಿ ಮಂಡನೆ ಮಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್‌ ಅವರು ಈ ವಿಷಯ ಪ್ರಸ್ತಾಪಿಸಿದರು. ಅದೇ ರೀತಿ ಕ್ಷಯದಿಂದ ಬಳಲುತ್ತಿರುವ ಮೂವರು ರೋಗಿಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೇಲ್ವಿಚಾರಕರ ಕೊರತೆ

ತಾಲ್ಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಗತ್ಯದಷ್ಟು ಮೇಲ್ವಿಚಾರಕರೇ ಇಲ್ಲ ಎಂಬ ಸಂಗತಿ ಸಭೆಯಲ್ಲಿ ಬೆಳಕಿಗೆ ಬಂತು. ತಾಲ್ಲೂಕಿನ ಸಂತೇಮರಹಳ್ಳಿ ವಿಭಾಗದಲ್ಲಿ 261 ಮತ್ತು ಚಾಮರಾಜನರ ವಿಭಾಗದಲ್ಲಿ 279 ಅಂಗನವಾಡಿ ಕೇಂದ್ರಗಳಿವೆ. ಸಂತೇಮರಹಳ್ಳಿ ವಿಭಾಗಕ್ಕೆ 10 ಮೇಲ್ವಿಚಾರಕರು ಬೇಕು. ಆದರೆ, ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಮರಾಜನಗರದಲ್ಲಿ 13 ಮೇಲ್ವಿಚಾರಕರ ಅಗತ್ಯವಿದೆ. ಆದರೆ, ಸೇವೆಯಲ್ಲಿರುವವರು ಮಾತ್ರ ನಾಲ್ಕೇ ಮಂದಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶೀಲ ಅವರು ಸಭೆಯ ಗಮನಕ್ಕೆ ತಂದರು.

ಮೇಲ್ವಿಚಾರಕರ ಕೊರತೆ ಇದ್ದರೆ, ಅಂಗನವಾಡಿಗಳ ಮೇಲ್ವಿಚಾರಣೆ ನಡೆಸಲು ಕಷ್ಟವಾಗುತ್ತದೆ ಎಂಬುದನ್ನು ಒಪ್ಪಿಕೊಂಡ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌, ‘ಎಲ್ಲ ಅಂಗನವಾಡಿ, ಶಿಶು ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ನಾವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT