ಆರೋಗ್ಯ ಇಲಾಖೆ ವಿರುದ್ಧ ಸದಸ್ಯರ ಆಕ್ರೋಶ

7
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ; ಆರೋಗ್ಯ ಸೇವೆ ಬಗ್ಗೆ ಮತ್ತೆ ಚರ್ಚೆ

ಆರೋಗ್ಯ ಇಲಾಖೆ ವಿರುದ್ಧ ಸದಸ್ಯರ ಆಕ್ರೋಶ

Published:
Updated:
Deccan Herald

ಚಾಮರಾಜನಗರ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಜನರಿಗೆ ಆರೋಗ್ಯ ಸೇವೆ ಸರಿಯಾಗಿ ಸಿಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ ನೇತೃತ್ವದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಹೆಚ್ಚಿನ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಚಾಮರಾಜನಗರದಲ್ಲಿರುವ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸೇವೆಗಳ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು, ‘ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿರುವ ಆರೋಗ್ಯ ಉಪಕೇಂದ್ರಗಳಿಗೆ ಕಿರಿಯ ಆರೋಗ್ಯ ಸಹಾಯಕಿಯರು (ಎಎನ್‌ಎಂ) ಸರಿಯಾಗಿ ಬರುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸೇವೆ ಲಭಿಸುತ್ತಿಲ್ಲ’ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ‘ಎಎನ್‌ಎಂಗಳ ಕೊರತೆ ಇದೆ. ಸಿಬ್ಬಂದಿ ನೇಮಕಾತಿ ಆಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸದಸ್ಯ ಕುಮಾರ್‌ ನಾಯಕ್‌ ಮಾತನಾಡಿ, ‘ಬೇಡಗುಳಿಯಲ್ಲಿರುವ ಆರೋಗ್ಯ ಕೇಂದ್ರ ಯಾವಾಗಲೂ ಮುಚ್ಚಿರುತ್ತದೆ. ಅಲ್ಲಿಗೆ ವೈದ್ಯರೂ ಬರುವುದಿಲ್ಲ, ನರ್ಸ್‌ಗಳೂ ಇರುವುದಿಲ್ಲ’ ಎಂದರು.

‘ಬೇಡಗುಳಿಯ ಕೇಂದ್ರಕ್ಕೆ ಆಯುಷ್‌ ವೈದ್ಯರನ್ನು ನಿಯೋಜಿಸಲಾಗಿದೆ. ಹರದನಹಳ್ಳಿಯಲ್ಲಿ ಎಎನ್‌ಎಂ ಆಗಿರುವ ರೂಪಾ ಅವರನ್ನು ಅಲ್ಲಿಗೆ ನಿಯೋಜಿಸಲಾಗಿದೆ’ ಎಂದು ಶ್ರೀನಿವಾಸ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ್‌ ನಾಯಕ್‌, ‘ರೂಪಾ ಅವರು ಸರಿಯಾಗಿ ಅಲ್ಲಿಗೆ ಬರುತ್ತಿಲ್ಲ’ ಎಂದರು. 

ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌. ರಮೇಶ್‌ ಅವರು ಶ್ರೀನಿವಾಸ್‌ ಅವರಿಗೆ ಸೂಚಿಸಿದರು.

ಸದಸ್ಯ ಮಹದೇವಯ್ಯ ಮಾತನಾಡಿ, ‘ಹೊಂಗನೂರು ಆಸ್ಪತ್ರೆಯ ಕೆಲಸ ಸರಿಯಾಗಿ ಆಗುತ್ತಿಲ್ಲ. ₹9 ಲಕ್ಷ ಖರ್ಚು ಮಾಡಿದರೂ ದುರಸ್ತಿಯಾಗಿಲ್ಲ. ಶೌಚಗೃಹಗಳನ್ನು ಸರಿಯಾಗಿ ನಿರ್ಮಿಸಿಲ್ಲ’ ಎಂದು ದೂರಿದರು. 

‘ಮೈಸೂರಿನ ಏಜೆನ್ಸಿಯೊಂದು ಅದರ ಹೊಣೆ ಹೊತ್ತಿದೆ. ಅದು ಕೆಲಸ ನಿರ್ವಹಿಸುತ್ತಿದೆ’ ಎಂದು ಶ್ರೀನಿವಾಸ್‌ ಸಮಜಾಯಿಷಿ ನೀಡಿದರು.

ಇದನ್ನು ಒಪ್ಪದ ಮಹದೇವಯ್ಯ, ‘ಸ್ಥಳಕ್ಕೆ ಜೊತೆಯಾಗಿ ಭೇಟಿ ನೀಡೋಣ. ಕೆಲಸ ಯಾವ ರೀತಿ ಮಾಡಿದ್ದಾರೆ ಎಂಬುದನ್ನು ತೋರಿಸುತ್ತೇನೆ’ ಎಂದರು.

ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ: ಚಾಮರಾಜನಗರದಲ್ಲಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.

ಸದಸ್ಯ ಮಹದೇವಸ್ವಾಮಿ ಮಾತನಾಡಿ, ‘ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಎಲ್ಲ ರೋಗಿಗಳನ್ನು ಮೈಸೂರಿಗೆ ಕಳುಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಡಾ. ಶ್ರೀನಿವಾಸ್‌ ಮಾತನಾಡಿ, ‘ಜಿಲ್ಲಾ ಆಸ್ಪತ್ರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

‘ಇತ್ತೀಚೆಗೆ ಕಡಜ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸಂಜೆ 6.30ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಕ್ಷಣವೇ ಯುವಕನಿಗೆ ವೈದ್ಯರು ಚಿಕಿತ್ಸೆ ನೀಡಲಿಲ್ಲ. ತಡವಾಗಿ ಆರಂಭಿಸಿದರು. 10.30ಕ್ಕೆ ಆತ ಮೃತಪಟ್ಟ’ ಎಂದು ಮತ್ತೊಬ್ಬ ಸದಸ್ಯ ಹೇಳಿದರು.

ಇದನ್ನು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸಂಬಂಧಿಸಿದವರ ಗಮನಕ್ಕೆ ತರಬೇಕು. ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ರೀತಿ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌. ರಮೇಶ್‌, ‘ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು’ ಎಂದರು.

‘ಆರೋಗ್ಯ ರಕ್ಷಾ ಸಮಿತಿ ಸಭೆ ಆರು ತಿಂಗಳಿನಿಂದ ನಡೆದಿಲ್ಲ ಎಂಬ ಮಾಹಿತಿ ಇದೆ. ಈ ಸಭೆ ನಡೆದರೆ ತಾಲ್ಲೂಕಿನ ಆರೋಗ್ಯ ಸೇವೆಯ ಚಿತ್ರಣ ಸ್ಪಷ್ಟವಾಗಿ ಸಿಗುತ್ತದೆ. ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ರಮೇಶ್‌ ಅವರು ಆರೋಗ್ಯಾಧಿಕಾರಿಗೆ ಸೂಚಿಸಿದರು.

ಇನ್ನೂ ಬಾರದ ಮಾಸಾಶನ: ಬ್ಯಾಂಕುಗಳ ವಿರುದ್ಧ ಅತೃಪ್ತಿ

ಐದಾರು ತಿಂಗಳುಗಳಿಂದ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗದಿರುವ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು. 

ಪಿಂಚಣಿ ಹಣ ಬಾರದಿರುವುದರಿಂದ ಜನರು ಜನಪ್ರತಿನಿಧಿಗಳನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಪಿಂಚಣಿ ವಿತರಿಸುವ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸಂಪರ್ಕ ಆಗದಿರುವುದರಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಮಾಸಾಶನಗಳು ಫಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ. ಅವರು ಕಷ್ಟಪಡುತ್ತಿದ್ದಾರೆ. ಇದು ಕಂದಾಯ ಇಲಾಖೆಯವರ ತಪ್ಪೋ, ಅಲ್ಲ ಬ್ಯಾಂಕುಗಳಿಂದಾದ ತಪ್ಪೋ’ ಎಂದು ಸದಸ್ಯ ಹೊಂಗನೂರು ಚಂದ್ರು ಖಾರವಾಗಿ ಪ್ರಶ್ನಿಸಿದರು.

ಕಂದಾಯ ಇಲಾಖೆಯ ಶಿರಸ್ತೇದಾರ ಮಾತನಾಡಿ, ‘ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸಂಪರ್ಕ ಆಗದೇ ಇರುವುದರಿಂದ ಈ ಸಮಸ್ಯೆ ಆಗಿತ್ತು. ಈ ಸಂಬಂಧ ಬ್ಯಾಂಕ್‌ಗಳ ಅಧಿಕಾರಿಗಳು ಸಭೆ ನಡೆಸಲಾಗಿದೆ. ಕಳೆದ ತಿಂಗಳಿಂದ ಖಾತೆಗೆ ಹಣ ಜಮೆ ಆಗುತ್ತಿದೆ’ ಎಂದರು.

ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರತಿನಿಧಿ ಅಭಿಷೇಕ್‌ ಮಾತನಾಡಿ, ‘ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆ ಆಗಿತ್ತು. ತಾಲ್ಲೂಕಿನಲ್ಲಿ ವಿವಿಧ ಪಿಂಚಣಿ ಯೋಜನೆಗಳ 17,650 ಫಲಾನುಭವಿಗಳಿದ್ದಾರೆ. ಈ ಪೈಕಿ 13,995 ಫಲಾನುಭವಿಗಳ ಖಾತೆಗಳಿಗೆ ಆಧಾರ್‌ ಸಂಖ್ಯೆಯನ್ನು ಸಂಪರ್ಕಿಸಲಾಗಿದೆ. 3,650 ಫಲಾನುಭವಿಗಳ ಖಾತೆಗೆ ಆಧಾರ್‌ ಸಂಪರ್ಕ ಮಾಡಬೇಕಷ್ಟೆ. ಬ್ಯಾಂಕ್‌ ಅಧಿಕಾರಿಗಳು ಭಾನುವಾರವೂ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಈ ಮಾತನ್ನು ಒಪ್ಪದ ಸದಸ್ಯರು, ತಮ್ಮ ಕ್ಷೇತ್ರದ ಬಹುಪಾಲು ಫಲಾನುಭವಿಗಳಿಗೆ ಹಣ ಇನ್ನೂ ಬಂದಿಲ್ಲ ಎಂದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಸಭೆಗೆ ಕರೆಸುವಂತೆ ಪ್ರತಿನಿಧಿಗೆ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !