ಕೊಳ್ಳೇಗಾಲ: ಬಲಿಗಾಗಿ ಕಾಯುತ್ತಿವೆ ಮ್ಯಾನ್‌ಹೋಲ್‌ಗಳು!

7

ಕೊಳ್ಳೇಗಾಲ: ಬಲಿಗಾಗಿ ಕಾಯುತ್ತಿವೆ ಮ್ಯಾನ್‌ಹೋಲ್‌ಗಳು!

Published:
Updated:
Deccan Herald

ಕೊಳ್ಳೆಗಾಲ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್‌ಗಳು ಅವೈಜ್ಞಾನಿಕವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಸಂಬಂಧಪಟ್ಟವರು ತಕ್ಷಣ ಗಮನ ಹರಿಸದಿದ್ದರೆ, ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳಿಂದ ಪಟ್ಟಣದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪಟ್ಟಣದ ಹೊಸ ಅಣಗಳ್ಳಿಯಿಂದ ಮುಡಿಗುಂಡದವರೆಗೆ ₹ 34 ಕೋಟಿ ವೆಚ್ಚದಲ್ಲಿ 7 ಕಿ.ಮೀ ಚತುಷ್ಪತ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ರಸ್ತೆ ಅಭಿವೃದ್ಧಿ ಯೋಜನೆಯ ಜೊತೆಗೆ 2ನೇ ಹಂತದ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನೂ ನಡೆಸಲಾಗಿದೆ. 

ಒಳಚರಂಡಿಯ ಮ್ಯಾನ್‌ಹೋಲ್‌ಗಳು ಹೆದ್ದಾರಿ ಮಧ್ಯೆ ಮತ್ತು ಬದಿಗಳಲ್ಲಿ ನಿರ್ಮಿಸಲಾಗಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳು ರಸ್ತೆಗಿಂತ ಕನಿಷ್ಠ ಅರ್ಧ ಅಡಿಯಿಂದ ಒಂದು ಅಡಿವರೆಗೂ ಎತ್ತರದಲ್ಲಿವೆ.

ಬೆಂಗಳೂರಿನಿಂದ ಕೊಳ್ಳೆಗಾಲ, ಚಾಮರಾಜನಗರದ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿಯು ಮಲೆ ಮಹದೇಶ್ವರ ಬೆಟ್ಟ, ಹೊಗೇನಕಲ್‌ ಜಲಪಾತ, ಬಿಳಿಗಿರಿ ರಂಗನಬೆಟ್ಟ, ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಸೇರಿದಂತೆ ಪ್ರಮುಖ ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ, ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ.

ವಾಹನಗಳು ಇಲ್ಲಿ ಅತಿ ವೇಗದಲ್ಲಿ ಸಂಚರಿಸುತ್ತವೆ. ರಸ್ತೆಯಿಂದ ಎತ್ತರದಲ್ಲಿರುವ ಈ ಮ್ಯಾನ್‌ಹೋಲ್‌ಗಳಿಂದ ಲಘು ವಾಹನಗಳು ಅಪಘಾತಕ್ಕೆ ತುತ್ತಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದ್ವಿಚಕ್ರ ವಾಹನ ಸವಾರರು ಈಗಾಗಲೇ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ನಾಗರಿಕರು ಹೇಳುತ್ತಾರೆ.

‘ಒಳ ಚರಂಡಿ ನಿರ್ಮಾಣ ಹೊಣೆ ಹೊತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಪಾಯದ ಅರಿವಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಮ್ಯಾನ್‌ಹೋಲ್‌ಗಳನ್ನು ರಸ್ತೆಗೆ ಸರಿ ಸಮನಾಗಿ ನಿರ್ಮಿಸದೇ ಇದ್ದರೆ ಅಮಾಯಕ ಜೀವಗಳು ಬಲಿಯಾಗುವುದರಲ್ಲಿ ಅನುಮಾನವಿಲ್ಲ. ಸಂಬಂಧ ಪಟ್ಟವರು ತಕ್ಷಣ ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಸ್ಥಳೀಯ ನಿವಾಸಿ ಸುರೇಂದ್ರ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !