ಮರಿಯಾನೆಗಳನ್ನು ಸಾಕಿದ್ದ ವಿಶಾಲಾಕ್ಷಿದೇವಿ

7
ಬಂಡೀಪುರ ಉದ್ಯಾನವನದ ರಾಂಪುರ ಶಿಬಿರದಲ್ಲಿವೆ ಮೂರು ಆನೆಗಳು

ಮರಿಯಾನೆಗಳನ್ನು ಸಾಕಿದ್ದ ವಿಶಾಲಾಕ್ಷಿದೇವಿ

Published:
Updated:
Deccan Herald

ಗುಂಡ್ಲುಪೇಟೆ: ವನ್ಯಜೀವಿಗಳ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ, ಮೈಸೂರು ರಾಜವಂಶಸ್ಥೆ ವಿಶಾಲಾಕ್ಷಿದೇವಿ ಅವರು ಮೂರು ಆನೆ ಮರಿಗಳನ್ನು ಸಾಕಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

2001ರ ಏಪ್ರಿಲ್‌ನಲ್ಲಿ ಕಾಡಿನ ಖೆಡ್ಡಾದಲ್ಲಿ ಮೂರು ಮರಿಗಳು ಬಿದ್ದಿದ್ದವು. ಅವುಗಳನ್ನು ಪಡೆದುಕೊಂಡಿದ್ದ ವಿಶಾಲಾಕ್ಷಿಯವರು ಬಂಡೀಪುರ ಸಮೀಪದ ತಮ್ಮ ಜಮೀನಿನಲ್ಲಿ ಸಾಕಿ ಸಲುಹಿದ್ದರು. 2009ರಲ್ಲಿ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

ಅ ಮರಿಗಳಿಗೆ ಪದ್ಮಜಾ, ಪೃಥ್ವಿರಾಜ್ ಮತ್ತು ಮೃತ್ಯುಂಜಯ ಎಂದು ನಾಮಕಾರಣ ಮಾಡಿದ್ದರು. ಒಂದೂವರೆ ತಿಂಗಳ ಮರಿಗಳಿಗೆ ಬಾಟಲಿ ಹಾಲು ನೀಡಿ ಪೋಷಣೆ ಮಾಡಿದ್ದರು. ಅವುಗಳಿಗೆ ಬೇಕಾದ ಆಹಾರ ಹಾಗೂ ಕಾವಾಡಿಗಳನ್ನು ಅರಣ್ಯ ಇಲಾಖೆಯು ಒದಗಿಸಿಕೊಟ್ಟಿತ್ತು. 8ರಿಂದ 9 ವರ್ಷಗಳ ಕಾಲ ಆ ಮರಿಗಳನ್ನು ಸಾಕಿದ್ದರು.

ಈ ಆನೆಗಳು ಈಗ ದೊಡ್ಡಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಶಿಬಿರದಲ್ಲಿವೆ. ಪದ್ಮಜಾ ಎಂಬ ಹೆಣ್ಣು ಆನೆಯು ಮರಿಗೆ ಜನ್ಮ ನೀಡಿದೆ.

ವಿಶಾಲಾಕ್ಷಿದೇವಿ ಅವರನ್ನು ಕಂಡರೆ ಆನೆಗಳಿಗೂ ಪ್ರೀತಿ. ಅವರು ಬರುತ್ತಿದ್ದಂತೆ ಅವರ ಬಳಿ ಹೋಗುತ್ತವೆ. ಅವರು ಹೇಳಿದ ಮಾತನ್ನು ಕೇಳುತ್ತವೆ. ಚೇಷ್ಟೆ ಮಾಡುವುದಿಲ್ಲ ಎಂದು ಪದ್ಮಜಾ ಆನೆಯನ್ನು ನೋಡಿಕೊಳ್ಳುತ್ತಿರುವ ಮಾವುತ ಹೇಳುತ್ತಾರೆ.

‘ಆನೆ ಮರಿಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿದೆ. ಮೂರು ಆನೆಗಳು ಕುಟುಂಬದ ಸದಸ್ಯರಂತೆ ಇದ್ದವು. ಸಮಯ ಸಿಕ್ಕಾಗಲೆಲ್ಲಾ ಆನೆ ಶಿಬಿರಕ್ಕೆ ಹೋಗಿ ನೋಡಿಕೊಂಡು ಬರುತ್ತೇವೆ. 9 ವರ್ಷಗಳು ಕಳೆದರೂ ಆನೆಗಳು ನಮ್ಮನ್ನು ಮರೆತಿಲ್ಲ. ಆರಂಭದಲ್ಲಿ ನಮ್ಮ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದವೋ ಈಗಲೂ ಹಾಗೆಯೇ ನಡೆದುಕೊಳ್ಳುತ್ತವೆ’ ಎಂದು ವಿಶಾಲಾಕ್ಷಿದೇವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಂಪುರಕ್ಕೆ ಆನೆಗಳ ಸ್ಥಳಾಂತರ

ಕಳೆದ ವರ್ಷ ಈ ಭಾಗದಲ್ಲಿ ಆನೆಗಳಿಗೆ ನೀರಿನ ತೊಂದರೆ ಉಂಟಾಗಿತ್ತು. ಹೀಗಾಗಿ, ಬಂಡೀಪುರ ಶಿಬಿರದ ಆನೆಗಳನ್ನು ರಾಂಪುರ ಶಿಬಿರಕ್ಕೆ ಸ್ಥಳಾಂತರ ಮಾಡಲಾಯಿತು. ಈಗ ಶಿಬಿರದಲ್ಲಿ ಸುಮಾರು 13 ಆನೆಗಳು ಇವೆ. ರಾಂಪುರದಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಹೀಗಾಗಿ, ಆನೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಎಸಿಎಫ್‌ ಪರಮೇಶ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !