ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುದುರೆ ವ್ಯಾಪಾರ’ಕ್ಕೆ ಕಸರತ್ತು?

ರಾಜ್ಯಸಭಾ ಚುನಾವಣೆ: ಓಲೈಕೆಗಾಗಿ ಬಗೆ ಬಗೆ ಆಮಿಷ
Last Updated 14 ಮಾರ್ಚ್ 2018, 8:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉಮೇದಿನಲ್ಲಿರುವ ಅಭ್ಯ‌ರ್ಥಿಗಳು ಬೇರೆ ಬೇರೆ ಪಕ್ಷಗಳ ಶಾಸಕರಿಗೆ ವಿವಿಧ ಆಮಿಷವೊಡ್ಡಿ ಮತ ಸೆಳೆಯಲು ತೆರೆಮರೆಯಲ್ಲಿ ‘ಕುದುರೆ ವ್ಯಾಪಾರ’ ಆರಂಭಿಸಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ವಿಧಾನಸಭೆ ಸದಸ್ಯರೇ ಈ ಚುನಾವಣೆಯಲ್ಲಿ ಮತದಾರರು.

ಸಾಮರ್ಥ್ಯ ಮೀರಿ ಒಬ್ಬರನ್ನು ಕಾಂಗ್ರೆಸ್ ಸ್ಪರ್ಧೆಗೆ ಇಳಿಸಿದೆ. ಗೆಲ್ಲಲು ಬೇಕಾಗಿರುವ 45 ಸಂಖ್ಯಾಬಲ ಇಲ್ಲದೇ ಇದ್ದರೂ ‘ಅನೂಹ್ಯ’ ಬಲ ಸಿಗ
ಬಹುದೆಂಬ ಅಂದಾಜಿನಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿ, ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‌ ಹಾಗೂ ರಾಜ್ಯಸಭೆಗೆ ನಡೆದ ಚುನಾವಣೆಗಳಲ್ಲಿ ‘ಅಡ್ಡ ಮತದಾನ’ ಮಾಡುವ ಸಂಸ್ಕೃತಿಗೆ ಎಲ್ಲ ಪಕ್ಷಗಳ ಶಾಸಕರೂ ಒಗ್ಗಿಕೊಂಡಿದ್ದಾರೆ. ಚುನಾವಣಾ ಹೊತ್ತಿನ ರಾಜಕಾರಣ ಹಾಗೂ ಅಭ್ಯರ್ಥಿಯ ಸಂಪತ್ತು, ರಾಜಕೀಯ ಲೆಕ್ಕಾಚಾರ ಆಧರಿಸಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಹೀಗೆ ಎಲ್ಲ ಪಕ್ಷದವರೂ ‘ಅಡ್ಡದಾರಿ’ ಹಿಡಿದಿದ್ದಾರೆ.

2013ರಲ್ಲಿ ಆಯ್ಕೆಯಾಗಿರುವ ಶಾಸಕರ ಅವಧಿ ಮುಕ್ತಾಯದ ಹಂತದಲ್ಲಿದೆ. ಚುನಾವಣೆಯೊಂದರಲ್ಲಿ ಮತ ಹಾಕುವ ಕೊನೆಯ ಅವಕಾಶವೂ ಇದಾಗಿದೆ. ಈ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೆ ಶಿಸ್ತುಕ್ರಮಕ್ಕೆ ಒಳಗಾಗಬಹುದು ಎಂಬ ಭಯ ಯಾರಿಗೂ ಇಲ್ಲ. ವಿಧಾನಸಭೆ ಚುನಾವಣೆಯನ್ನು ತಿಂಗಳೊಪ್ಪತ್ತಿನಲ್ಲಿ ಎದುರಿಸ ಬೇಕಾಗಿರುವ ಶಾಸಕರು, ಯಾರಿಗೆ ಬೇಕಾದರೂ ಮತ ಹಾಕಬಹುದಾದ ಈ ‘ಅಮೂಲ್ಯ’ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ‘ಕುದುರೆ ವ್ಯಾಪಾರ’ದ ಪ್ರಯತ್ನ ನಡೆಯುತ್ತಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.

ಯಾರಿಗೆ ಅನಿವಾರ್ಯ?: ಜೆಡಿಎಸ್‌ ಅಭ್ಯರ್ಥಿಯಾಗಿರುವ ಬಿ.ಎಂ. ಫಾರೂಕ್‌ ಎರಡನೇ ಬಾರಿ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರರ ಕೆಲವು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಪಕ್ಷದ ಬತ್ತಳಿಕೆಯಲ್ಲಿ 30 ಮತಗಳು ನಿಕ್ಕಿಯಾಗಿವೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಂಬಿದ್ದಾರೆ. ಆದರೆ, ಈ ಚುನಾವಣೆ ಮುಗಿಯುತ್ತಿದ್ದಂತೆ ಬೇರೆ ಪಕ್ಷಗಳಿಗೆ ಹಾರಲು ಬೇಲಿ ಮೇಲೆ ಕುಳಿತಿರುವ ಕೆಲವು ಶಾಸಕರು ಅಡ್ಡ ಮತದಾನ ಮಾಡಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿ ಈ ಪಕ್ಷದಲ್ಲಿದೆ. ಹೀಗಾಗಿ, 30 ಮತಗಳನ್ನು ಭದ್ರವಾಗಿ ಉಳಿಸಿಕೊಳ್ಳುವ ಜತೆಗೆ, ಪಕ್ಷೇತರರು, ಕಾಂಗ್ರೆಸ್‌ ಮತ್ತು ಬಿಜೆಪಿ ಮತಗಳನ್ನು ಸೆಳೆಯುವ ಅನಿವಾರ್ಯ ಫಾರೂಕ್‌ಗೆ ಇದೆ.

ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಯಾಗಿರುವ ಜಿ.ಸಿ.ಚಂದ್ರಶೇಖರ್‌ ಗೆಲುವೂ ಸುಲಭವಿದ್ದಂತೆ ಕಾಣುವುದಿಲ್ಲ. ಪಕ್ಷೇತರರು ಹಾಗೂ ಜೆಡಿಎಸ್‌ ಬಂಡಾಯ ಶಾಸಕರ ಮತಗಳು ಸಿಕ್ಕಿದರೂ ಗೆಲ್ಲಲು ಬೇಕಾದ ಮತಗಳಲ್ಲಿ ಕೊರತೆಯಾಗಲಿದೆ. ಇದಕ್ಕಾಗಿ ಜೆಡಿಎಸ್ ಅಥವಾ ಬಿಜೆಪಿಯ ಮತಗಳತ್ತ ಕೈ ಹಾಕಲೇಬೇಕಾಗುತ್ತದೆ. ಆದರೆ, ಇದು ಚಂದ್ರಶೇಖರ್‌ಗೆ ಸೀಮಿತವಾದ ವಿಷಯವಲ್ಲ. ಎಲ್.ಹನುಮಂತಯ್ಯ, ಸಯ್ಯದ್‌ ನಾಸೀರ್‌ ಹುಸೇನ್‌ಗೆ ನಿಗದಿ‌ಪಡಿಸುವ ಮತಗಳು ಬೇರೆಯವರಿಗೆ ಹೋದರೂ ಆಶ್ಚರ್ಯವಿಲ್ಲ. ಹೀಗಾಗಿ ಯಾರು ಯಾರನ್ನು ಸೆಳೆಯಲಿದ್ದಾರೆ ಎಂಬುದು ಸದ್ಯಕ್ಕಂತೂ ನಿಗೂಢ.

ಇನ್ನು ಬಿಜೆಪಿ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಯಾವುದೇ ನಿರ್ದಿಷ್ಟ ಪಕ್ಷದ ಬೆಂಬಲ ಇಲ್ಲದೆಯೂ ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಅನುಭವವಿರುವ ರಾಜೀವ್ ಚಂದ್ರಶೇಖರ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಪಕ್ಷದ ಎಲ್ಲ ಮತಗಳು ಅವರಿಗೆ ಸಿಕ್ಕಿದರೆ ಮಾತ್ರ ಗೆಲುವು ಸಲೀಸು.

ರಾಜ್ಯಸಭೆ ಚುನಾವಣೆ ಮುಗಿದ ಕೂಡಲೇ ಪಕ್ಷಾಂತರ ಪರ್ವ ಬಿರುಸಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಬಿಜೆಪಿಯಿಂದ ಕಾಂಗ್ರೆಸ್ ಅಥವಾ ಜೆಡಿಎಸ್‌ನತ್ತ ವಲಸೆ ಹೋಗಲಿರುವ ಶಾಸಕರು ಆ ಪಕ್ಷಗಳ ಅಭ್ಯರ್ಥಿಗಳಿಗೆ ಅಡ್ಡ ಮತದಾನ ಮಾಡಬಹುದು. ಹೀಗಾಗಿ, ‘ಖಚಿತ’ ಎನ್ನಬಹುದಾದ ಮತಗಳಲ್ಲದೇ ಹೆಚ್ಚುವರಿ ಮತಗಳನ್ನು ಸೆಳೆಯಲು ರಾಜೀವ್ ಚಂದ್ರಶೇಖರ್ ಚಿಂತನೆ ನಡೆಸುವ ಸಾಧ್ಯತೆಯೂ ಇದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT