ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಗಳಿಗೆ ರೈತರ ಅಭಿವೃದ್ಧಿ ಬೇಕಿಲ್ಲ: ಪ್ರೊ.ಕೆ.ಸಿ.ಬಸವರಾಜು ಆಕ್ರೋಶ

ಯುವ ರೈತರ ಶಿಬಿರ
Last Updated 21 ಸೆಪ್ಟೆಂಬರ್ 2018, 14:59 IST
ಅಕ್ಷರ ಗಾತ್ರ

ಚಾಮರಾಜನಗರ: ರೈತರ ವಿಚಾರದಲ್ಲಿ ಸರ್ಕಾರಗಳ ನೀತಿ ಇವತ್ತಿಗೂ ಬದಲಾಗಿಲ್ಲ. ಯಾವ ಸರ್ಕಾರಕ್ಕೂಕೃಷಿಕರ ಅಭಿವೃದ್ಧಿ ಬೇಕಾಗಿಲ್ಲ ಎಂದು ರೈತ ಚಳವಳಿಗಾರ ಪ್ರೊ.ಕೆ.ಸಿ.ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದ ಹೊಂಡರಬಾಳು ಅಮೃತಭೂ‌ಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ‌ಹಮ್ಮಿಕೊಂಡಿರುವ ಮೂರು ದಿನಗಳ ಯುವ ರೈತರ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

ಸರ್ಕಾರಗಳು ರೈತರು ತೀವ್ರ ಸಮಸ್ಯೆ ಎದುರಿಸುತ್ತಿರುವಾಗ ಬೆಂಬಲ ಬೆಲೆಯಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಬಿಟ್ಟರೆ ಇನ್ನೇನೂ ಮಾಡುತ್ತಿಲ್ಲ ಎಂದರು.

ಸರ್ಕಾರ ಕೈಗಾರಿಕೆ ಆಧಾರಿತ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ, ರೈತ ಚಳವಳಿ ಕೃಷಿ ಆಧಾರಿತ ಹೊಸ ಅಭಿವೃದ್ಧಿಯ ಪರಿಕಲ್ಪನೆಯನ್ನು ಹುಟ್ಟುಹಾಕಿತ್ತು. 1950ರ ದಶಕದಿಂದ 80ರ ದಶಕದವರೆಗಿನ 30 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕೈಗಾರಿಕೆ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಿತು. ಆದರೆ, ಕೃಷಿಕರ ಬದುಕು ನರಕವಾಯಿತು ಎಂದು ಹೇಳಿದರು.

‘1980ರ ಜುಲೈ 21ರಂದು ನವಲಗುಂದ– ನರಗುಂದದಲ್ಲಿ ನಡೆದ ರೈತ ಬಂಡಾಯ ರೈತ ಚಳವಳಿಗೆ ನಾಂದಿ ಹಾಡಿತು. ನಾವು ಅಭಿವೃದ್ಧಿಗೆ ಹೊಸ ವ್ಯಾಖ್ಯಾನವನ್ನೇ ಕೊಟ್ಟೆವು. ಹಳ್ಳಿಗಳಲ್ಲಿದ್ದಜಾತಿ ಕೂಪಗಳನ್ನು ಚಳವಳಿ ಅಲುಗಾಡಿಸಿತ್ತು’ ಎಂದರು.

‘ರೈತರ ಚಳವಳಿ, ಹೋರಾಟಗಳನ್ನು ಸರ್ಕಾರಗಳು ಹತ್ತಿಕ್ಕುತ್ತಲೇ ಬಂದಿವೆ. ಸಾಲಮನ್ನಾ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ 19 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 1980ರ ಸೆಪ್ಟೆಂಬರ್‌ 20ರಿಂದ 1982 ಅಕ್ಟೋಬರ್‌ 2ವರೆಗೆ ಚಳವಳಿ ನಡೆಸಿದ್ದೆವು. ಈ ಸಂದರ್ಭದಲ್ಲಿ ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 139 ಜನ ಸತ್ಯಾಗ್ರಹಿಗಳನ್ನು ಕೊಂದು ಹಾಕಿತ್ತು’ ಎಂದು ದೂರಿದರು.

‘ರೈತ ಚಳವಳಿಯ ನಾಯಕ ಪ್ರೊ.ನಂಜುಂಡಸ್ವಾಮಿ ಅವರನ್ನು ಕೊಲ್ಲುವ ಪ್ರಯತ್ನವೂ ಚಿಕ್ಕಮಗಳೂರಿನಲ್ಲಿ ನಡೆದಿತ್ತು’ ಎಂದು ಹೇಳಿದರು.

‘ರೈತ ಚಳವಳಿ ಆಗ ಎಷ್ಟು ಪ್ರಬಲವಾಗಿತ್ತು ಎಂದರೆ, 1982 ಅಕ್ಟೋಬರ್‌ 2ರಂದು ಬೆಂಗಳೂರಿನಲ್ಲಿ 25 ಲಕ್ಷ ರೈತರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಸೇರಿದ್ದರು. 1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಚಳವಳಿಗೆ ಸಾಧ್ಯವಾಗಿತ್ತು. ಚಳವಳಿಯಲ್ಲಿ ತೊಡಗಿಕೊಂಡಿರುವವರು ಸ್ಪರ್ಧಿಸಿದ್ದರೆ, ನಮಗೆ ಸರ್ಕಾರ ರಚಿಸುವ ಅವಕಾಶ ಇತ್ತು. ಆದರೆ, ರಾಜಕೀಯ ಪ್ರವೇಶಿಸಬಾರದು ಎಂಬ ಚಳವಳಿಯ ಸಿದ್ಧಾಂತಕ್ಕೆ ಬದ್ಧರಾಗಿದ್ದೆವು. ವೈಜ್ಞಾನಿಕ ಬೆಲೆ ನಿಗದಿ ಮತ್ತು ಸಾಲಮನ್ನಾ ಮಾಡುವುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಜನತಾ ಪರಿವಾರ ಕೂಡ ರೈತರಿಗೆ ಸ್ಪಂದಿಸಲಿಲ್ಲ’ ಎಂದರು.

1995–2010ರ ನಡುವಣ ರೈತ ಚಳವಳಿಯ ಬಗ್ಗೆ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ‘ರೈತರ ಆತ್ಮಹತ್ಯೆ ಪ್ರಕರಣಗಳು ಆರಂಭಗೊಂಡದ್ದು ಇದೇ ಅವಧಿಯಲ್ಲಿ.ರೈತ ಚಳವಳಿ ಕೂಡ ಒಡೆದು ಹೋಯಿತು’ ಎಂದರು.

‘ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ರೈತರಿಗೆ ತೋರಿಸಿಕೊಟ್ಟಿದ್ದು ಈ ಚಳವಳಿ. ರೈತರ ಹಕ್ಕನ್ನು ಮೊಟಕುಗೊಳಿಸುವಾಗ ಅದನ್ನು ಪ್ರಶ್ನಿಸಲು ಧೈರ್ಯ ನೀಡಿದ್ದು ಇದೇ ಚಳವಳಿ’ ಎಂದರು.

‘ಅಧಿಕಾರಕ್ಕಾಗಿ ಕಚ್ಚಾಟ’

‘ಯುವ ತಲೆಮಾರಿನ ರೈತ ಚಳವಳಿಗೆ ಸೈದ್ಧಾಂತಿಕ ನೆಲೆಗಟ್ಟು ಕೊಡುವ ಸಲುವಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. ರೈತ ಸಂಘಟನೆಗಳು ಗುಂಪುಗಳಾಗಿ ಒಡೆದು ಹೋಗುತ್ತಿವೆ. ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಪರಸ್ಪರರನ್ನು ಕಂಡರೆ ಆಗದಂತಹ ಸ್ಥಿತಿ ನಿರ್ಮಾಣ ಆಗಿದೆ. ಇದು ರೈತ ಚಳವಳಿಯಲ್ಲಿ ಮಾತ್ರ ಅಲ್ಲ, ಎಲ್ಲ ಕಡೆಯೂ ಇದೆ. ಆದರೆ, ನಮ್ಮಲ್ಲಿ ಜಾಸ್ತಿ ಆಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಪ್ರತಿಭಟನೆ, ಹೋರಾಟ, ಘೋಷಣೆಗಳು, ಪತ್ರಿಕಾಗೋಷ್ಠಿಗಳಿಗೆ ಸೀಮಿತವಾಗದೆ,ಪ್ರಚಾರಕ್ಕೆ ಆದ್ಯತೆ ನೀಡದೆ ನಾವೆಲ್ಲಒಂದು ಕಡೆ ಕುಳಿ‌ತು ಆತ್ಮಾವಲೋಕನ ಮಾಡಬೇಕು ಎಂದರು.

ಇದಕ್ಕೂ ಮುನ್ನ, ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಅವರು ಪ್ರೊ.ನಂಜುಂಡಸ್ವಾಮಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಶಿಬಿರದಲ್ಲಿ ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಕೋಲಾರ, ತುಮಕೂರು, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಗಳ ರೈತ ಮುಖಂಡರು ಭಾಗವಹಿಸಿದ್ದಾರೆ.

ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ವಿಭಾಗೀಯ ಉಪಾಧ್ಯಕ್ಷ ರಾಮೇಗೌಡ, ತುಮಕೂರಿನ ಯುವ ಮುಖಂಡ ಯತೀಶ್‌, ಮುಖಂಡ ಮಹೇಶಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT