ಬುಧವಾರ, ಆಗಸ್ಟ್ 21, 2019
22 °C

ಪ್ರವಾಹದಿಂದ ಶಿವಮೊಗ್ಗ ಪಾಲಿಕೆಗೆ ₹150 ಕೋಟಿ ನಷ್ಟ

Published:
Updated:

ಶಿವಮೊಗ್ಗ: ಮಳೆ ವಿರಾಮ ನೀಡಿದೆ. ನದಿ ಹರಿವು ಗಣನೀಯವಾಗಿ ಕಡಿಮೆಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲೇ 5 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕಚ್ಚಾ ಮನೆಗಳು ನೆಲಸಮವಾಗಿವೆ. ರಸ್ತೆಗಳು, ಸೇತುವೆ, ಮೋರಿಗಳು, ಕಟ್ಟಡಗಳು ಸೇರಿ 150 ಕೋಟಿ ಹಾನಿ ಸಂಭವಿಸಿದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಮಾಹಿತಿ ನೀಡಿದರು.

ನಗರದಲ್ಲಿ ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಪುನರ್ವಸತಿ ಸೇರಿದಂತೆ ಪರಿಹಾರ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲಾಗಿದೆ. ನಾಲ್ಕು ದಿನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಂದ 1,675 ನಾಗರಿಕರನ್ನು ರಕ್ಷಿಸಲಾಗಿದೆ. 556 ಜನರನ್ನು ಬೋಟ್‌ಗಳ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ಕರೆ ತರಲಾಗಿದೆ. 15 ಪರಿಹಾರ ಕೇಂದ್ರಗಳಲ್ಲಿ 2,500 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಅವರಿಗೆ ಊಟ, ಬಟ್ಟೆ, ಪಾದರಕ್ಷೆ, ಸ್ಯಾನಿಟರಿ ಪ್ಯಾಡ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಇನ್ನೂ 10 ದಿನಗಳು ನೆರೆ ಪರಿಹಾರ ಕೇಂದ್ರಗಳು ಮುಂದುವರಿಯುತ್ತವೆ. ಈ ಕೇಂದ್ರಗಳಲ್ಲಿ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಆಟವಾಡುವ ಸಾಮಾಗ್ರಿಗಳು, ಪೇಪರ್, ಟಿವಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿವರ ನೀಡಿದರು.

ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಲ್ಲಿ ಬಹುತೇಕ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಕೌನ್ಸೆಲಿಂಗ್ ನಡೆಸಲಾಗುವುದು. ಎಲ್ಲಾ ಪರಿಹಾರ ಕೇಂದ್ರಗಳಲ್ಲಿ ತಜ್ಞರನ್ನು ನಿಯೋಜಿಸಲಾಗುವುದು ಎಂದರು.

ಸ್ವೀಕಾರ ಕೇಂದ್ರ: ಸಂತ್ರಸ್ತರ ನೆರವಿಗೆ ಸಾಮಾಗ್ರಿಗಳನ್ನು ನೀಡುವಂತೆ ಮನವಿ ಮಾಡಲಾಗಿದೆ. ಪಾಲಿಕೆ ಕಚೇರಿಯಲ್ಲಿ ಸ್ವೀಕಾರ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಹಲವು ಮಂದಿ ನೆರವು ಒದಗಿಸಿದ್ದಾರೆ. ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಹೇಳಿದರು.

ವ್ಯವಸ್ಥಿತ ಪರಿಹಾರ ಕಾರ್ಯ: ಪರಿಹಾರ, ಪುನರ್ವಸತಿ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿದೆ. ವ್ಯವಸ್ಥಿತವಾಗಿ ಪರಿಹಾರ ಕಾರ್ ಕೈಗೊಳ್ಳಲು 10 ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪರಿಹಾರ ಕೇಂದ್ರ, ಆರೋಗ್ಯ ಮತ್ತು ಸ್ವಚ್ಛತೆ, ನೀರು ಪೂರೈಕೆ ಮತ್ತು ಪರೀಕ್ಷೆ, ಪರಿಹಾರ ವರದಿಗಳು, ಕೌಶಲ ತರಬೇತಿ, ನಾಶಗೊಂಡಿರುವ ದಾಖಲೆಗಳನ್ನು ಮತ್ತೆ ಸಿದ್ಧಪಡಿಸುವುದು, ಪುನರ್‍ವಸತಿ ಕಾರ್ಯ ಸೇರಿದಂತೆ ಹಲವು ಕ್ಷೇತ್ರ ಗುರುತಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ವಿವರ ನೀಡಿದರು.

Post Comments (+)