ಚಿಕ್ಕಬಳ್ಳಾಪುರ: ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೂರು ವರ್ಷಗಳಿಂದ ಬರದ ಛಾಯೆಯಲ್ಲಿ ನರಳಿದ ಜಿಲ್ಲೆಯ ರೈತರ ಮೊಗದಲ್ಲಿ ನಗು ಅರಳಿಸಲು ಸೌಲಭ್ಯದ ಜೊತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ.
ಬಿತ್ತನೆ ಬೀಜ: ಮುಂಗಾರು ಹಂಗಾಮಿನಲ್ಲಿ 19,070 ಕ್ವಿಂಟಲ್ ವಿವಿಧ ಬಿತ್ತನೆ ಬೀಜದ ಅಗತ್ಯವಿದೆ. ಇದುವರೆಗೆ ಜಿಲ್ಲೆಯಲ್ಲಿ 9600 ಕ್ವಿಂಟಲ್ ಬಿತ್ತನೆ ಬೀಜ ಲಭ್ಯ ಇದೆ. ತಿಂಗಳಾಂತ್ಯದಲ್ಲಿ 26 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ.
ರಸಗೊಬ್ಬರ: ಪ್ರಸಕ್ತ ಮುಂಗಾರು ಹಂಗಾಮಿಗೆ 48,270 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳು ಹಂಚಿಕೆಯಾಗಿದ್ದು, ನಿಗಮದ ಶಾಖೆಯಲ್ಲಿ 3439 ಮೆಟ್ರಿಕ್ ಟನ್, ಖಾಸಗಿ ಮಾರಾಟಗಾರರ ಬಳಿ 13,003 ಮೆಟ್ರಿಕ್ ಟನ್ ದಾಸ್ತಾನು ಇದೆ.
ಭೂ ಚೇತನ ಯೋಜನೆ: ಈ ವರ್ಷ 1,17,500 ಹೆಕ್ಟೇರ್ ಪ್ರದೇಶದಲ್ಲಿ ಭೂ ಚೇತನ ಯೋಜನೆ ಅನುಷ್ಠಾನಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇದರಲ್ಲಿ 41,300 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 39,200 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, 2000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಮತ್ತು 3500 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆಯುವ ಗುರಿ ಹೊಂದಲಾಗಿದೆ.
ನೀರಿನ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹಿಸಲು ಮತ್ತು ರಸಗೊಬ್ಬರ ಶೇಖರಿಸಲು ಮುಂದಾಗಿದೆ.
ಕಳೆದೆರಡು ದಿನಗಳಿಂದ ಹವಾಮಾನದಲ್ಲಿ ಕೊಂಚ ಬದಲಾವಣೆ ಕಂಡು ಬಂದಿದ್ದು, ಮುಂಗಾರು ಸಕಾಲಕ್ಕೆ ಕಾಣಿಸಿಕೊಳ್ಳುವ ಮುನ್ಸೂಚನೆ ದೊರೆತಿದೆ. ರೈತರು ನಿರಾಸೆಗೊಳ್ಳದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರನ್ನು ಹುರಿದುಂಬಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯಕ್ಕೆ ವಾಡಿಕೆ ಮಳೆ 5 ಸೆಂ.ಮೀ ಆಗಬೇಕಾಗಿತ್ತು, 1.5 ಸೆಂ.ಮೀ ಮಾತ್ರ ಮಳೆಯಾಗಿದೆ. ಶೇ 70 ರಷ್ಟು ಮಳೆ ಕೊರತೆಯಾಗಿದೆ.
ಮೇ ತಿಂಗಳ ವಾಡಿಕೆ ಮಳೆ 7.3 ಸೆಂ.ಮೀ ಯಷ್ಟು ನಿರೀಕ್ಷಿಸಲಾಗಿದ್ದು, ಮೇ 14ರವರೆಗೆ 1.4 ಸೆಂ.ಮೀ ಮಳೆಯಾಗಿದೆ.
‘ಜಿಲ್ಲೆಯ ವಾಡಿಕೆ ಮಳೆಯು 7.50 ಸೆಂ.ಮೀ ಆಗಿದ್ದು, ಕಳೆದ ವರ್ಷ 5.78 ಸೆಂ.ಮೀ ಮಾತ್ರವೇ ಮಳೆಯಾಯಿತು. ಶೇ 2.7 ಸೆಂ.ಮೀ ನಷ್ಟು ಮಳೆ ಕೊರತೆಯಾಯಿತು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ಮಳೆ ನಿರೀಕ್ಷಿಸಿದ್ದೇವೆ. 97,300 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 17,200 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, 39150 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳು ಮತ್ತು 350 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳು ಸೇರಿ ಒಟ್ಟಾರೆ 1,54,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುವ ನಿರೀಕ್ಷೆಯಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ.ರಾಮದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಟ್ಟು 43,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 49,300 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, 9,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 5,500 ಹೆಕ್ಟೇರ್ ಪ್ರದೇಶದಲ್ಲಿ ಅವರೆಕಾಳು ಮತ್ತು 37,850 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆಯುವ ನಿರೀಕ್ಷೆ ಇದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.