ಶನಿವಾರ, ಡಿಸೆಂಬರ್ 14, 2019
24 °C
ಎನ್.ರಾಧಾಕೃಷ್ಣ ದಂಪತಿ ಆಸ್ತಿ ಮೌಲ್ಯ ₹35.59 ಕೋಟಿ, ಒಂದು ಅಪರಾಧ ಪ್ರಕರಣ ಬಾಕಿ

ಚಿಕ್ಕಬಳ್ಳಾಪುರ ಜೆಡಿಎಸ್‌ ಅಭ್ಯರ್ಥಿಗೆ ₹100 ಕೋಟಿ ಹೊಣೆಗಾರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾಸಭೆ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರಿಗೆ ಆಸ್ತಿಗಿಂತಲೂ ಮೂರು ಪಟ್ಟು ಹೆಚ್ಚಿನ ಹಣಕಾಸಿನ ಹೊಣೆಗಾರಿಕೆ ಇದೆ. ರಾಧಾಕೃಷ್ಣ ಅವರ ಬಳಿ ₹35.59 ಕೋಟಿ ಆಸ್ತಿ ಇದ್ದರೆ, ವ್ಯವಹಾರಿಕವಾಗಿ ಅವರು ಬೇರೆ ವ್ಯಕ್ತಿಗಳಿಂದ ₹100 ಕೋಟಿ ಮುಂಗಡವಾಗಿ ಪಡೆದುಕೊಂಡಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಜಂಗಕೋಟೆ ಹೋಬಳಿಯ ನಾಗಮಂಗಲದ ರಾಧಾಕೃಷ್ಣ ಅವರು ಚುನಾವಣಾಧಿಕಾರಿ ಅವರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿವರ ನಮೂದಿಸಿದ್ದಾರೆ. ರಾಧಾಕೃಷ್ಣ ಮತ್ತು ಮತ್ತು ಅವರ ಪತ್ನಿ ಎಂ.ಈ.ಮೀರಾ ಅವರು ಉದ್ದಿಮೆದಾರರಾಗಿದ್ದಾರೆ.

ಈ ದಂಪತಿಯ ಬಳಿ ಒಟ್ಟು ₹33.97 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ರಾಧಾಕೃಷ್ಣ ಅವರ ಹೆಸರಿನಲ್ಲಿ ₹21.66 ಕೋಟಿ, ಮೀರಾ ಅವರ ಹೆಸರಿನಲ್ಲಿ ₹12.30 ಕೋಟಿ ಸ್ಥಿರಾಸ್ತಿ ಇದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು ಸ್ಥಿರಾಸ್ತಿಯ ಪೈಕಿ ₹7.25 ಕೋಟಿ ಮೌಲ್ಯದ 10 ಎಕರೆ ಕೃಷಿ ಭೂಮಿ, ₹4.41 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ₹10 ಕೋಟಿ ಬೆಲೆ ಬಾಳುವ ವಸತಿ ಕಟ್ಟಡಗಳು ರಾಧಾಕೃಷ್ಣ ಅವರ ಹೆಸರಿನಲ್ಲಿವೆ. ಮೀರಾ ಅವರ ಹೆಸರಿನಲ್ಲಿ ₹4.65 ಕೋಟಿ ಮೌಲ್ಯದ 29 ಎಕರೆ 6 ಗುಂಟೆ ಕೃಷಿ ಭೂಮಿ, ₹7.67 ಕೋಟಿ ಬೆಲೆಬಾಳುವ ವಾಣಿಜ್ಯ ಕಟ್ಟಡಗಳಿವೆ.

ರಾಧಾಕೃಷ್ಣ ಅವರ ಕುಟುಂಬದವರ ಬಳಿ ನಗದು, ವಾಹನ, ಆಭರಣಗಳು ಸೇರಿದಂತೆ ₹1.62 ಕೋಟಿ ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ ರಾಧಾಕೃಷ್ಣ ಅವರ ಬಳಿ ಒಂದು ಲ್ಯಾನ್ಸರ್ ಕಾರು, ₹8.60 ಲಕ್ಷ ಠೇವಣಿಗಳು ಸೇರಿದಂತೆ ₹15.40 ಲಕ್ಷದ ಆಸ್ತಿ ಇದೆ. ಮೀರಾ ಅವರ ಹತ್ತಿರ ₹27.75 ಲಕ್ಷ ಮೌಲ್ಯದ 3 ಕೆ.ಜಿ 330 ಗ್ರಾಂ ಚಿನ್ನ, 12 ಕೆ.ಜಿ 50ಗ್ರಾಂ ಬೆಳ್ಳಿ, ಒಂದು ಸಫಾರಿ ಕಾರು, ₹3 ಲಕ್ಷ ಬ್ಯಾಂಕ್ ಶಿಲ್ಕು ಸೇರಿದಂತೆ ₹1.47 ಕೋಟಿ ಚರಾಸ್ತಿ ಇದೆ.

ಚುನಾವಣೆ ಕಣಕ್ಕೆ ಇಳಿದಿರುವ ರಾಧಾಕೃಷ್ಣ ಅವರ ಕೈಯಲ್ಲಿ ಸದ್ಯ ₹8.60 ಲಕ್ಷ ಮತ್ತು ಮೀರಾ ಅವರ ಕೈಯಲ್ಲಿ ₹3 ಲಕ್ಷ ನಗದು ಇದೆ.
ರಾಧಾಕೃಷ್ಣ ಅವರು ದಂಪತಿಗೆ ₹100 ಕೋಟಿ ಹಿಂದಿರುಗಿಸಬಹುದಾದ ಮೊತ್ತದ ಹೊಣೆಗಾರಿಕೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪೈಕಿ ಮೀರಾ ಅವರು ಎರಡು ಸಂಸ್ಥೆಗಳಿಗೆ ಮತ್ತು ಮೂರು ವ್ಯಕ್ತಿಗಳಿಗೆ ಸೇರಿ ಒಟ್ಟು ₹15.18 ಕೋಟಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ರಾಧಾಕೃಷ್ಣ ಅವರು ₹84.91 ಕೋಟಿ ಮುಂಗಡ ಸ್ವೀಕೃತಿ ಬಂದಿದೆ ಎಂದು ತೋರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು