ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಗೆ 10 ಸಂಚಾರಿ ಪಶು ಚಿಕಿತ್ಸಾಲಯ

ಹೊಸ ತಾಲ್ಲೂಕು ಚೇಳೂರು, ಮಂಚೇನಹಳ್ಳಿಗೂ ಸೌಲಭ್ಯ
Last Updated 9 ಮೇ 2022, 2:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಜಿಲ್ಲೆಗೆ 10 ಸಂಚಾರಿ ಪಶು ಚಿಕಿತ್ಸಾಲಯಗಳು ದೊರೆತಿವೆ.

ರಾಜ್ಯದಲ್ಲಿ ಗರಿಷ್ಠ ಎನ್ನುವಂತೆ ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಮಾತ್ರ ತಲಾ 10 ಸಂಚಾರಿಪಶು ಚಿಕಿತ್ಸಾಲಯಗಳನ್ನು ನೀಡಲಾಗಿದೆ. ಹೊಸದಾಗಿ ರಚನೆಯಾಗಿರುವ ಮಂಚೇನಹಳ್ಳಿ ಮತ್ತು ಚೇಳೂರು ತಾಲ್ಲೂಕು ಕೇಂದ್ರಗಳು ಸೇರಿದಂತೆ ಜಿಲ್ಲೆಯ 8 ತಾಲ್ಲೂಕುಗಳಿಗೆ ತಲಾ ಒಂದರಂತೆ ಚಿಕಿತ್ಸಾಲಯಗಳು ದೊರೆತಿವೆ.

ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರು ಹೋಬಳಿ ಕೇಂದ್ರಗಳಿಗೂ ಈ ಸೌಲಭ್ಯಗಳು ದೊರೆತಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ಪಶು ಸಂಚಾರಿ ಚಿಕಿತ್ಸಾಲಯವಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ದೊರೆತಿರುವ ವಾಹನವನ್ನು ಪೆರೇಸಂದ್ರಕ್ಕೆ ನೀಡಲು ಜಿಲ್ಲಾ ಪಶುಸಂಗೋಪನಾ ಇಲಾಖೆ ಮುಂದಾಗಿದೆ. ಈ ಪ್ರಕಾರ ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿಗೆ ಎರಡು ವಾಹನಗಳ ಸೌಲಭ್ಯ ದೊರೆಯಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಲಕ್ಷ ಜಾನುವಾರುಗಳು ಮತ್ತು 8 ಲಕ್ಷ ಕುರಿ, ಮೇಕೆ ಮತ್ತಿತರ ಪ್ರಾಣಿಗಳು ಇವೆ. ತಲಾ ಒಂದು ಲಕ್ಷಕ್ಕೆ ಒಂದರಂತೆ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಸರ್ಕಾರ ನೀಡಿದೆ. ರಾಜ್ಯದಲ್ಲಿ ಜಾನುವಾರುಗಳು ಮತ್ತು ಕುರಿ, ಮೇಕೆಗಳು ಹೆಚ್ಚಿರುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವೂ ಸಹ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನದಾಗಿಯೇ ಸಂಚಾರಿ ಪಶು ಚಿಕಿತ್ಸಾಲಯಗಳು ದೊರೆತಿವೆ.

ಏನಿದು ಯೋಜನೆ: ಪಶುಗಳು, ಕರಿ, ಮೇಕೆ ಮತ್ತಿತರ ಪ್ರಾಣಿಗಳಿಗೆ ಚಿಕಿತ್ಸೆ, ಕೃತಕ ಗರ್ಭಧಾರಣೆಯ ಕೆಲಸಗಳಿಗೆ ರೈತರು ತಮ್ಮ ಜಾನುವಾರುಗಳನ್ನು ಪಶು ಚಿಕಿತ್ಸಾಲಯಗಳಿಗೆ ಕೊಂಡೊಯ್ಯಬೇಕಿಲ್ಲ. ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಪಶು ವೈದ್ಯರು, ತಜ್ಞ ಸಿಬ್ಬಂದಿ, ಉಪಕರಣ, ಔಷಧಿಯನ್ನು ಹೊತ್ತ ಸಂಚಾರಿ ಚಿಕಿತ್ಸಾಲಯವೇ ಮನೆ ಬಾಗಿಲಿಗೆ ಬರಲಿದೆ.

ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ನೆರವಿನಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆ ಒದಗಿಸಲಾಗುತ್ತಿದೆ. ₹ 44 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 275 ಸಂಚಾರ ಪಶು ಚಿಕಿತ್ಸಾಲಯಗಳನ್ನು ಸೇವೆಗೆ ಒದಗಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ 70 ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಶನಿವಾರ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಈ ಭಾಗವಾಗಿ ಶನಿವಾರವೇ ಜಿಲ್ಲೆಗೆ 10 ಸಂಚಾರಿ ಪಶು ಚಿಕಿತ್ಸಾಲಯಗಳು ದೊರೆತಿವೆ.

ಸೌಲಭ್ಯಗಳೇನು: ಸುಸಜ್ಜಿತ ವಾಹನಗಳನ್ನು ಸಂಚಾರಿ ಪಶು ಚಿಕಿತ್ಸಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅದರಲ್ಲಿ ಒಬ್ಬ ಪಶುವೈದ್ಯರು, ಒಬ್ಬ ಪಶು ವೈದ್ಯಕೀಯ ಸಹಾಯಕ, ಒಬ್ಬ ‘ಡಿ’ ದರ್ಜೆ ನೌಕರ ಮತ್ತು ಚಾಲಕ ಇರುತ್ತಾರೆ.

ಹವಾನಿಯಂತ್ರಣ
ವ್ಯವಸ್ಥೆ, ಫ್ಯಾನ್‌, ಬಿಸಿ ನೀರು ಕಾಯಿಸಲು ಗೀಸರ್‌, ಪ್ರಾಣಿಗಳ ದೇಹದ ತೂಕ ಮಾಪನಕ್ಕೆ ಯಂತ್ರ, ವೈದ್ಯಕೀಯ ಪರಿಕರಗಳನ್ನು
ಇರಿಸುವ ಪೆಟ್ಟಿಗೆ, ಔಷಧಿಗಳನ್ನು ಇರಿಸಲು ಫ್ರಿಡ್ಜ್‌, ಸಿಬ್ಬಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಪ್ರಾಣಿಗಳನ್ನು ವಾಹನದೊಳಕ್ಕೆ ಹತ್ತಿಸಿ, ಅಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲು ಸ್ಥಳಾವಕಾಶವಿದೆ.

‘1962 ಸಹಾಯವಾಣಿಗೆ ಕರೆ ಮಾಡಿ’

ರೈತರು ಅಥವಾ ರಾಸುಗಳನ್ನು ಹೊಂದಿರುವವರು ಚಿಕಿತ್ಸೆಗಾಗಿ 1962 ಸಹಾಯವಾಣಿಗೆ ಕರೆ ಮಾಡಬೇಕು. ಇದು ರಾಜ್ಯ ಮಟ್ಟದ ಸಹಾಯವಾಣಿ ಆಗಿದೆ. ಅಲ್ಲಿಂದ ಆಯಾ ಸಂಚಾರಿ ಪಶು ಚಿಕಿತ್ಸಾಲಯದ ವೈದ್ಯರಿಗೆ ಮಾಹಿತಿ ನೀಡಲಾಗುತ್ತದೆ. ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವರು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಜಿಲ್ಲೆಗೆ 10 ವಾಹನಗಳನ್ನು ಸರ್ಕಾರ ನೀಡಿದೆ. ‌ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಸಿಬ್ಬಂದಿ ನೇಮಕದ ತರುವಾಯ ಚಿಕಿತ್ಸಾಲಯಗಳು ಕಾರ್ಯಾಚರಣೆ ನಡೆಸಲಿವೆ. ಈ ಚಿಕಿತ್ಸಾಲಯಗಳಿಂದ ರೈತರಿಗೆ ಹೆಚ್ಚಿನ ಅನುಕೂಲಗಳು ಆಗಲಿವೆ. ರೈತರು ಇವುಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT