ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾತ್ಮರ ಹೆಜ್ಜೆ ಗುರುತುಗಳು

ಗಾಂಧಿ ಜಯಂತಿ –150ನೇ ಜನ್ಮದಿನಾಚರಣೆ
Last Updated 30 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಹಲವು ಹೆಜ್ಜೆ ಗುರುತುಗಳಿವೆ. ಅವರ ಪ್ರಭಾವ ಹಲವು ರೀತಿಯಲ್ಲಿ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿಯವರ ಭೇಟಿಯ ಇಣುಕು ನೋಟವಿದು.

1927ರಲ್ಲಿ ರಕ್ತದ ಒತ್ತಡ ಹೆಚ್ಚಾಗಿ ಗಾಂಧೀಜಿಯವರ ಆರೋಗ್ಯ ಬಹಳ ಕೆಟ್ಟಿತ್ತು. ವೈದ್ಯರ ಅಭಿಪ್ರಾಯದಂತೆ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ 45 ದಿನಗಳ ಕಾಲ ತಂಗಿದ್ದರು.

‘ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಗಾಂಧೀಜಿಯನ್ನು ಆರೈಕೆ ಮಾಡಲು ಬಂದಿದ್ದ ಸ್ವಯಂಸೇವಕರ ಶ್ರದ್ಧೆ ಅಪಾರ. ನಂದಿಯಲ್ಲಿ ವಸತಿ ಮಾಡಿದಾಗ ತಗಲುವ ವೆಚ್ಚವನ್ನು ತಾವು ಕೊಡುವುದಾಗಿ ಗಾಂಧೀಜಿಗೆ ಚಿಕ್ಕಬಳ್ಳಾಪುರದ ಜನ ಒತ್ತಾಯ ಮಾಡಿದರು. ರಾಜಾಜಿಯವರ ಸಲಹೆಯ ಮೇರೆಗೆ ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಸ್ವಯಂಸೇವಕರ ಒಂದು ವಸತಿಯನ್ನೇ ಏರ್ಪಾಡು ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಜನರಂತೂ ಪ್ರತಿಯೊಂದು ಚಿಕ್ಕಪುಟ್ಟ ವಿಷಯಕ್ಕೂ ಗಮನ ಕೊಡುತ್ತಿದ್ದಾರೆ. ಗಾಂಧೀಜಿಯನ್ನು ಈ ಬೆಟ್ಟಕ್ಕೆ ಹೊತ್ತು ತಂದ ಕುರ್ಚಿಯ ಮೇಲೆ ಕಟ್ಟಿದ್ದ ಬಟ್ಟೆ ಖಾದಿಯದು. ಈ ಕುರ್ಚಿಯನ್ನು ಹೊತ್ತು ತಂದವರೆಲ್ಲರೂ ಖಾದಿಧಾರಿಗಳು. ಈ ತರುಣ ಶ್ರದ್ಧಾವಂತರ ಸೇವೆ, ಜನರ ಶುಶ್ರೂಷೆಯ ಶ್ರದ್ಧೆ ಗಾಂಧೀಜಿಯನ್ನು ಮತ್ತೆ ಎಂದಿನಂತೆ ತಮ್ಮ ಕೆಲಸ ಮಾಡಲು ಹುರಿದುಂಬಿಸುತ್ತಿವೆ’ ಎಂದು ಮಹದೇವದೇಸಾಯಿ ದಾಖಲಿಸಿದ್ದಾರೆ.

ಜೂನ್ ಮೊದಲ ವಾರ, ನಂದಿಬೆಟ್ಟದಿಂದ ಇಳಿದು ಗಾಂಧೀಜಿ ಬೆಂಗಳೂರಿನ ಕಡೆಗೆ ಹೊರಟರು. ದಾರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪ ಹೊತ್ತು ತಂಗಿದ್ದರು. ಚಿಕ್ಕಬಳ್ಳಾಪುರದ ಜನಕ್ಕೆ ಸೂಚನೆ ಮೊದಲೇ ಕೊಟ್ಟಿರಲಿಲ್ಲ. ಆದರೂ ಅವರು ಶಕ್ತಿ ಮೀರಿ ಪ್ರಯತ್ನ ಮಾಡಿ ಒಂದು ನಿಧಿಯನ್ನು ಸಂಗ್ರಹಿಸಿ ನೀಡಿದ್ದರು.

ಗಾಂಧಿ ನಿಲಯ: ನಂದಿ ಬೆಟ್ಟದ ಮೇಲೆ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್‌ಹ್ಯಾಂ ನಿರ್ಮಿಸಿದ್ದ ‘ಓಕ್‌ಲ್ಯಾಂಡ್ಸ್’ ಭವನದಲ್ಲಿ ಗಾಂಧೀಜಿಯವರು ಉಳಿದಿದ್ದರು. ಗಾಂಧೀಜಿಯವರು ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ ಅದನ್ನೀಗ ‘ಗಾಂಧಿನಿಲಯ’ ಎಂದು ಮರುನಾಮಕರಣ ಮಾಡಲಾಗಿದೆ. ಗಾಂಧೀಜಿಯವರ ಪ್ರತಿಮೆಯೂ ಅಲ್ಲಿದೆ.

ಗಾಂಧಿ ಸರ್ಕಾರಿ ಪ್ರೌಢಶಾಲೆ: ಈ ಪ್ರವಾಸದಲ್ಲಿ ಗಾಂಧೀಜಿ ಚಿಂತಾಮಣಿ ನಗರದಲ್ಲಿರುವ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ದಿನ ರಾತ್ರಿ ವಾಸ್ತವ್ಯ ಹೂಡಿದ್ದರು. ಹೀಗಾಗಿ ಅವರು ತಂಗಿದ್ದ ಶಾಲೆಗೆ ‘ಗಾಂಧಿ ಸರ್ಕಾರಿ ಪ್ರೌಢಶಾಲೆ’ ಎಂದು ಕರೆಯುತ್ತಾರೆ.

ಗಾಂಧಿಪುರ: ನಂದಿಬೆಟ್ಟದಲ್ಲಿ ತಂಗಿದ್ದ ಗಾಂಧೀಜಿ ಅವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಾಂಧಿಪುರ ಗ್ರಾಮಸ್ಥರೇ ಹೆಚ್ಚಿನ ನೆರವು ನೀಡಿದ್ದರು. ಗ್ರಾಮಸ್ಥರು ಸಿದ್ಧಪಡಿಸಿದ್ದ ಡೋಲಿಯಲ್ಲೇ ಬೆಟ್ಟವನ್ನೇರಿದ್ದರು. ಗಾಂಧೀಜಿಗೆ ಬೆಟ್ಟದ ಮೇಲೆ ಹಾಲು, ರಾಗಿ, ಗಂಜಿ, ನೀರು ಮುಂತಾದವನ್ನು ಗ್ರಾಮಸ್ಥರೇ ಪೂರೈಸುತ್ತಿದ್ದರು. ಗಾಂಧೀಜಿಯೊಂದಿಗಿನ ನಂಟಿನೊಂದಿಗೆ ಗಾಂಧಿಪುರ ಎಂಬ ಹೆಸರು ಪಡೆದ ಗ್ರಾಮ ಈಗ ‘ಮಡಕುಹೊಸಹಳ್ಳಿ’ ಎಂದು ಮರು ನಾಮಕರಣಗೊಂಡಿದೆ

ಚಿತಾಭಸ್ಮ: ಗಾಂಧೀಜಿಯವರ ಹತ್ಯೆಯ ನಂತರ ಅವರ ಚಿತಾಭಸ್ಮ ಕಳಸವನ್ನು ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ತಂದು ನಂದಿಬೆಟ್ಟದ ಅಮೃತಸರೋವರ ಮತ್ತು ಕೋಲಾರದ ಅಂತರಗಂಗೆಯಲ್ಲಿ ವಿಸರ್ಜನೆ ಮಾಡಿಸಿದ್ದರು. ಆ ಸಮಯದಲ್ಲಿ ಕನಿಂಗ್‌ಹ್ಯಾಂ ನಿರ್ಮಿಸಿದ್ದ ‘ಓಕ್‌ಲ್ಯಾಂಡ್ಸ್’ ಭವನದಲ್ಲಿ ಭಜನೆ ಮತ್ತು ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಪತ್ರಗಳು:ತಮಗೆ ಯಾರೇ ಪತ್ರ ಬರೆದರೂ ಉತ್ತರಿಸುತ್ತಿದ್ದ ಗಾಂಧೀಜಿ ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದರೂ ಪತ್ರಗಳನ್ನು ಬರೆಯುತ್ತಿದ್ದರು. ಶಂಕರನ್ (ಏಪ್ರಿಲ್ 28, 1927), ದಕ್ಷಿಣ ಆಫ್ರಿಕದಲ್ಲಿ ಗಾಂಧೀಜಿಯವರ ಸಹಚರರಾಗಿದ್ದ ಜರ್ಮನಿ ಮೂಲದ ಹರ್ಮನ್ ಕಾಲೆನ್ ಬಾಕ್ (ಮೇ 13, 1927) ಮತ್ತು ಗುಲ್ಜಾರಿಲಾಲ್ ನಂದ (ಮೇ 28, 1927) ಬರೆದಿರುವ ಪತ್ರಗಳ ಪೂರ್ಣ ಪಾಠ ‘ಮಹಾತ್ಮ ಗಾಂಧಿಯವರ ಆಯ್ದ ಪತ್ರಗಳು’ ಪುಸ್ತಕದಲ್ಲಿ ದಾಖಲಾಗಿವೆ.

ಅರಳಿದ ಪ್ರೇಮ:ನಂದಿಬೆಟ್ಟದಲ್ಲಿ ಗಾಂಧೀಜಿಯವರ ಸೇವೆಯಲ್ಲಿ ನಿರತರಾಗಿದ್ದ ಸಮಯದಲ್ಲಿ ಅವರ ಕಿರಿಯ ಮಗ ದೇವದಾಸ್ ಗಾಂಧಿ ಮತ್ತು ರಾಜಗೋಪಾಲಾಚಾರಿ ಅವರ ಎರಡನೇ ಮಗಳು ಲಕ್ಷ್ಮೀದೇವಿ, ಇಬ್ಬರ ನಡುವಿನ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹವಾಗಲು ನಿಶ್ಚಯಿಸಿದರು. ಬ್ರಾಹ್ಮಣರಾದ ರಾಜಾಜಿಯವರಿಗೆ ತಮ್ಮ ಮಗಳು ಬನಿಯ ಜಾತಿಯ ಹುಡುಗನನ್ನು ವಿವಾಹವಾಗಲು ಮೊದಲು ಇಷ್ಟವಿರಲಿಲ್ಲ. ನಂತರ ಒಪ್ಪಿದರು. ಈ ಅಂತರ್ಜಾತಿ ವಿವಾಹಕ್ಕೆ ಗಾಂಧೀಜಿಯವರೂ ಒಪ್ಪಿದರಾದರೂ, ‘ಐದು ವರ್ಷ ಒಬ್ಬರನ್ನೊಬ್ಬರು ಭೇಟಿ ಆಗಬಾರದು ಮತ್ತು ಪತ್ರ ವ್ಯವಹಾರ ಮಾಡಬಾರದು’ ಎಂಬ ಕರಾರು ವಿಧಿಸಿದರು. ಐದು ವರ್ಷದ ನಂತರ ಇಬ್ಬರು ಪ್ರೇಮಿಗಳು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು.

ಹರಿಜನ ನಿಧಿಗಾಗಿ ಪ್ರವಾಸ
ಕೋಲಾರ ಜಿಲ್ಲಾ ಬೋರ್ಡಿನ ಅಧ್ಯಕ್ಷ ಹಾಗೂ ಜಿಲ್ಲಾ ಹರಿಜನ ಸೇವಕ ಸಂಘದ ಅಧ್ಯಕ್ಷ ಕೆ.ಚಂಗಲರಾಯರೆಡ್ಡಿ, ಗಾಂಧೀಜಿಯನ್ನು ನಂದಿಬೆಟ್ಟದಲ್ಲಿ ಕಂಡು, ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಬೇಡಿಕೊಂಡರು. ಹರಿಜನ ನಿಧಿಗಾಗಿ ಹಣ ಸಂಗ್ರಹಿಸುವುದು ಅವರ ಉದ್ದೇಶವಾಗಿತ್ತು. ಅದರಂತೆ ನಂದಿಬೆಟ್ಟವನ್ನಿಳಿದು ಬೆಂಗಳೂರಿಗೆ ಬರುವ ಮುನ್ನ ಅವಿಭಾಜ್ಯ ಕೋಲಾರ ಜಿಲ್ಲೆಯಲ್ಲಿ ಕೆಲವು ಸ್ಥಳಗಳನ್ನು ಗಾಂಧೀಜಿ ನೋಡಿ ಬಂದರು. ಒಂದು ಸಾವಿರದ ಆರುನೂರು ರೂಪಾಯಿ ಸಂಗ್ರಹವಾಯಿತು.

ಸುಲ್ತಾನ್ ಪೇಟೆಯಲ್ಲಿ ಕಾರನ್ನು ಏರಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಬಂಗಾರಪೇಟೆ ಹಾಗೂ ಕೆಜಿಎಫ್‌ಗಳಲ್ಲಿ ಹರಿಜನ ನಿಧಿ ಸಂಗ್ರಹಿಸಿ ಮಾಲೂರು ಮಾರ್ಗವಾಗಿ ಬೆಂಗಳೂರಿಗೆ ಗಾಂಧೀಜಿ ತೆರಳಿದರು. ಚಿಕ್ಕಬಳ್ಳಾಪುರದ ಪ್ರೌಢಶಾಲೆಯ ಬಳಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಪುರಸಭೆಯವರು ₹ 100 ದೇಣಿಗೆ ನೀಡಿದರು. ಶಿಡ್ಲಘಟ್ಟದಲ್ಲಿ ಪುರಸಭೆ ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ ಗಾಂಧೀಜಿಗೆ ಮಾನಪತ್ರ ಅರ್ಪಿಸಿ ₹ 100 ದೇಣಿಗೆ ನೀಡಿದರು.

ಚಿಂತಾಮಣಿಯಲ್ಲಿ ಪುರಸಭೆಯವರು ₹ 200 ದೇಣಿಗೆ ಅರ್ಪಿಸಿದರು. ಹಾದಿಯುದ್ದಕ್ಕೂ ಗ್ರಾಮಗಳ ಬಳಿ ತೋರಣ ಕಟ್ಟಿ ಅಲಂಕರಿಸಿದ್ದ ಗ್ರಾಮಸ್ಥರು ಗಾಂಧೀಜಿಗೆ ಹೂ ಮಾಲೆ ಅರ್ಪಿಸಿ ಶಕ್ತ್ಯಾನುಸಾರ ದೇಣಿಗೆ ಅರ್ಪಿಸಿದರು. ಗಾಂಧೀಜಿಯವರ ಇಂಗ್ಲಿಷ್ ಭಾಷಣವನ್ನು ಕೆ.ಚಂಗಲರಾಯರೆಡ್ಡಿ (ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಮೊದಲ ಮುಖ್ಯಮಂತ್ರಿ) ಅನುವಾದಿಸುತ್ತಿದ್ದರು.

ಮತ್ತೊಮ್ಮೆ ನಂದಿಬೆಟ್ಟಕ್ಕೆ ಭೇಟಿ:1936, ಮೇ ತಿಂಗಳ 10ನೇ ತಾರೀಖು ಗಾಂಧೀಜಿ ನಂದಿಬೆಟ್ಟಕ್ಕೆ ಬಂದವರು, 20 ದಿನಗಳ ಕಾಲ ಇದ್ದರು. ಅವರೊಂದಿಗೆ ಕಸ್ತೂರಬಾ, ವಲ್ಲಭಬಾಯಿ, ಮಹದೇವ ದೇಸಾಯಿ, ಮಣಿಬೆನ್ ಸಹ ಇದ್ದರು. ಈ ಸಂದರ್ಭದಲ್ಲಿ ನಂದಿಬೆಟ್ಟದ ಪಕ್ಕದ ಚನ್ನಗಿರಿ ಬೆಟ್ಟದಲ್ಲಿದ್ದ ಸದ್ಗುರು ಓಂಕಾರ ಸ್ವಾಮಿಗಳು (ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿ) ಬಂದು ಗಾಂಧೀಜಿಯನ್ನು ಭೇಟಿ ಮಾಡಿ ಸುಮಾರು 2 ಗಂಟೆ ಕಾಲ ಆತ್ಮವಿದ್ಯೆಯ ಕುರಿತು ಚರ್ಚಿಸಿದ್ದರು (ಮೇ 30).

ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಸಂಪಾದಿಸಿರುವ ಗಾಂಧಿ ಮತ್ತು ಕರ್ನಾಟಕದಲ್ಲಿನ ಚಿತ್ರ ಸಂಗ್ರಹದಲ್ಲಿನ 1927ರಲ್ಲಿ ನಂದಿಬೆಟ್ಟದಲ್ಲಿ ಗಾಂಧೀಜಿಯವರ ಚಿತ್ರ
ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಸಂಪಾದಿಸಿರುವ ಗಾಂಧಿ ಮತ್ತು ಕರ್ನಾಟಕದಲ್ಲಿನ ಚಿತ್ರ ಸಂಗ್ರಹದಲ್ಲಿನ 1927ರಲ್ಲಿ ನಂದಿಬೆಟ್ಟದಲ್ಲಿ ಗಾಂಧೀಜಿಯವರ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT