ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಬರೆಯಲಿದ್ದಾರೆ 17,102 ವಿದ್ಯಾರ್ಥಿಗಳು

ಕೊಠಡಿಗಳು ಸ್ಯಾನಿಟೈಸ್ l 99 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು
Last Updated 19 ಜುಲೈ 2021, 3:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 99 ಕೇಂದ್ರಗಳು ಸಿದ್ಧವಾಗಿವೆ. ಸೋಮವಾರ (ಜು. 19) ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಒಟ್ಟು 2,456 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಇವರಲ್ಲಿ 1,917 ಮಂದಿ ಕೊಠಡಿ ಮೇಲ್ವಿಚಾರಕರು, 99 ಮಂದಿ ಆಸೀನ ಜಾಗೃತದಳದ ಅಧಿಕಾರಿಗಳು ಮತ್ತು 198 ಸ್ಕೌಟ್ಸ್‌ ಮತ್ತು ಗೈಡ್ಸ್ ಸಿಬ್ಬಂದಿ ಇದ್ದಾರೆ.

ಶನಿವಾರ ಮತ್ತು ಭಾನುವಾರ ‍ಪರೀಕ್ಷಾ ಕೊಠಡಿಗಳನ್ನು ಸ್ವಚ್ಛಗೊಳಿಸ ಲಾಯಿತು. ಆಯಾ ಗ್ರಾಮ ಪಂಚಾಯಿತಿ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿದವು. ಕೇಂದ್ರಗಳ ಮುಂಭಾಗದಲ್ಲಿ ವೃತ್ತಗಳನ್ನು ಸಹ ಹಾಕಲಾಗಿದೆ. ವಿದ್ಯಾರ್ಥಿಗಳ ಸುರಕ್ಷೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡ ಪರೀಕ್ಷಾ ಕೇಂದ್ರ ಎನಿಸಿರುವ ನಗರದ ಬಿಜಿಎಸ್ ಶಾಲೆಯಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ರೀತಿಯಲ್ಲಿ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಟ್ಟು ವ್ಯವಸ್ಥೆಗಳು ಸರಿ ಇದೆಯೇ ಎಂದು ಪರಿಶೀಲಿಸಿದರು. ಜಿಲ್ಲೆಯಲ್ಲಿ ಒಟ್ಟು 17,102 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 15,855 ಮಂದಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. 273 ವಿದ್ಯಾರ್ಥಿಗಳು ಪುನರಾವರ್ತಿತ, 872 ಮಂದಿ ಖಾಸಗಿ ಅಭ್ಯರ್ಥಿಗಳು ಇದ್ದಾರೆ. ಇವರಲ್ಲಿ 73 ವಿದ್ಯಾರ್ಥಿಗಳು ಹೊರ ಜಿಲ್ಲೆಯವರಾಗಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ‌ಒಟ್ಟು 64 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ 99 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 1,516 ಕೊಠಡಿಗಳನ್ನು ನಿಗದಿ ಮಾಡಲಾಗಿದೆ. ಒಂದು ಡೆಸ್ಕ್‌ನಲ್ಲಿ ಒಬ್ಬರು ಮಾತ್ರ ಪರೀಕ್ಷೆ ಬರೆಯುವರು. ಒಂದು ಕೊಠಡಿಯಲ್ಲಿ 12 ಮಂದಿ ಮಾತ್ರ ಪರೀಕ್ಷೆ ಬರೆಯುತ್ತಾರೆ.

ಕೇಂದ್ರಗಳಿಗೆ ಸುಗಮವಾಗಿ ಪ್ರಶ್ನೆಪತ್ರಿಕೆ ತಲುಪಿಸಲು ಮತ್ತು ಯಾವುದೇ ಅಡ್ಡಿಗಳು ಉಂಟಾಗ ಬಾರದು ಎಂದು ಒಟ್ಟು 41 ವಾಹನ ಮಾರ್ಗಗಳನ್ನು ಗುರುತಿಸಲಾಗಿದೆ. ಈ ಮಾರ್ಗಗಳಲ್ಲಿ ತೆರಳುವ ಪ್ರತಿ ವಾಹನವು ಎರಡು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲಿದೆ.

ಸಂಘ–ಸಂಸ್ಥೆಗಳಿಂದ ಮಾಸ್ಕ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಸ್ಕ್‌ಗಳನ್ನು ಸಹ ನೀಡಿವೆ. ಇಲಾಖೆಯಷ್ಟೇ ಅಲ್ಲ ಸಂಘ, ಸಂಸ್ಥೆಗಳು ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಬೇಕು ಎನ್ನುವ ಆಶಯವನ್ನು ಹೊಂದಿವೆ.

ಡಿ.ಎಂ.ಕುರ್ಕೆ ಪ್ರಶಾಂತ್,
ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ,
ಡಿ.ಜಿ.ಮಲ್ಲಿಕಾರ್ಜುನ

***

19 ಕೇಂದ್ರಗಳಲ್ಲಿ ಪರೀಕ್ಷೆ

ಬಾಗೇಪಲ್ಲಿ: ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪರೀಕ್ಷೆಗೆ ನಾವು ಸಿದ್ಧ ಎನ್ನುವ ಆತ್ಮವಿಶ್ವಾಸ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿದೆ.

ಬಾಗೇಪಲ್ಲಿ ತಾಲ್ಲೂಕಿನ 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತಾಲ್ಲೂಕಿನ ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಎರಡು ದಿನಗಳ ಹಿಂದಿನಿಂದಲೇ ಪರೀಕ್ಷೆ ಹಿನ್ನೆಲೆಯಲ್ಲಿ ಚಟುವಟಿಕೆಗಳು ಗರಿಗೆದರಿದ್ದವು. ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂತಿಮ ಹಂತದವರೆಗೂ ಕರೆ ಮಾಡಿ ಮಾರ್ಗದರ್ಶನ ನೀಡುತ್ತಿದ್ದರು. ಪೋಷಕರು ಸಹ ತಮ್ಮ ಮಕ್ಕಳನ್ನು ಜತನದಿಂದ ಪರೀಕ್ಷೆ ಬರೆಯಲು ಸಿದ್ಧಗೊಳಿಸುತ್ತಿದ್ದರು.

ಕೊರೊನಾ ಸೋಂಕಿನ ನಡುವೆಯೂ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿದೆ. ಪರೀಕ್ಷೆಗೆ ಮತ್ತಷ್ಟು ಕಾಲಾವಕಾಶ ಅಗತ್ಯವಿತ್ತು. ಒಎಂಆರ್ ಹಾಳೆ ತುಂಬುವ ವಿಧಾನ, ವಿಷಯಗಳಲ್ಲಿನ ಕೆಲ ಗೊಂದಲಗಳನ್ನು ನಿವಾರಣೆ ಮಾಡಿಕೊಂಡಿದ್ದೇವೆ. ಪರೀಕ್ಷೆ ಬರೆಯಲು ಒಬ್ಬೊಬ್ಬರು ಬಂದು ಡೆಸ್ಕ್‌ನಲ್ಲಿ ಇರುವುದರಿಂದ, ಅನುಕೂಲ ಆಗಿದೆ. ಯಾವ ಗೊಂದಲ, ಆತಂಕ ಇಲ್ಲ. ಧೈರ್ಯದಿಂದ ಪರೀಕ್ಷೆ ಬರೆಯಲು ನಾವು ಸಿದ್ಧರಿದ್ದೇವೆ ಎಂದು ಸಂಯಮ ಶಾಲಾ ವಿದ್ಯಾರ್ಥಿಗಳಾದ ಶಾಶ್ವತ್, ಸ್ವಪ್ನ, ತಿಲಕ್, ಮೋಕ್ಷಿತ್ ರೆಡ್ಡಿ, ಶಿಲ್ಪಾ, ಆಸ್ಪರೀನ್ ತಾಜ್, ನಂದಕುಮಾರ್ ತಿಳಿಸಿದರು.

***

4,011 ವಿದ್ಯಾರ್ಥಿಗಳ ನೋಂದಣಿ

ಚಿಂತಾಮಣಿ: ನಗರದಲ್ಲಿ 8 ಹಾಗೂ ಗ್ರಾಮೀಣ ಭಾಗದಲ್ಲಿ 10 ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರ
ತೆರೆಯಲಾಗಿದೆ. 4,011 ವಿದ್ಯಾರ್ಥಿಗಳು ತಾಲ್ಲೂಕಿನಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸುಗಮವಾಗಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮತ್ತು ಪೋಷಕರಿಗೆ ಹೊಸ ಪರೀಕ್ಷಾ ಪದ್ಧತಿ ಕುರಿತು ಸಾಕಷ್ಟು ಅರಿವು ಮೂಡಿಸಿದ್ದಾರೆ. ಅಣಕು ಪರೀಕ್ಷೆ ಸಹ ನಡೆಸಲಾಗಿದೆ.

ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಎರಡು ಉಚಿತ ಮಾಸ್ಕ್, ಬಿಸ್ಕತ್, ನೀರಿನ ಬಾಟಲ್ ನೀಡಲು ತಾಲ್ಲೂಕು ಶಿಕ್ಷಣ ಇಲಾಖೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ವಿದ್ಯಾರ್ಥಿಗಳಿಗೆ ಸೂಚನೆಗಳು: ವಿದ್ಯಾರ್ಥಿಗಳು ಬೆಳಿಗ್ಗೆ 8.30ಕ್ಕೆ ಸಮವಸ್ತ್ರದೊಂದಿಗೆ ಕೇಂದ್ರಗಳಲ್ಲಿ ಹಾಜರಿರಬೇಕು. ಪ್ರವೇಶ ಪತ್ರ ಮತ್ತು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ ತರಬೇಕು. ಬೇರೆಯವರ ವಸ್ತುಗಳನ್ನು ಉಪಯೋಗಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಬೇಕು. ಪ್ರತಿಯೊಬ್ಬರೂ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

***

ಕೊಠಡಿ ಮೇಲ್ವಿಚಾರಕರಾಗಿ 275 ಶಿಕ್ಷಕರು

ಶಿಡ್ಲಘಟ್ಟ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಒಟ್ಟು 2,425 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 18 (ಪುನರಾವರ್ತಿತ) ಮತ್ತು 19 (ವಲಸೆ ಮಕ್ಕಳು) ಇದ್ದಾರೆ. 1,257 ಗಂಡು ಮಕ್ಕಳು ಮತ್ತು 1,168 ಹೆಣ್ಣುಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಿವೆ. ಕೊಠಡಿ ಮೇಲ್ವಿಚಾರಕರಾಗಿ 275 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಎಲ್ಲ ಕೇಂದ್ರಗಳಲ್ಲೂ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದ್ದಾರೆ.

ಆಯಾ ದಿನವೇ ಉತ್ತರಿಸಿದ ಒಎಂಆರ್‌ಗಳನ್ನು ಉಪ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತದೆ. ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಉಪ ಖಜಾನಾಧಿಕಾರಿಯ ಸಹಕಾರ ಪಡೆಯಲಾಗಿದೆ.

ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗೂ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹನುಮಂತಪುರದಲ್ಲಿ ವಿಶೇಷ ಕೋವಿಡ್ ಕೇರ್ ಸ್ಥಾಪಿಸಿ, ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಪ್ರತಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಯಾಗಿ ಇಸಿಒ ಈ. ಭಾಸ್ಕರ್ ಗೌಡ ಕಾರ್ಯ ನಿರ್ವಹಿಸುವರು.

ಪರೀಕ್ಷೆ ಸುಲಭ: ಶಾಲೆಯಲ್ಲಿ ಆಪ್‌ಲೈನ್ ಮೂಲಕ ತರಗತಿ ನಡೆಯುತ್ತಿದ್ದವು. ಅದರಲ್ಲಿ ಪ್ರತಿ ಪಾಠವನ್ನೂ ಕಲಿತು ಮುಂದಿನ ಪಾಠಕ್ಕೆ ಹೋಗಬೇಕಾದರೆ ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಅದರಂತೆ ತಯಾರಿ ನಡೆಸಿದ್ದೆವು. ಇದೀಗ ಅದೇ ರೀತಿಯಲ್ಲಿ ಪರೀಕ್ಷೆ ಬರೆಯಬೇಕಾಗಿರುವುದರಿಂದ ನಮಗೆ ಸುಲಭವಾಗಿದೆ ಎನ್ನುತ್ತಾರೆ ಕ್ರೆಸೆಂಟ್ ಶಾಲೆ ವಿದ್ಯಾರ್ಥಿಗಳಾದ ಚಂದನಾ, ಅಫ್ರಾ ಜೈನ್, ರಿಯಾನ ಫಿರ್ದೋಸ್, ವಿಭಾ, ವಿಕಾಸ್, ನಂದನ್, ವರ್ಷ.

***

ಯಾವ ಪ್ರಶ್ನೆಪತ್ರಿಕೆ ಯಾವ ಬಣ್ಣ

ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದರೆ ಒಳಗೆ ಪ್ರವೇಶ ನೀಡಲಾಗುವುದು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಒಳಗೊಂಡಂತೆ ಒಂದೇ ಪ್ರಶ್ನೆಪತ್ರಿಕೆ ಇರುತ್ತದೆ. ಪ್ರತಿ ವಿಷಯದಲ್ಲಿ 40 ಪ್ರಶ್ನೆಗಳಿದ್ದು, ಮೂರು ವಿಷಯಗಳಿಂದ ಒಟ್ಟು 120 ಪ್ರಶ್ನೆಗಳಿರುತ್ತವೆ.

ಎಲ್ಲ ಪ್ರಶ್ನೆಗಳು ಬಹುಆಯ್ಕೆಯ ಪ್ರಶ್ನೆಗಳಾಗಿರುತ್ತವೆ. ಪರೀಕ್ಷೆಯಲ್ಲಿ ಉತ್ತರಿಸಲು ವಿಷಯವಾರು ಪೂರ್ವಮುದ್ರಿತ ಒಎಂಆರ್‌ ಶೀಟ್‌ಗಳಿರುತ್ತವೆ. ವಿದ್ಯಾರ್ಥಿಗಳು ಎ, ಬಿ, ಸಿ, ಡಿ ಆಯ್ಕೆಗಳಲ್ಲಿ ಸರಿ ಉತ್ತರಕ್ಕೆ ಶೇಡ್ ಮಾಡುವ ಮೂಲಕ ಉತ್ತರಿಸಬೇಕು. ಭಾಷೆಗಳಿಗೂ ಇದೇ ರೀತಿಯ ಪ್ರಶ್ನೆಪತ್ರಿಕೆ ಮತ್ತು ಒಎಂಆರ್‌ ಶೀಟ್‌ಗಳನ್ನು ಒಳಗೊಂಡಿರುತ್ತದೆ.

ಒಎಂಆರ್‌ ವಿಷಯವಾರು ಬೇರೆ ಬೇರೆ ಬಣ್ಣಗಳವಾಗಿರುತ್ತದೆ. ಪ್ರಥಮ ಭಾಷೆ ಮತ್ತು ಗಣಿತ- ಗುಲಾಬಿ ಬಣ್ಣ (ಪಿಂಕ್‌), ದ್ವಿತೀಯ ಭಾಷೆ ಮತ್ತು ವಿಜ್ಞಾನ- ಕಿತ್ತಲೆ ಬಣ್ಣ (ಆರೇಂಜ್‌), ತೃತೀಯ ಭಾಷೆ ಮತ್ತು ಸಮಾಜ ವಿಜ್ಞಾನ- ಹಸಿರು ಬಣ್ಣ (ಗ್ರೀನ್‌) ಹಾಗೂ ಜಿಟಿಎಸ್ ವಿಷಯಗಳು- ನೀಲಿ ಬಣ್ಣ (ಬ್ಲೂ)ದಲ್ಲಿ ಇರಲಿವೆ.

***

ಸಿಬ್ಬಂದಿಗೆ ಎನ್‌.95 ಮಾಸ್ಕ್

ಎಲ್ಲ ಕೊಠಡಿಗಳಿಗೂ ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷೆಗೆ ನಿಯೋಜಿಸಿರುವ ಎಲ್ಲ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಸಿಬ್ಬಂದಿಗ ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು. ಸಿಬ್ಬಂದಿ ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

ಜಯರಾಮರೆಡ್ಡಿ, ಡಿಡಿಪಿಐ

ಯಾವುದೇ ಗೊಂದಲವಿಲ್ಲ

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ ಬಿಜಿಎಸ್ ಶಾಲೆ ದೊಡ್ಡ ಪರೀಕ್ಷಾ ಕೇಂದ್ರವಾಗಿದೆ. 315 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯುವರು. ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗೊಂದಲಗಳು ಯಾವುದೇ ಕಾರಣಕ್ಕೂ ಎದುರಾಗಬಾರದು. ಈ ಬಗ್ಗೆ ನಿಗಾವಹಿಸುವಂತೆ ಶಿಕ್ಷಕರಿಗೆ ಸೂಚಿಸಿದ್ದೇವೆ. ನಮಗೂ ಗೊಂದಲಗಳು ಉಂಟಾಗಿಲ್ಲ.

ಮೋಹನ್ ಕುಮಾರ್, ಮುಖ್ಯಶಿಕ್ಷಕ, ಬಿಜಿಎಸ್ ಶಾಲೆ, ಚಿಕ್ಕಬಳ್ಳಾಪುರ

ಗೊಂದಲವಿಲ್ಲದೆ ‌ನಡೆಯಬೇಕು

ಪರೀಕ್ಷಾ ಗೊಂದಲದ ಬಗ್ಗೆ ವಿದ್ಯಾರ್ಥಿಗಳಿಗೆ ಆತಂಕ ಇತ್ತು. ಸರ್ಕಾರ ಒಎಂಆರ್ ಹಾಳೆ ತುಂಬುವ ಬಗ್ಗೆ ತಿಳಿಸಿದೆ. ಇದೀಗ ಯಾವ ಗೊಂದಲ ಇಲ್ಲ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಕೊರೊನಾ ನಿಯಮಗಳಂತೆ ಪರೀಕ್ಷೆಯನ್ನು ಗೊಂದಲ ಇಲ್ಲದೆ ನಡೆಸಬೇಕು.

ಮಮತಾ, ಪೋಷಕಿ, ಬಾಗೇಪಲ್ಲಿ

ಪಾಸ್ ಎಂದಿರುವುದೇ ತೊಂದರೆ

ಪರೀಕ್ಷೆಗೆ ಮುನ್ನವೇ ಶಿಕ್ಷಣ ಸಚಿವರು ಎಲ್ಲ ವಿದ್ಯಾರ್ಥಿಗಳೂ ಪಾಸ್ ಎಂದು ಹೇಳಿರುವುದು ತೊಂದರೆ ಆಗಿದೆ. ಓದುವ ಮಕ್ಕಳು ಓದುತ್ತಾರೆ. ಆದರೆ, ಸಾಧಾರಣ ವಿದ್ಯಾರ್ಥಿಗಳಿಗೆ ಹೇಗಿದ್ದರೂ ಪಾಸಾಗುತ್ತೇವೆ ಎಂಬ ಧೋರಣೆ ಮನೆ ಮಾಡಿ ಓದಲು ಮನಸ್ಸು ಮಾಡದಂತಾಗಿದೆ. ಪರೀಕ್ಷೆ ಮಾಡದಿರುವುದಕ್ಕಿಂತ ಮಾಡುವುದು ಉತ್ತಮ. ಪರೀಕ್ಷೆಗೆ ಮುನ್ನವೇ ನೀವು ಪಾಸ್ ಎಂದು ಹೇಳಿದರೆ ಅವರ ಆಸಕ್ತಿ ಕುಂದಿಸಿದಂತಾಗುತ್ತದೆ.

ತಮೀಮ್ ಅನ್ಸಾರಿ, ಕಾರ್ಯದರ್ಶಿ, ಕ್ರೆಸೆಂಟ್ ವಿದ್ಯಾಸಂಸ್ಥೆ, ಶಿಡ್ಲಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT