ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಪರ್ವಿನ್ ಕುಟುಂಬಕ್ಕೆ 2 ವರ್ಷ ಸಹಾಯಹಸ್ತ

ಪ್ರತಿ ತಿಂಗಳು ದಿನಸಿ ಖರೀದಿಗೆ ₹1,000 ಆರ್ಥಿಕ ನೆರವು
Last Updated 21 ಮೇ 2020, 13:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಐದು ತಿಂಗಳಿಂದ ಮಾಸಾಶನ ಸಿಗದೆ ಕಂಗಾಲಾಗಿದ್ದ ನಗರದ ಕೆಳಗಿನತೋಟದ ತಿಪ್ಪರೆಡ್ಡಿ ಬಡಾವಣೆಯ ಹಿಂಬದಿ ರಸ್ತೆ ನಿವಾಸಿ, ಅಂಗವಿಕಲೆ ಪರ್ವಿನ್ ತಾಜ್‌ ಅವರ ಕುಟುಂಬಕ್ಕೆ ಮಂಗಳೂರಿನ ‘ಎಂ ಫ್ರೆಂಡ್ಸ್ ಚಾರಿಟೆಬಲ್‌ ಟ್ರಸ್ಟ್‌’ ಎರಡು ವರ್ಷ ದಿನಸಿ ಖರೀದಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.

ತೀವ್ರ ಅಂಗವೈಕಲ್ಯಕ್ಕೆ ಒಳಗಾಗಿರುವ ಪರ್ವಿನ್‌ ತಾಜ್ ಅವರ ಕುಟುಂಬದ ಕರುಣಾಜನಕ ಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ ಮೇ 18 ರಂದು ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಗಮನಿಸಿದ ಮಂಗಳೂರಿನ ‘ಎಂ ಫ್ರೆಂಡ್ಸ್ ಚಾರಿಟೆಬಲ್‌ ಟ್ರಸ್ಟ್‌’ನ ಸಂಸ್ಥಾಪಕ ರಶೀದ್‌ ವಿಟ್ಲ ಅವರು ಮಂಗಳವಾರ ಪರ್ವಿನ್‌ ತಾಜ್ ಅವರ ಕುಟುಂಬಕ್ಕೆ ನೆರವು ನೀಡಲು ಮುಂದೆ ಬಂದಿದ್ದರು.

ಗುರುವಾರ ಚಿಕ್ಕಬಳ್ಳಾಪುರಕ್ಕೆ ಬಂದ ‘ಎಂ ಫ್ರೆಂಡ್ಸ್ ಚಾರಿಟೆಬಲ್‌ ಟ್ರಸ್ಟ್‌’ನ ಟ್ರಸ್ಟಿ ಹಮೀದ್ ಅತ್ತೂರು ಅವರು ಪರ್ವಿನ್‌ ತಾಜ್ ಅವರ ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ನೀಡುವ ಜತೆಗೆ ₹5,000 ನಗದು ನೀಡಿದರು.

ಜತೆಗೆ, ‘ಪರ್ವಿನ್ ತಾಜ್ ಅವರ ಕುಟುಂಬಕ್ಕೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ದಿನಸಿ ಖರೀದಿಗೆ ₹1,000 ಹಣವನ್ನು ಪರ್ವಿನ್ ಅವರ ತಂದೆ ಬಾಬುಸಾಬ್‌ ಅವರ ಬ್ಯಾಂಕ್ ಖಾತೆ ಜಮೆ ಮಾಡುತ್ತೇವೆ. ನಂತರವೂ ನೆರವಿನ ಅಗತ್ಯವಿದ್ದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಪರ್ವಿನ್ ತಾಜ್ ಅವರ ತಾಯಿ ಬಾಬನ್‌ಬಿ, ‘ದೈಹಿಕ ಸ್ವಾಧೀನ ಕಳೆದಕೊಂಡು ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿರುವ ಮಗಳನ್ನು ಬಿಟ್ಟು ಕೂಲಿನಾಲಿಗೆ ಕೂಡ ಹೋಗದೆ ಶ್ರುಶೂಷೆ ಮಾಡಬೇಕಾದ ಸ್ಥಿತಿ ಇದೆ. ನಾವು ಮೊದಲೇ ಬಡವರು. ಮಾಸಾಶನ ಬರದಿರುವುದು ಮತ್ತು ಲಾಕ್‌ಡೌನ್‌ ನಮ್ಮನ್ನು ಕಂಗಾಲಾಗಿಸಿತ್ತು’ ಎಂದು ಹೇಳಿದರು.

‘ನಮ್ಮ ಕಷ್ಟದ ಬಗ್ಗೆ ಬೆಳಕು ಚೆಲ್ಲಿದ ‘ಪ್ರಜಾವಾಣಿ’ಗೆ ಮತ್ತು ಕಷ್ಟ ಕಾಲದಲ್ಲಿ ನೆರವಿಗೆ ಧಾವಿಸಿದ ಟ್ರಸ್ಟ್‌ನವರಿಗೆ ನಾವು ಸದಾ ಋಣಿಯಾಗಿರುತ್ತೇವೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಬಡತನ ಹಾಸಿ ಹೊದ್ದ ಪರ್ವಿನ್ ತಾಜ್ ಅವರ ದೈನ್ಯದ ಸ್ಥಿತಿಯನ್ನು ಕಣ್ಣಾರೆ ಕಂಡರೂ ಸಂಬಂಧಪಟ್ಟ ಮಾನವೀಯತೆ ದೃಷ್ಟಿಯಿಂದ ಮಾಸಾಶನ ಬಾಕಿ ಬಿಡುಗಡೆಗೆ ಕ್ರಮಕೈಗೊಳ್ಳುವ ಬದಲು ಜೂನ್ 1 ರಿಂದ ಜಾರಿಗೆ ಬರುವಂತೆ ಮಾಸಾಶನ ಮಂಜೂರಾತಿಯ ಹೊಸ ಆದೇಶ ಕೈಗಿತ್ತು ಕಳುಹಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಎಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT