ಬಾಗೇಪಲ್ಲಿ: ಗೂಳೂರು, ಪಾತಪಾಳ್ಯ, ಮಿಟ್ಟೇಮರಿ ಹೋಬಳಿಗಳಿಂದ ನೆರೆಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕೋಡೂರು, ಚೆಕ್‌ಪೋಸ್ಟ್, ಸೇರಿದಂತೆ ವಿವಿಧ ಗ್ರಾಮ, ತಾಂಡಗಳಿಂದ ಪ್ರತಿದಿನ ಬೆಳಗ್ಗೆ ರೈತರು ಹಾಗೂ ರೈತ ಮಹಿಳೆಯರು ಗುಂಪಾಗಿ ಬಂದು ಕೆಲಸಕ್ಕಾಗಿ ಡಾ.ಎಚ್.ಎನ್.ವೃತ್ತದಲ್ಲಿ ಜಮಾಯಿಸುತ್ತಾರೆ.
ಕೈಗಳಲ್ಲಿ ಊಟದ ಡಬ್ಬಿ, ನೀರಿನ ಬಾಟಲಿ ಹಿಡಿದು ನಿಲ್ಲುತ್ತಾರೆ. ಕೂಲಿ ಕೆಲಸಕ್ಕೆ ಕೈ ಬೀಸಿ ಕರೆಯುತ್ತಾರೆ ಎಂದು ಕಾಯುತ್ತಾರೆ.
ತಾಲ್ಲೂಕಿನಲ್ಲಿ ಶಾಶ್ವತವಾದ ನದಿ, ನಾಲೆ ಇಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಂದ ಕೃಷಿಕರು ದೂರ ಸರಿದಿದ್ದಾರೆ. ಇದೀಗ ಕೃಷಿಕರೇ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಸಿಮೆಂಟ್, ಮರದ, ಇಟ್ಟಿಗೆ, ತೋಟದ ಕೆಲಸಕ್ಕೆ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಮನೆ ನಿರ್ಮಾಣ ಮಾಡುವವರು ಸ್ಥಳಕ್ಕೆ ಬಂದರೆ, ಕೂಲಿಕಾರ್ಮಿಕರು ಸುತ್ತುವರೆಯುತ್ತಾರೆ. ಕೂಲಿ ಕೆಲಸದ ಸ್ಥಳ, ಕೂಲಿ ಹಣ ಖಚಿತಪಡಿಸಿ, ನಂತರ ಕೂಲಿಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ, ಆಟೊದಲ್ಲಿ ತೆರಳುತ್ತಾರೆ. ಬಹುತೇಕ ಕೂಲಿಕಾರ್ಮಿಕರು ಗಾರೆ, ತೋಟ, ಕಟ್ಟಡ, ಇಟ್ಟಿಗೆ ಕೆಲಸ, ಕಳೆ ತೆಗೆಯುವ ಕೆಲಸ ಮಾಡುತ್ತಾರೆ.
ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕೆ ಸರ್ಕಾರಗಳು ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಿದೆ. ಗ್ರಾಮದ ಕೆರೆ, ಕುಂಟೆ, ಕಾಲುವೆ, ರಸ್ತೆಗಳು ಸ್ವಚ್ಛತೆ ಮಾಡಲು, ಬದು ತೆಗೆಯುವ ಕೆಲಸ ಮಾಡಬಹುದು. ಆದರೆ ನರೇಗಾದಲ್ಲಿ ಕೂಲಿ ಕೆಲಸದ ಹಣ 15 ದಿನದ ನಂತರ ಸಿಗುತ್ತದೆ. ಗಾರೆ, ಇಟ್ಟಿಗೆ, ತೋಟದ ಕೆಲಸ ಮಾಡಿದರೆ ಆ ದಿನವೇ ಕೂಲಿ ಸಿಗುತ್ತದೆ. ಹೀಗಾಗಿ ಬಹುತೇಕ ಕೂಲಿಕಾರ್ಮಿಕರು ನರೇಗಾ ಕೆಲಸಕ್ಕೆ ಅರ್ಜಿ ಹಾಕಿಲ್ಲ.
‘ಪಟ್ಟಣಕ್ಕೆ 8 ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ಬರುತ್ತೇವೆ. ಕೃಷಿಯನ್ನೇ ನಂಬಿದ್ದ ನಾವು ಇದೀಗ ಕೂಲಿಕಾರ್ಮಿಕರಂತೆ ದುಡಿಯುವ ಸ್ಥಿತಿ ಇದೆ. ಕೂಲಿ ಹಣ ಸಿಕ್ಕರೆ, ಊಟ, ವಸತಿ, ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತದೆ. ಕೂಲಿ ಹಣ ಸಿಗಲಿಲ್ಲ ಎಂದರೆ ಒಪ್ಪತ್ತಿನ ಗಂಜಿಗೂ ಪರದಾಡಬೇಕಾಗುತ್ತದೆ’ ಎಂದು ಪೋತೇಪಲ್ಲಿ ಗ್ರಾಮದ ಕೂಲಿಕಾರ್ಮಿಕ ರಾಮು ತಿಳಿಸುತ್ತಾರೆ.
ರಾತ್ರೋರಾತ್ರಿ ಯಂತ್ರಗಳಿಂದ ಕೆಲಸ
ನರೇಗಾ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಆದರೆ ಅಧಿಕಾರಿಗಳು ಎಂಜಿನಿಯರ್‌ಗಳು ಪಂಚಾಯಿತಿ ಕೆಲ ಸದಸ್ಯರು ಶಾಮೀಲಾಗಿ ಕೂಲಿ ಕೆಲಸ ನೀಡುತ್ತಿಲ್ಲ. ರಾತ್ರೋರಾತ್ರಿ ಯಂತ್ರಗಳಿಂದ ಕೆಲಸ ಮಾಡಿಸಿ ಅರ್ಹ ಫಲಾನುಭವಿಗಳಿಗೆ ಕೂಲಿ ಹಣ ನೀಡುವುದಿಲ್ಲ. ಬೇರೆ ಕೆಲಸಕ್ಕೆ ಹೋದರೆ ಸಂಜೆ ಕೂಲಿ ಹಣ ಸಿಗುತ್ತದೆ. ಕುಟುಂಬಗಳ ನಿರ್ವಹಣೆಗೆ ಸಹಕಾರಿ ಆಗುತ್ತಿದೆ’ ಎಂದು ಕೂಲಿಕಾರ್ಮಿಕ ಶ್ರೀನಿವಾಸ್ ತಿಳಿಸಿದರು. ಮತ್ತಷ್ಟು ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಅರಿವು ಮೂಡಿಸಲಾಗಿದೆ. ಕೂಲಿ ಕೆಲಸ ಕೇಳಿದರೆ ಕೆಲಸ ಹಣ ಸಮರ್ಪಕವಾಗಿ ನೀಡಲಾಗುವುದು. ನರೇಗಾದಲ್ಲಿ 15 ದಿನಕ್ಕೆ ಕೂಲಿ ಹಣ ಬರಲಿದೆ. ನರೇಗಾ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.