ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ₹35 ಕೋಟಿ ಬಜೆಟ್‌ ಮಂಡನೆ

Last Updated 24 ಮಾರ್ಚ್ 2021, 2:48 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್ ನೇತೃತ್ವದಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು‌ ಹಾಗೂ ಅಪರ ನಗರಸಭೆ ಆಯುಕ್ತರಾದ ರೇಣುಕಾ ಮಾತನಾಡಿ, ‘ನಗರಸಭೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನಗಳು, ಸ್ಥಳೀಯ ಹುಟ್ಟುವಳಿ ಆದಾಯ, ಬಾಡಿಗೆ ಕಟ್ಟಡಗಳಿಂದ ಬರುವ ಹಣ, ಕಂದಾಯ ಸಂಗ್ರಹ, ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ‌ಮೂಲಗಳಿಂದ ಬರುವ ಹಣವನ್ನು‌ ಒಂದು‌ ವರ್ಷದಲ್ಲಿ
ವಿವಿಧ ಹಂತವಾಗಿ ಅಭಿವೃದ್ಧಿ ‌ಕಾರ್ಯಗಳಿಗೆ ಬಳಕೆ ಮಾಡುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.

‘ಈ ಬಾರಿಯ ಆಯವ್ಯಯ ಗಾತ್ರವು ₹35,09,30,000ಗಳಾಗಿರುತ್ತದೆ. ಮುಂದಿನ ವರ್ಷದ ಅಭಿವೃದ್ಧಿ ‌ಕಾರ್ಯಗಳು ಹಾಗೂ ಇನ್ನಿತರ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಎಲ್ಲ ಸದಸ್ಯರ ತೀರ್ಮಾನದ ಮೇರೆಗೆ ಈ‌ ಬಾರಿಯ ಬಜೆಟ್ ಅನ್ನು ಮಂಡನೆ ಮಾಡಲಾಗುವುದು. ಈ ವಿಚಾರವಾಗಿ ಸದಸ್ಯರ ಅಭಿಪ್ರಾಯ ಹಾಗೂ ಮಾರ್ಗದರ್ಶನಗಳನ್ನು ಸಭೆಗೆ ನೀಡಬಹುದಾಗಿದೆ’ ಎಂದು
ಹೇಳಿದರು.

ನಗರಸಭೆ‌ ಅಧ್ಯಕ್ಷರಾದ ಕೆ.ಎಂ.ಗಾಯತ್ರಿ ಬಸವರಾಜ್ ‌ಮಾತನಾಡಿ, ‘ನಗರಸಭೆ ವ್ಯಾಪ್ತಿಯಲ್ಲಿನ 31 ವಾರ್ಡ್‌ಗಳ‌ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಹಣಕಾಸಿನ ಆಯವ್ಯಯವನ್ನು ಎಲ್ಲ ಸದಸ್ಯರ ಸಮ್ಮುಖದಲ್ಲಿ ತೀರ್ಮಾನಿಸಲಾಗುವುದು. ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ‌ರೂಪಿಸಿ‌ ಅದರಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಎಲ್ಲ ಸದಸ್ಯರ ಸಹಕಾರ ಮತ್ತು ಮಾರ್ಗದರ್ಶನ ಅತ್ಯವಶ್ಯ’ ಎಂದು ಹೇಳಿದರು.

ನಗರಸಭೆ ಸದಸ್ಯರಾದ ವಿ.ರಮೇಶ್, ಖಲೀಂ ಉಲ್ಲಾ, ಗೋಪಿನಾಥ್ ಸೇರಿದಂತೆ ಇತರರು ಸಭೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷರಾದ ಭಾಗ್ಯಮ್ಮ, ಇಂಜಿನಿಯರ್ ಚಕ್ರಪಾಣಿ, ಎಇಇ ಸುಭಾಷ್ ಕಾಂಬ್ಳಿ, ಲೆಕ್ಕಾಧಿಕಾರಿ ಗೋವಿಂದಪ್ಪ, ವ್ಯವಸ್ಥಾಪಕ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕರಾದ ಸುರೇಶ್, ಸುಜಾತ, ಕಂದಾಯ ಅಧಿಕಾರಿ ಸಂತೋಷ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT