ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 400 ಪಿಎಚ್‍ಸಿ ಮೇಲ್ದರ್ಜೆಗೆ

‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ಸಮಾರೋಪದಲ್ಲಿ ಸಚಿವ ಡಾ.ಕೆ.ಸುಧಾಕರ್ ಅಭಿಮತ
Last Updated 27 ಫೆಬ್ರುವರಿ 2021, 3:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಸಂಕಲ್ಪ ತೊಟ್ಟಿದ್ದು, ಮುಂದಿನ ಬಜೆಟ್‍ನಲ್ಲಿ ರಾಜ್ಯದಾದ್ಯಂತ ಸುಮಾರು 400 ಪ್ರಾಥಮಿಕ ಕೇಂದ್ರಗಳನ್ನು ಆಯ್ಕೆ ಮಾಡಲು ಚಿಂತನೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲೂ ಅನುಷ್ಠಾನ ಮಾಡುವ ಸಂಕಲ್ಪ ತೊಟ್ಟಿದ್ದು, ಇದರ ಭಾಗವಾಗಿ ರಾಜೀವ್‍ಗಾಂಧಿ ಆರೋಗ್ಯ ವಿವಿ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಪೆರೇಸಂದ್ರ ಹಾಗೂ ದಿಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಮಾರು ₹25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೇಳಿದರು.

ವಿನೂತನ ಕಾರ್ಯಕ್ರಮ: ‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮವೂ ರಾಜ್ಯದಲ್ಲೇ ಒಂದು ವಿನೂತನ ಕಾರ್ಯಕ್ರಮವಾಗಿದೆ. ಈ ಮೂಲಕ ಎಲ್ಲಾ ಇಲಾಖೆಗಳ ಆಡಳಿತವನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಧಿಕಾರಿಯವರು ಮಾಡಿದ್ದು, ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ‘ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಆಡಳಿತ ಸೇವೆ ಒದಗಿಸುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಆಶಯದಂತೆ ಸರಕಾರದ ವಿವಿಧ ಸವಲತ್ತುಗಳನ್ನು ಮನೆ ಬಾಗಿಲಿಗೆ ಕಲ್ಪಿಸಲಾಗುತ್ತಿದೆ. ಇದೊಂದು ಅತ್ಯಂತ ಉತ್ತಮ ಕಾರ್ಯವಾಗಿದ್ದು, ಮುಂದೆಯೂ ಕೂಡ ಇಂತಹ ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು’ ಎಂದು ಅವರು ತಿಳಿಸಿದರು.

ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು, ಮಂಡಿಕಲ್ಲು ಹೋಬಳಿಯ ಜಿ.ಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾ.ಪಂ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್, ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್, ಜಿಪಂ ಮುಖ್ಯ ಯೋಜನಾಧಿಕಾರಿ ಧನುರೇಣುಕಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT