ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 482 ಅಂಗವಿಕಲರಿಗೆ ಸಿಗುತ್ತಿಲ್ಲ ಮಾಸಾಶನ!

ಅಂಗವೈಕಲ್ಯವಿದ್ದರೂ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾದ ಫಲಾನುಭವಿಗಳು, ಸಮಸ್ಯೆ ತಿಳಿಯದೆ ಗೊಂದಲದಲ್ಲಿ ನೊಂದವರು
Last Updated 20 ಮೇ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಬರೋಬರಿ 482 ಅಂಗವಿಕಲರಿಗೆ ಮಾಸಾಶನ ದೊರೆಯುತಿಲ್ಲ! ಅಚ್ಚರಿ ಎನಿಸಿದರೂ ಇದು ಸತ್ಯ. ನಗರದ ಕೆಳಗಿನತೋಟದ ಪ್ರದೇಶದ ಅಂಗವಿಕಲೆ ಪರ್ವಿನ್ ತಾಜ್‌ ಅವರಿಗೆ ಕಳೆದ ಐದು ತಿಂಗಳಿಂದ ಮಾಸಾಶನ ಸಿಗದ ಪ್ರಕರಣ ಬೆನ್ನತ್ತಿದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.

ರಾಜ್ಯ ಅಂಗವಿಕಲರ ಆಯುಕ್ತಾಲಯ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 482 ಅಂಗವಿಕಲರಿಗೆ ಮಾಸಾಶನ ದೊರೆಯುತ್ತಿಲ್ಲ ಎನ್ನುವ ಅಂಶ ಪತ್ತೆಯಾಗಿದೆ. ಮಾಸಾಶನ ಪಡೆಯದಿರುವ ಫಲಾನುಭವಿಗಳ ಪಟ್ಟಿಯನ್ನು ಆಯುಕ್ತಾಲಯ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ಕಳುಹಿಸಿ, ಕ್ರಮಕೈಗೊಳ್ಳುವಂತೆ ಸೂಚಿಸಿದೆ.

ಆ ಪಟ್ಟಿಯನ್ನು ಜಿಲ್ಲಾ ಅಧಿಕಾರಿ ತಾಲ್ಲೂಕು ಕಚೇರಿಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲ್ಯೂಗಳಿಗೆ (ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ) ಪಟ್ಟಿ ಕಳುಹಿಸಿದ್ದಾರೆ. ಯಾರಿಗೆಲ್ಲ ಮಾಸಾಶನ ದೊರೆಯುತ್ತಿಲ್ಲ. ಯಾರೆಲ್ಲ ಕಷ್ಟದಲ್ಲಿದ್ದಾರೆ ಎಂಬ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದಾರೆ.

'ಕೆಲ ಬಾರಿ ನಕಲಿ ದಾಖಲೆ ನೀಡಿ ಮಾಸಾಶನ ಪಡೆಯುತ್ತಿರುತ್ತಾರೆ. ಕೆಲವರು ಮೃತಪಟ್ಟರೂ ಮಾಸಾಶನ ಬರುತ್ತಿರುತ್ತದೆ. ಇಂತಹ ಪ್ರಕರಣಗಳಲ್ಲಿ ಮಾಸಾಶನ ರದ್ಧಾಗುತ್ತದೆ ವಿನಾ ಉಳಿದಂತೆ ಯಾಕೆ ಇಷ್ಟೊಂದು ಜನರಿಗೆ ಮಾಸಾಶನ ಸಿಗುತ್ತಿಲ್ಲ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ವರದಿ ತರಿಸಿಕೊಂಡು ಪರಿಶೀಲಿಸುತ್ತೇವೆ‘ ಎಂದು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜ್ಯೋತಿ ಹೇಳಿದರು.

ದೈಹಿಕ ನ್ಯೂನತೆಯಿಂದ ದುಡಿಯಲಾಗದ ಸ್ಥಿತಿಯಲ್ಲಿರುವ, ಬದುಕಿಗೆ ಮಾಸಾಶನವನ್ನೇ ನಂಬಿ ಬದುಕುವ ನೂರಾರು ಅಂಗವಿಕಲರು ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ಅಂಚೆ ಕಚೇರಿ, ಖಜಾನೆ ಕಚೇರಿ, ತಾಲ್ಲೂಕು ಕಚೇರಿ ನಡುವೆ ಅಲೆದು ಸಮಸ್ಯೆ ಮೂಲ ಪತ್ತೆ ಮಾಡಲಾಗದೆ ಹತಾಶೆಗೊಂಡಿದ್ದಾರೆ ಎನ್ನುತ್ತಾರೆ ಕರ್ನಾಟಕ ವಿಕಲಚೇತನರ ಸಂಸ್ಥೆಯ (ಕೆವಿಎಸ್‌) ಪದಾಧಿಕಾರಿಗಳು.

ಈ ಹಿಂದೆ ಇದ್ದ ಮಾಸಾಶನ ಪಾವತಿ ವ್ಯವಸ್ಥೆ ಖಜಾನೆ-2ಗೆ (ಕೆ-2) ಬದಲಾದ ವೇಳೆ ಆಧಾರ್‌ ಸಂಖ್ಯೆ ಜೋಡಣೆಯಾಗದ ಕಾರಣಕ್ಕೆ ಸಮಸ್ಯೆಯಾಗಿರಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ಫಲಾನುಭವಿಗಳ ಮಾಸಾಶನ ರದ್ಧಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಳ್ಳುವ ಬದಲು ಬೇರೊಬ್ಬರತ್ತ ಬೊಟ್ಟು ತೋರಿಸುತ್ತಿರುವ ಕಾರಣಕ್ಕೆ ಮಾಸಾಶನ ಸಿಗದ ಫಲಾನುಭವಿಗಳು ಅಂಚೆ ಕಚೇರಿ, ಖಜಾನೆ ಕಚೇರಿ, ತಾಲ್ಲೂಕು ಕಚೇರಿಗಳನ್ನು ಚಪ್ಪಲಿ ಸವೆಯುವಂತೆ ತಿರುಗಾಡಿಸುತ್ತಿದ್ದಾರೆ ಎನ್ನುವುದು ನೊಂದವರ ಆರೋಪ.

ಸಕಾಲಕ್ಕೆ ನಾವು ಕೇಳಿದ ದಾಖಲೆಗಳನ್ನು ತಂದು ಕೊಡದ ಕಾರಣಕ್ಕೆ ಮಾಸಾಶನ ರದ್ಧಾಗಿದೆ ಎಂದು ಕೆಲ ಅಧಿಕಾರಿಗಳು ಫಲಾನುಭವಿಗಳಿಗೆ ಹೇಳಿ ವಾಪಾಸ್ ಕಳುಹಿಸುತ್ತಿದ್ಧಾರೆ ಎನ್ನಲಾಗಿದೆ. ಮಾಸಾಶನದಿಂದ ವಂಚಿತರಾಗಿ ಕಂಗಾಲಾದವರಲ್ಲಿ ಬಹುಪಾಲು ಜನರು ಅನಕ್ಷರಸ್ಥರು ಎನ್ನುವುದು ವಿಶೇಷ. ಅಂತಹವರಿಗೆ ಮಾನವೀಯತೆಯ ದೃಷ್ಟಿಯಿಂದ ನೆರವು ನೀಡುವ ಕಾನೂನಿನ ಪಾಠ ಹೇಳುತ್ತ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎನ್ನುವುದು ಹಲವರ ಆರೋಪ.

’ಅನೇಕ ಅಂಗವಿಕಲರು ಹಾಸಿಗೆಯಿಂದ ಮೇಲೆ ಏಳಲಾಗದ ಸ್ಥಿತಿಯಲ್ಲಿದ್ದಾರೆ. ಅಂತಹವರು ಮಾಸಾಶನಕ್ಕಾಗಿ ನನಗೆ ನಿತ್ಯ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗ್ಗೆ ವಿಚಾರಿಸಲು ಹೋದರೆ ಖಜಾನೆ ಅಧಿಕಾರಿ ಮತ್ತು ಗ್ರೂಪ್‌ 2 ತಹಶೀಲ್ದಾರ್ ಪರಸ್ಪರರನ್ನು ತೋರಿಸುತ್ತ ಜನರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ‘ ಎನ್ನುತ್ತಾರೆ ಕರ್ನಾಟಕ ವಿಕಲಚೇತನರ ಸಂಸ್ಥೆಯ (ಕೆವಿಎಸ್‌) ಕಾರ್ಯದರ್ಶಿ ಕಿರಣ್ ನಾಯಕ್.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ನಾಗಪ್ರಶಾಂತ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಬದುಕಿದ್ದಾಕೆಗೆ ಸತ್ತಿದ್ದಾಳೆ ಎಂದರು!
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಮಮತಾ ಎಂಬ ಅಂಗವಿಕಲ ಯುವತಿ ಬದುಕಿದ್ದರೂ ಅಧಿಕಾರಿಗಳು ದಾಖಲೆಯಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ತೋರಿಸಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ನಂದಿ ನಾಡಕಚೇರಿಗೆ ಹೋಗಿ ಬದುಕಿರುವ ಯುವತಿಯನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಗಲಾಟೆ ಮಾಡಿದಾಗ ತಪ್ಪು ತಿದ್ದಿಕೊಂಡಿದ್ದರು ಎಂದು ಕೆವಿಎಸ್‌ ಕಾರ್ಯದರ್ಶಿ ಕಿರಣ್ ನಾಯಕ್ ಅಧಿಕಾರಿಗಳು ಮಾಡುವ ಅನಾಹುತಗಳಿಗೆ ಉದಾಹರಣೆಯೊಂದನ್ನು ತಿಳಿಸಿದರು.

ಸತ್ತವಳ ಹೆಸರಿಗೆ 3 ವರ್ಷ ಪಿಂಚಣಿ!
ಕೆಲ ಅಧಿಕಾರಿಗಳು ಮಾಡುತ್ತಿರುವ ಅವಾಂತರಗಳು, ಬೇಜವಾಬ್ದಾರಿ ಕೆಲಸಗಳಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳು, ನೆರವಿನ ಅಗತ್ಯವಿರುವವರು ತೊಂದರೆ ಎದುರಿಸುತ್ತಿದ್ಧಾರೆ. ಸಂಕಷ್ಟದಲ್ಲಿ ಬದುಕುತ್ತ ಚಾತಕ ಪಕ್ಷಿಗಳಂತೆ ಮಾಸಾಶನ ಎದುರು ನೋಡುವವರ ಪೈಕಿ ಸಾಕಷ್ಟು ಜನರಿಗೆ ಇವತ್ತು ಮಾಸಾಶನ ನಿಂತು ಹೋಗಿದೆ. ಆದರೆ, 30ನೇ ವಾರ್ಡ್‌ನಲ್ಲಿ ಭಾಗ್ಯಮ್ಮ ಎಂಬುವರು ಸತ್ತು ಮೂರು ವರ್ಷ ಕಳೆದರೂ ಮಾಸಾಶನ ಬರುತ್ತಲೇ ಇತ್ತು. ಇದು ನಮ್ಮ ವ್ಯವಸ್ಥೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಚಿಕ್ಕಳ್ಳಾಪುರದಲ್ಲೇ 175 ದೂರು!
ಚಿಕ್ಕಬಳ್ಳಾಪುರ ತಾಲ್ಲೂಕು ಒಂದರಲ್ಲೇ ಸುಮಾರು 175 ಅಂಗವಿಕಲರಿಗೆ ಮಾಸಾಶನ ಸಿಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಅನೇಕರು ಅನಕ್ಷರಸ್ಥರು, ಕೆಲವರು ಮೇಲೆ ಎದ್ದೆಳಲಾಗದ ಸ್ಥಿತಿಯಲ್ಲಿದ್ದಾರೆ. ಅಂತಹವರಿಗೆ ಸರ್ಕಾರದ ಪ್ರಕಟಣೆಗಳು ಅರಿವಿಗೆ ಬರುವುದಿಲ್ಲ. ಬಂದರೂ ಕಚೇರಿಗೆ ಹೋಗಿ ದಾಖಲೆ ಕೊಟ್ಟು ಮಾಹಿತಿ ಪರಿಷ್ಕರಿಸುವಷ್ಟು ಜಾಣರಲ್ಲ. ಆದ್ದರಿಂದ, ಸಂಬಂಧಿಸಿದ ಅಧಿಕಾರಿಗಳು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅಂಗವಿಕಲ ಮಾಸಾಶನ ಪಡೆಯುತ್ತಿರುವವರ ಮನೆಗಳ ಸಮೀಕ್ಷೆ ಮಾಡಿಸಿ, ತೊಂದರೆಯಲ್ಲಿ ಇರುವವರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು.
–ಕಿರಣ್ ನಾಯಕ್, ಕೆವಿಎಸ್‌ ಕಾರ್ಯದರ್ಶಿ

**
ಆರು ತಿಂಗಳಿಂದ ಸಿಕ್ಕಿಲ್ಲ ಮಾಸಾಶನ
ನನಗೆ ಅಂಗವೈಕಲ್ಯ. ಸಹೋದರ ಬುದ್ಧಿಮಾಂದ್ಯ. ಮನೆಯಲ್ಲಿ ಬಡತನ. ಕಳೆದ ಆರು ತಿಂಗಳಿಂದ ನನಗೆ ಮಾಸಾಶನ ಬಂದಿಲ್ಲ. ಸಹೋದರ ಎಮ್ಮೆ ಮೆಯಿಸಿಕೊಂಡು ಬರುತ್ತಾನೆ. ನಾನು ಹಾಲು ಮಾರಿ, ಕೆಲ ಮನೆಗಳಲ್ಲಿ ಕಸ ಮುಸುರಿ ಮಾಡಿ ಬದುಕುತ್ತಿದ್ದೇವೆ.
–ಸುಮಿತ್ರಾ, ಅಂಗವಿಕಲ ಫಲಾನುಭವಿ ಕೆಳಗಿನತೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT