ಬೆಟ್ಟದ ಮೇಲೆ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ‘ನಂದಿ ಸಂತೆ’ಯ ಮೆರಗು

7
ಸ್ಥಳೀಯ ರೈತರು–ಕುಶಲಕರ್ಮಿಗಳಿಗೆ ಮಾರುಕಟ್ಟೆ ವಿಸ್ತರಣೆ

ಬೆಟ್ಟದ ಮೇಲೆ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ‘ನಂದಿ ಸಂತೆ’ಯ ಮೆರಗು

Published:
Updated:
Deccan Herald

ಚಿಕ್ಕಬಳ್ಳಾಪುರ: ವಾರಾಂತ್ಯದ ದಿನವಾದ ಶನಿವಾರ ನಂದಿ ಗಿರಿಧಾಮದಲ್ಲಿ ‘ನಂದಿ ಸಂತೆ’ ಪ್ರವಾಸಿಗರ ಮನ ಸೆಳೆಯಿತು. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ವಿನೂತನ ಸಂತೆಯನ್ನು ಕಣ್ತುಂಬಿಕೊಳ್ಳುವ ಜತೆಗೆ ಬೆಟ್ಟದ ತುದಿಯಲ್ಲಿ ಕೇಳಿಬರುತ್ತಿದ್ದ ಸಂಗೀತದ ಸುಧೆಗೆ ಮಾರುಹೋದರು.

ಸ್ಥಳೀಯ ಕೃಷಿ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಿ ಕೊಡುವ ಜತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೂತನವಾಗಿ ಆರಂಭಿಸಿದ ಈ ಸಂತೆಯಲ್ಲಿ ಶನಿವಾರ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳು, ಕಲ್ಲೂಡಿಯ ಬಗೆಬಗೆಯ ಹಪ್ಪಳಗಳು, ನೇಕಾರರು ಸಿದ್ಧಪಡಿಸಿದ ಖಾದಿ ಉಡುಗೆಗಳು ಮಾರಾಟಕ್ಕೆ ಲಭ್ಯವಿದ್ದವು.

ತೋಟಗಾರಿಕೆ ಇಲಾಖೆ ವತಿಯಿಂದ ವ್ಯವಸ್ಥೆ ಮಾಡಿದ್ದ ಕತ್ತರಿಸಿದ ಹಣ್ಣುಗಳ ರಸಾಯನ, ಸವಿರುಚಿ ಸಂಚಾರಿ ಕ್ಯಾಂಟಿನ್‌ನ ಊಟ ಸವಿದು ಜನರು ಸಂತಸ ಪಟ್ಟರು.

ಸುಲ್ತಾನ್ ಪೇಟೆಯ ಮಹೇಶ್ ಅವರು ಪ್ರದರ್ಶಿಸಿದ ಕುಂಬಾರಿಕೆ ಕಲೆಯನ್ನು ಬೆರಗುಗಣ್ಣಿನಿಂದ ನೋಡಿದ ಪ್ರವಾಸಿಗರಲ್ಲಿ ಅನೇಕರು ಮಹೇಶ್‌ ಅವರೊಂದಿಗೆ ಕೈಜೋಡಿಸಿ ಖುಷಿಪಟ್ಟರು.

ದಿನವೀಡಿ ಬೆಟ್ಟದ ಸಂಗೀತ ತಂಗಾಳಿಯೊಂದಿಗೆ ಜುಗಲ್ಬಂದಿ ನಡೆಸಿ, ವಾಯು ವಿಹಾರಕ್ಕೆ ಬಂದವರ ಮನ ತಣಿಸಿತ್ತು. ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮತ್ತು ಕುಟುಂಬ ಸಮೇತ ಬಂದು ಸಂತೆಯಲ್ಲಿ ಸುತ್ತಾಡಿದರು.

ದಿನೇ ದಿನೇ ರಂಗುಪಡೆಯುತ್ತಿರುವ ‘ನಂದಿ ಸಂತೆ’ ಸ್ಥಳೀಯ ರೈತರಿಗೆ, ಕುಶಲಕರ್ಮಿಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !