ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಪ್ರೊಜೆಕ್ಟರ್

7
ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ಮತ್ತು ಜಿಲ್ಲಾಡಳಿತದ ಒಡಂಬಡಿಕೆ

ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಪ್ರೊಜೆಕ್ಟರ್

Published:
Updated:
Deccan Herald

ಚಿಕ್ಕಬಳ್ಳಾಪುರ: ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪಾಠಗಳ ಸುಲಭ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ 111 ಸರ್ಕಾರಿ ಪ್ರೌಢಶಾಲೆಗಳಿಗೆ ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ಪ್ರೊಜೆಕ್ಟರ್ ಮತ್ತು ಪರದೆ ನೀಡಲು ಜಿಲ್ಲಾ ಪಂಚಾಯಿತಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ವಿದ್ಯುತ್ ಮತ್ತು ಸೌರ ಶಕ್ತಿ ಚಾಲಿತ ಈ ಪ್ರೊಜೆಕ್ಟರ್‌ಗಳಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಸಂಬಂಧಿಸಿದ ಪಠ್ಯ ಮತ್ತು ಪಠ್ಯಪೂರಕ ಪಾಠಗಳನ್ನು ಅಳವಡಿಸಲಾಗಿದ್ದು, ಪ್ರೊಜೆಕ್ಟರ್‌ನಿಂದಾಗಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಮಯದಲ್ಲಿ ಸ್ವಯಂ ಅಧ್ಯಯನ ಕೈಗೊಳ್ಳಲು ಅನುಕೂಲವಾಗಲಿದೆ.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲೆಗೆ ಮೊದಲ ಪ್ರೊಜೆಕ್ಟರ್ ವಿತರಿಸುವ ಮೂಲಕ ಈ ಯೋಜನೆಗೆ ಸಂಸದ ವೀರಪ್ಪ ಮೊಯಿಲಿ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೊಯಿಲಿ, ‘ವಿಶ್ವೇಶ್ವರಯ್ಯನವರ ಬದುಕು ಮತ್ತು ಸಾಧನೆಯನ್ನು ನಾವು ಅರಿತಷ್ಟು ನಮ್ಮ ಎಳೆಯ, ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಇಂದಿನ ಸಮಾಜದಲ್ಲಿ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ‘ಎರಡ್ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಹಂತಹಂತವಾಗಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಪ್ರೊಜೆಕ್ಟರ್, ಪರದೆ ವಿತರಿಸಲಾಗುತ್ತದೆ. ಜತೆಗೆ ಗ್ರಂಥಾಲಯಗಳಿಗೆ ಪುಸ್ತಕ ನೀಡಲು ರೋಟರಿ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನೀಯ’ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಸತೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಸದಸ್ಯ ಕೆ.ಎಂ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಸದಸ್ಯೆ ಲತಾ ಶಿವಶಂಕರ್, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ನರಸಿಂಹ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಣ್ಣರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !