ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಎಪಿಎಂಸಿಗೆ ಶೇ 60ರಷ್ಟು ಆದಾಯ ಖೋತಾ

ಕಾಯ್ದೆ ತಿದ್ದುಪಡಿ ಮತ್ತು ಶುಲ್ಕ ಇಳಿಕೆ ಪರಿಣಾಮ ಹೊಸ ಯೋಜನೆಗಳಿಗೆ ಅಡ್ಡಿ
Last Updated 19 ಜೂನ್ 2021, 10:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಮಾರುಕಟ್ಟೆ ಶುಲ್ಕ ಇಳಿಕೆ ಮತ್ತು ಕೇಂದ್ರ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆ ತಿದ್ದುಪಡಿ ಪರಿಣಾಮ ಜಿಲ್ಲೆಯ ಎಪಿಎಂಸಿಗಳಲ್ಲಿ ಶೇ 50ರಿಂದ 60ರಷ್ಟು ಆದಾಯ ಕುಸಿತವಾಗಿದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಎಪಿಎಂಸಿಗಳಲ್ಲಿ ಸರ್ಕಾರಗಳ ಕಾಯ್ದೆ ತಿದ್ದುಪಡಿ ಮತ್ತು ಶುಲ್ಕ ಇಳಿಕೆಗೂ ಮುನ್ನ ವಹಿವಾಟು ಸಹ ಉತ್ತಮವಾಗಿ ನಡೆಯುತ್ತಿತ್ತು. ಆ ಮೂಲಕ ಆದಾಯವೂ ಉತ್ತಮವಾಗಿತ್ತು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ‘ಮುಕ್ತ’ ಮಾರುಕಟ್ಟೆಗೆ ಅವಕಾಶವಾಗಿವೆ. ಕೆಲವರು ಮಾರುಕಟ್ಟೆಯ ಹೊರಗೆ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಮಾರುಕಟ್ಟೆ ಶುಲ್ಕ ಮತ್ತು ಬಳಕೆ ಶುಲ್ಕ ಇಳಿಕೆ ಪರಿಣಾಮ ಎಪಿಎಂಸಿ ಆದಾಯಕ್ಕೆ ಕುತ್ತಾಗಿದೆ.

ಎಪಿಎಂಸಿಗಳಲ್ಲಿ ಸಂಗ್ರಹವಾಗುತ್ತಿದ್ದ ಆದಾಯವು ಆಯಾ ಮಾರುಕಟ್ಟೆಗಳ ಅಭಿವೃದ್ಧಿಗೆ ಬಳಕೆ ಆಗುತ್ತಿತ್ತು. ಅಲ್ಲಿನ ಹಮಾಲರಿಗೆ, ಉತ್ಪನ್ನಗಳ ಮಾರಾಟಕ್ಕೆ ಬರುವ ರೈತರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದು, ವಿಶ್ರಾಂತಿ ಭವನ ನಿರ್ಮಾಣ, ಮಾರುಕಟ್ಟೆ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಹಣ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಈ ಎಲ್ಲದಕ್ಕೂ ಸಂಕಷ್ಟ ಎದುರಾಗಿದೆ.

ಸಂಗ್ರಹವಾಗುವ ಕಡಿಮೆ ಆದಾಯವನ್ನು ಅತ್ಯಂತ ಲೆಕ್ಕಾಚಾರದಲ್ಲಿ ಬಳಸಬೇಕಾದ ಅನಿವಾರ್ಯ ಎದುರಾಗಿದೆ. ಇದರಿಂದ ಸೌಲಭ್ಯಗಳಿಗೂ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಸಂಗ್ರಹವಾಗುತ್ತಿದ್ದ ಆದಾಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆಗಳ ಅಭಿವೃದ್ಧಿ, ಮಾರುಕಟ್ಟೆ ವಿಸ್ತರಣೆಗೆ ಜಾಗ ಖರೀದಿಗೆ ಬಳಸಿಕೊಳ್ಳಬಹುದಿತ್ತು. ಆದರೆ ಆದಾಯ ಖೋತಾ ಇದೆಲ್ಲಕ್ಕೂ ಮಿತಿಯನ್ನು ಹೇರಿದೆ.

ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ವಾರ್ಷಿಕ ₹ 1.5 ಕೋಟಿ ಸಂಗ್ರಹವಾಗುತ್ತಿದ್ದ ಆದಾಯ 2020–21ನೇ ಸಾಲಿನಲ್ಲಿ ₹ 68 ಲಕ್ಷದಿಂದ ₹ 70 ಲಕ್ಷಕ್ಕೆ ಇಳಿಕೆ ಆಗಿದೆ. ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ 2019-20ನೇ ಸಾಲಿನಲ್ಲಿ₹ 2.11 ಕೋಟಿ ಶುಲ್ಕ ಸಂಗ್ರಹವಾಗಿತ್ತು. 2020-21 ನೇ ಸಾಲಿನಲ್ಲಿ ₹ 1.07 ಕೋಟಿ ಸಂಗ್ರಹವಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಚಿಂತಾಮಣಿ ಮಾರುಕಟ್ಟೆ ಅಭಿವೃದ್ಧಿಗೆ ಆದಾಯ ಕುಸಿತ ಪರಿಣಾಮ ಬೀರುತ್ತಿದೆ. ಬಾಗೇಪಲ್ಲಿ, ಗೌರಿಬಿದನೂರು ಎಪಿಎಂಸಿಯದ್ದೂ ಇದೇ ಪರಿಸ್ಥಿತಿ.

ಕಳೆದ ವರ್ಷದ ಕೋವಿಡ್ ಮೊದಲ ಅಲೆಯ ಸಮಯಲ್ಲಿ ನಾಲ್ಕು ತಿಂಗಳ ಕಾಲ ಯಾವುದೇ ಶುಲ್ಕ ಸಂಗ್ರಹಿಸದಂತೆ ಸರ್ಕಾರ ಸೂಚಿಸಿತ್ತು. ಲಾಕ್‌ಡೌನ್ ಪರಿಣಾಮ ಮಾರುಕಟ್ಟೆಗಳ ಬಾಗಿಲು ಮುಚ್ಚಿಸಲಾಗಿತ್ತು. ವಹಿವಾಟು ನಡೆಯದ ಕಾರಣ ವ್ಯಾಪಾರಿಗಳಿಂದ ಶುಲ್ಕ ವಸೂಲಿಯೂ ತಗ್ಗಿದೆ. ‌

ಈ ಮೊದಲು ಎಪಿಎಂಸಿಯಲ್ಲಿಯೇ ವಹಿವಾಟುಗಳನ್ನು ನಡೆಸಬೇಕಿತ್ತು. ಆದರೆ ಕಾಯ್ದೆ ತಿದ್ದುಪಡಿ ಪರಿಣಾಮ ಎಪಿಎಂಸಿ ಹೊರಗೂ ಹೆಚ್ಚು ವಹಿವಾಟು ನಡೆಯುತ್ತಿದೆ. ಈ ವಹಿವಾಟಿನ ಮೇಲೆ ನಮಗೆ ನಿಯಂತ್ರಣವಿಲ್ಲ. ಇದರಿಂದ ಎಪಿಎಂಸಿಗೆ ಪೆಟ್ಟಾಗುತ್ತದೆ ಎಂದು ಸಿಬ್ಬಂದಿ ನುಡಿಯುವರು. ಆದಾಯ ಕುಸಿತದಿಂದ ಎಪಿಎಂಸಿಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಎದುರಾಗಿದೆ.

***

₹1.5 ಕೋಟಿಯಿಂದ ₹70 ಲಕ್ಷಕ್ಕೆ ಇಳಿಕೆ

ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಈ ಮೊದಲು ವಾರ್ಷಿಕ ₹ 1.5 ಕೋಟಿವರೆಗೂ ಆದಾಯ ಸಂಗ್ರಹವಾಗುತ್ತಿತ್ತು. 2020–21ನೇ ಸಾಲಿನಲ್ಲಿ ₹ 68 ಲಕ್ಷದಿಂದ ₹ 70 ಲಕ್ಷದವರೆಗೆ ಆದಾಯ ಸಂಗ್ರಹವಾಗಿದೆ. ಶೇ 60ರಷ್ಟು ಆದಾಯ ಕಡಿಮೆ ಆಗಿದೆ. ಈ ಮೊದಲು ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕ ₹ 100ಕ್ಕೆ ₹ 1 ಇತ್ತು. ಆದರೆ ಈಗ 60 ಪೈಸೆ ಇದೆ ಎಂದು ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಫೈಸಲ್ ಅಹ್ಮದ್ ಹಕೀಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT