ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮತದಾರರನ್ನು ಸೆಳೆಯಲು ಶ್ರಮಿಸಿ

ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶೋಭಾ ಸುರೇಂದ್ರನ್ ಸಲಹೆ
Last Updated 20 ಜುಲೈ 2019, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಲು ಯುವ ಪೀಳಿಗೆಯೇ ಕಾರಣವಾಗಿದೆ. ಸದಸ್ಯತ್ವ ಅಭಿಯಾನದಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡುವ ಜತೆಗೆ ಹೊಸ ಮತದಾರರನ್ನು ಪಕ್ಷದತ್ತ ಸೆಳೆಯಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶೋಭಾ ಸುರೇಂದ್ರನ್ ಹೇಳಿದರು.


ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬರನ್ನೂ ಪಕ್ಷ ಗುರುತಿಸಲಿದೆ ಎಂಬುದಕ್ಕೆ ತಾನೇ ನಿದರ್ಶನ. ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ. ಅದನ್ನು ನಾವು ಪಾಲಿಸಬೇಕು’ ಎಂದು ತಿಳಿಸಿದರು.


‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ ಬಿಜೆಪಿ ಶಾಸಕರು ಆಯ್ಕೆಯಾಗಿಲ್ಲ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಯಾಗಿರುವುದು ಶ್ಲಾಘನೀಯ. ಅದೇ ರೀತಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೂಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಅದಕ್ಕಾಗಿ ಈಗಿನಿಂದಲೇ ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಕಾರ್ಯ ನಡೆಯಬೇಕು’ ಎಂದರು.


‘ಬರೀ ಮೊಬೈಲ್ ಮೂಲಕ ಸದಸ್ಯತ್ವ ಮಾಡಿಸುವುದನ್ನು ಬಿಟ್ಟು, ಪ್ರತಿಯೊಬ್ಬರೂ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಮನೆಮನೆಗೆ ತೆರಳಿ ಹೊಸ ಸದಸ್ಯರ ಹೆಸರು ನೋಂದಾಯಿಸುವ ಕೆಲಸ ಮಾಡಬೇಕು. ಈ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಈಗಾಗಲೇ ನಿರತರಾಗಿದ್ದು, ಇದನ್ನು ಯಶಸ್ವಿಯಾಗಿ ಮುನ್ನಡೆಸಬೇಕು’ ಎಂದು ಹೇಳಿದರು.


‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಕುರಿತು ಪಕ್ಷದ ಕಾರ್ಯಕರ್ತರು ಜನಸಾಮಾನ್ಯರಿಗೆ ಮಾಹಿತಿ ನೀಡಬೇಕು. ಸ್ವಚ್ಛ ಭಾರತ್ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ’ ಎಂದರು.


ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ‘ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು ಎಂಬ ಸಿದ್ಧಾಂತದಲ್ಲಿ ಬಿಜೆಪಿ ಸಾಗುತ್ತಿದೆ. ಪ್ರಸ್ತುತ ದೇಶದಲ್ಲಿ 11.86 ಕೋಟಿ ಸದಸ್ಯತ್ವ ಹೊಂದಿರುವ ಪಕ್ಷವಾಗಿ ಬಿಜೆಪಿ ದಾಖಲೆ ನಿರ್ಮಿಸಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 1.32 ಲಕ್ಷ ಸದಸ್ಯತ್ವ ಮಾಡಿಸಲಾಗಿದೆ. ಈ ಅಭಿಯಾನದಲ್ಲಿ ಯುವ ಪೀಳಿಗೆಯನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ’ ಎಂದು ತಿಳಿಸಿದರು.


‘ಒಂದು ಕಾಲದಲ್ಲಿ ದೇಶದಲ್ಲಿ ಇಬ್ಬರು ಸಂಸದರನ್ನು ಹೊಂದಿದ್ದ ಪಕ್ಷ ಇಂದು 303 ಸದಸ್ಯರನ್ನು ಹೊಂದಿ ಬೃಹತ್ತಾಗಿ ಹೊರಹೊಮ್ಮಿದೆ. ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಪ್ರತಿಯೊಬ್ಬ ಕಾರ್ಯಕರ್ತನೂ ಶ್ರಮಿಸಬೇಕು’ ಎಂದು ಹೇಳಿದರು.


‘ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ 72 ಸಾವಿರ ಜನರು ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಬಹುಪಾಲು ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ನೂತನ ಮತದಾರರನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ’ ಎಂದರು.


ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಮಲಿಂಗಪ್ಪ, ವಿಭಾಗ ಪ್ರಭಾರಿ ಸಚ್ಚಿದಾನಂದಮೂರ್ತಿ, ಮಾಜಿ ಶಾಸಕಿ ಜ್ಯೋತಿರೆಡ್ಡಿ, ಮುಖಂಡರಾದ ಮುರಳೀಧರ, ಗೋಪಿನಾಥ್, ಅರುಣ್ ಬಾಬು, ಲಕ್ಷ್ಮೀಪತಿ, ಲಕ್ಷ್ಮಿನಾರಾಯಣ ಗುಪ್ತಾ, ಕಿರಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT