ಶನಿವಾರ, ಫೆಬ್ರವರಿ 27, 2021
27 °C
ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ

ಕೈಮಗ್ಗ ಉತ್ಪನ್ನ ಆನ್‌ಲೈನ್‌ನಲ್ಲಿ ಮಾರಿ: ನೇಕಾರರಿಗೆ ಡಿಸಿ ಅನಿರುದ್ಧ್ ಶ್ರವಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನೇಕಾರರು ಸಹ ಬದಲಾದ ಕಾಲಘಟ್ಟದಲ್ಲಿ ತಾವು ಸಿದ್ಧಪಡಿಸಿದ ಕೈಮಗ್ಗದ ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆಯ ಮೂಲಕ ಮಾರಾಟಕ್ಕೆ ಮುಂದಾಗಬೇಕು. ಅದರಿಂದ ಹೆಚ್ಚಿನ ಬೇಡಿಕೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೈ ಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಇಲಾಖೆಯ ಯೋಜನೆಗಳ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾರುಕಟ್ಟೆಯಲ್ಲಿ ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳಿಗೆ ಈಗಲೂ ತನ್ನದೇ ಆದ ಬೇಡಿಕೆ ಇದೆ. ನೇಕಾರರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೈಮಗ್ಗದ ಬಟ್ಟೆ ತಯಾರಿಸಿದರೆ ಉತ್ತಮ ಬೆಲೆ ಸಿಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಕಾರರಿಗೆ ಹಲವು ಸಲವತ್ತುಗಳನ್ನು ಒದಗಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಯಿಂದ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಉತ್ತಮ ಗುಣಮಟ್ಟದ ದೇಶಿ ಉತ್ಪನ್ನಗಳ ವಿದೇಶಿ ರಪ್ತು ಪ್ರಮಾಣ ಹೆಚ್ಚಿದೆ. ಆದ್ದರಿಂದ ನೇಕಾರರು ಸಹ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ರಾಷ್ಟ್ರದಾದ್ಯಂತ ಕೈಮಗ್ಗ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಯುವಕರು ಕೈಮಗ್ಗ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗುವ ಜತೆಗೆ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಹೇಳಿದರು.

‘ವಿದ್ಯುತ್ ಮಗ್ಗಗಳಿಗೆ ಪೈಪೋಟಿ ನೀಡಲಾಗದೆ ಸಾಂಪ್ರದಾಯಿಕ ಕೈಮಗ್ಗಗಳು ಈಗ ವಿರಳವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೈಮಗ್ಗ ಉತ್ತೇಜನ ಅವಶ್ಯಕವಾಗಿದೆ. ಕೈಮಗ್ಗ, ವಿದ್ಯುತ್ ಮಗ್ಗದ ಘಟಕ, ಸಿದ್ಧ ಉಡುಪು ಘಟಕ, ಟೆಕ್ನಿಕಲ್ ಟೆಕ್ಸ್‌ಟೈಲ್‌ ಜವಳಿ ಸಂಸ್ಕರಣಾ ಘಟಕ ಸ್ಥಾಪಿಸಲು ಅವಕಾಶವಿದೆ. ಆಸಕ್ತಿ ಹೊಂದಿರುವ ಜವಳಿ ಉದ್ಯಮಶೀಲರಿಗೆ ಇಲಾಖೆಯಲ್ಲಿ ಅನೇಕ ಯೋಜನೆಗಳಿವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಇತ್ತೀಚಿನ ಸಮೀಕ್ಷೆಯ ಪ್ರಕಾರ 790 ನೇಕಾರರು ಕೈಮಗ್ಗಗಳಲ್ಲಿ ರೇಷ್ಮೆ ಸೀರೆ ಉತ್ಪಾದನೆ ಮಾಡುತ್ತಾರೆ. 1,060 ವಿದ್ಯುತ್ ಮಗ್ಗಗಳಲ್ಲಿ ಪಾಲಿಸ್ಟರ್ ಸೀರೆ ಉತ್ಪಾದನೆ ಮಾಡಲಾಗುತ್ತಿದೆ. ಜವಳಿ ನೀತಿ ಅಡಿಯಲ್ಲಿ ಜಿಲ್ಲೆಯಲ್ಲಿ 5 ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಮೂಲಕ ನಿರುದ್ಯೋಗ ಯುವಜನರಿಗೆ ತರಬೇತಿ ನೀಡಿ ಉದ್ಯೋಗದಲ್ಲಿ ತೊಡಗಲು ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮಹಮ್ಮದ್ ಅತೀಕ್ ಉಲ್ಲಾ ಷರೀಫ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ನೇಕಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.