ಶನಿವಾರ, ಫೆಬ್ರವರಿ 27, 2021
25 °C
ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರಿಂದ ರಸ್ತೆ ತಡೆದು ಪ್ರತಿಭಟನೆ

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ವರ್ಗಾವಣೆ ಖಂಡಿಸಿ ಹೆದ್ದಾರಿ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ತಾಲ್ಲೂಕಿನ ಚದಲುಪುರ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ–7 ಬಂದ್‌ ಮಾಡಿ, ಪ್ರತಿಭಟನೆ ನಡೆಸಿದರು.

ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ, ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಬಯಲುಸೀಮೆ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯುವಸೇನೆ, ದ್ರಾಕ್ಷಿ ಬೆಳೆಗಾರರ ಸಂಘ, ಭೋಗ ನಂದೀಶ್ವರ ತ್ರಿಚಕ್ರ ವಾಹನ ಚಾಲಕರ ಸಂಘ, ದೇಶಪ್ರೇಮಿ ಯುವಕರ ಸಂಘ ಮತ್ತು ಭಾರತೀಯ ಕಿಸಾನ್ ಸಂಘ ಈ ಬಂದ್‌ಗೆ ಕೈಜೋಡಿಸಿದ್ದವು.

ಈ ವೇಳೆ ಮಾತನಾಡಿದ ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ, ‘ದಕ್ಷ, ಪ್ರಾಮಾಣಿಕರಾಗಿದ್ದ ಜಿಲ್ಲಾಧಿಕಾರಿ ಅವರ ವರ್ಗಾವಣೆ ಅತ್ಯಂತ ನೋವಿನ ವಿಚಾರ. ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಆತಂಕದ ವಿಚಾರ. ಜನಪ್ರತಿನಿಧಿಗಳು ಕಚ್ಚಾಡಿ ಸಾಯುತ್ತಿರುವಾಗ ನಮ್ಮ ಸೇವೆ ಮಾಡುತ್ತಿರುವ ಪ್ರಾಮಾಣಿಕ ದುಡಿಯುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದು ಹೇಳಿದರು.

‘ಅನಿರುದ್ಧ್ ಶ್ರವಣ್ ಅವರು ಜನರ ನೋವಿನ ಸ್ಪಂದಿಸುವ ನಿಟ್ಟಿನಲ್ಲಿ ಕಲ್ಯಾಣಿಗಳ ಪುನಶ್ಚೇತನಗೊಳಿಸುವ ಕೆಲಸ ಮಾಡಿದ್ದರು. ಪ್ರಭಾವಿಗಳ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ ಉಳಿಸಿದ್ದರು. ಕುಡಿಯುವ ನೀರಿನ ಸಮಸ್ಯೆಗೆ ಬಗೆಹರಿಸಲು ಆದ್ಯತೆ ನೀಡಿದ್ದರು. ಅರಣ್ಯೀಕರಣಕ್ಕೆ ಒತ್ತು ನೀಡಿದ್ದರು. ಜನಸಾಮಾನ್ಯರ ನೋವಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು’ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ಒಂದೆಡೆ ಅತಿವೃಷ್ಟಿಯಿಂದ ರಾಜ್ಯ ನಲುಗುತ್ತಿದ್ದರೆ. ನಮ್ಮಲ್ಲಿ ಅನಾವೃಷ್ಟಿ ತಲೆದೋರಿದೆ. ಈ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಖಂಡನೀಯ. ನೀರಾವರಿ ವಿಚಾರದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ತೋರಿಸುತ್ತಿವೆ. ಆದರೆ, ಜಿಲ್ಲಾಧಿಕಾರಿ ಸರ್ಕಾರದ ಹಣ ಬಳಸದೆ ನಾಗರಿಕರ ಶಕ್ತಿ ಬಳಸಿ ನೂರಕ್ಕೆ ಹೆಚ್ಚು ಕಲ್ಯಾಣಿಗಳನ್ನು ಪುನಶ್ಚೇನಗೊಳಿಸಿದ್ದರು’ ಎಂದರು.

‘ದುಷ್ಟ ರಾಜಕಾರಣಿಗಳಿಂದಾಗಿ ನಾವು ಈಗಾಗಲೇ ಬೀದಿಗೆ ಬಂದಿದ್ದೇವೆ. ರಾಜಕಾರಣಿಗಳ ಷಡ್ಯಂತ್ರದಿಂದ ದಕ್ಷ ಅಧಿಕಾರಿಗಳು ವರ್ಗವಾಗುತ್ತಿರುವುದು ಕಳವಳದ ವಿಚಾರ. ಸರ್ಕಾರ ಜಿಲ್ಲಾಧಿಕಾರಿ ಅವರ ಜತೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ವರ್ಗಾವಣೆಯನ್ನು ಕೂಡ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ‘ಅನಿರುದ್ಧ್ ಶ್ರವಣ ಅವರು ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಬಂದ ತಕ್ಷಣವೇ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನೇಕ ಅಕ್ರಮಗಳಿಗೆ ಕಡಿವಾಣ ಹಾಕಲು ಯಶಸ್ವಿಯಾಗಿದ್ದರು. ಅದರಿಂದ ಕೆಲ ರಾಜಕಾರಣಿಗಳ ಕಣ್ಣು ಕೆಂಪಾಯಿತು. ರಾಜಕಾರಣಿಗಳ ಪಿತೂರಿಯಿಂದಾಗಿ ಇವತ್ತು ದಕ್ಷ ಅಧಿಕಾರಿಯನ್ನು ಯಡಿಯೂರಪ್ಪನವರು ಎತ್ತಂಗಡಿ ಮಾಡಿರುವುದು ನೋವಿನ ವಿಚಾರ’ ಎಂದು ಹೇಳಿದರು.

ಹೋರಾಟಗಾರರಾದ ಮಳ್ಳೂರು ಹರೀಶ್‌, ಕೆ.ಪಿ.ಚನ್ನಬೈರೇಗೌಡ, ಎಂ.ಎಫ್‌.ಸಿ.ನಾರಾಯಣಸ್ವಾಮಿ, ಸೊನ್ನೇನಹಳ್ಳಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಉಮಾದೇವಿ, ಡಿ.ಹೊಸೂರು ಬಾಲಣ್ಣ, ಕೊಳವನಹಳ್ಳಿ ವಾಸುದೇವ, ನಂದಿಮೂರ್ತಿ, ಆನೂರು ದೇವರಾಜ್, ಗಿಡ್ನಹಳ್ಳಿ ನಾರಾಯಣಸ್ವಾಮಿ, ತಾದೂರು ಮಂಜುನಾಥ್‌, ಲಕ್ಷಣ ರೆಡ್ಡಿ, ಗುಡಿಬಂಡೆ ರಾಮು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.