ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

853 ಅಂಗನವಾಡಿಗಳಿಗಿಲ್ಲ ಸ್ವಂತ ಸೂರು: ಮಕ್ಕಳ ಕಲಿಕೆಗೆ ಪೆಟ್ಟು

ಮೂಲಸೌಲಭ್ಯಗಳಿಲ್ಲದೆ ನಲುಗಿದ ಕೇಂದ್ರಗಳು l 1,108ಕ್ಕೆ ಸ್ವಂತ ಕಟ್ಟಡ
Last Updated 29 ಮಾರ್ಚ್ 2021, 3:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ 853 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಕೆಲವು ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದೇ ಹಲವು ವರ್ಷಗಳು ಕಳೆದಿವೆ. ಮೂಲಸೌಲಭ್ಯಗಳು ಸಹ ಮರೀಚಿಕೆಯಾಗಿವೆ. ‌‌ಸ್ವಂತ ಕಟ್ಟಡ ಇಲ್ಲದ ಕಡೆಗಳಲ್ಲಿ ಗ್ರಾಮ ಪಂಚಾಯಿತಿ, ಸಮುದಾಯ ಭವನ, ಯುವಕರ ಸಂಘ, ಮಹಿಳಾ ಮಂಡಳಿ, ಶಾಲೆ, ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಕೇಂದ್ರಗಳು ನಡೆಯುತ್ತಿವೆ. ಇಲ್ಲಿಯೂ ಮೂಲಸೌಕರ್ಯದ ಕೊರತೆಯ ಮಧ್ಯೆ ಮಕ್ಕಳು ಕಲಿಯುತ್ತಿದ್ದಾರೆ.

ಜಿಲ್ಲೆಯಲ್ಲಿ 1,961 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 1,108ಕ್ಕೆ ಸ್ವಂತ ಕಟ್ಟಡಗಳಿವೆ. 853 ಕೇಂದ್ರಗಳಿಗೆ ಸ್ವಂತ ಸೂರಿಲ್ಲ. ಪಂಚಾಯಿತಿ ಕಟ್ಟಡಗಳಲ್ಲಿ 29, ಶಾಲಾ ಕಟ್ಟಡಗಳಲ್ಲಿ 275, ಸಮುದಾಯ ಭವನದಲ್ಲಿ 122, ಬಾಡಿಗೆ ಕಟ್ಟಡಗಳಲ್ಲಿ 399 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಹೀಗೆ ಸಮಸ್ಯೆಗಳ ನಡುವೆಯೇ ಶಿಡ್ಲಘಟ್ಟ ತಾಲ್ಲೂಕಿನ ಆನೂರು, ಬಾಗೇಪಲ್ಲಿ ತಾಲ್ಲೂಕಿನ ಹೊಸಕೋಟೆ ಎ, ಆದಿಗಾನಹಳ್ಳಿ, ದೇವರಗುಡಿಪಲ್ಲಿ ಎ, ಗೂಳೂರು 1, ಕಮ್ಮರವಾರಪಲ್ಲಿ, ಮಿಟ್ಟವಾಂಡ್ಲಪಲ್ಲಿ, ದುಗ್ಗಿನಾಯಕನಪಲ್ಲಿ, ಗುವ್ವಲವಾರಿಪಲ್ಲಿ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳಾಗಿವೆ. ಹೀಗೆ ಸೌಲಭ್ಯ ಪಡೆದು ಮಾದರಿಯಾಗಿರುವ ಅಂಗನವಾಡಿಗಳು ಬೆರಳೆಣಿಕೆ ಮಾತ್ರ.

ಬಾಡಿಗೆ ಕಟ್ಟಡಗಳಲ್ಲಿ ಕುಡಿಯುವ ನೀರು, ಶೌಚಾಲಯ,ಆಟದ ಮೈದಾನ, ದಾಸ್ತಾನು ಕೊಠಡಿ, ಕಾಂಪೌಂಡ್‌ ಮತ್ತಿತರ ಮೂಲಸೌಕರ್ಯದ ಕೊರತೆ ಕಾಡುತ್ತಿವೆ. ಮಕ್ಕಳ ಕಲಿಕೆಗೆ ಬುನಾದಿಯಾಗಬೇಕಾದ ಅಂಗನವಾಡಿ ಕೇಂದ್ರಗಳು ಅಭದ್ರವಾಗಿವೆ. 3ರಿಂದ 6 ವರ್ಷದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಉತ್ತಮ ಕಲಿಕೆಯ ವಾತಾವರಣ ಅಗತ್ಯ. ಆದರೆ ಆಟಿಕೆಗಳು ಇಲ್ಲ, ಮೈದಾನಗಳಿಲ್ಲದ, ಸುಸಜ್ಜಿತ ಅಡುಗೆ ಕೋಣೆಯೂ ಇಲ್ಲದೆ ಬಹಳಷ್ಟು ಅಂಗನವಾಡಿಗಳು ಜಿಲ್ಲೆಯಲ್ಲಿವೆ.

ಗಡಿಭಾಗಗಳಲ್ಲಿಯಂತೂ ನಾಮಕಾವಸ್ತೆ ಎನ್ನುವ ರೀತಿಯಲ್ಲಿ ಕೆಲವು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮೂಲಸೌಲಭ್ಯದ ಕೊರತೆಯ ಕಾರಣದಿಂದಲೇ ಬಹಳಷ್ಟು ಕಡೆಗಳಲ್ಲಿ ಮಾತೃವಂದನಾ ಯೋಜನೆಯ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳ ಬಳಿ ಸುಳಿಯದ ಉದಾಹರಣೆಗಳು ಸಹ ಇವೆ.

ನಗರಗಳಲ್ಲಿ ಬಾಡಿಗೆ ಕಟ್ಟಡಕ್ಕೆ ಸರ್ಕಾರ ಪ್ರತಿ ತಿಂಗಳು ನೀಡುವ ಬಾಡಿಗೆ ದರ ಕಡಿಮೆ ಇದೆ. ಈ ದರಕ್ಕೆ ಸಿಗುವ ಕಟ್ಟಡದಲ್ಲೇ ಕೇಂದ್ರಗಳನ್ನು ನಡೆಯಬೇಕಾಗಿದೆ. ಮೂಲಸೌಲಭ್ಯಗಳಿಲ್ಲದೆ ಬಳಲುತ್ತಿವೆ ಎಂದು ನಗರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡುವರು.

ಶೇ 90ರಷ್ಟು ಸ್ವಂತ ಕಟ್ಟಡ:ಗುಡಿಬಂಡೆ ತಾಲ್ಲೂಕಿನ 125 ಅಂಗನವಾಡಿಗಳ ಪೈಕಿ ಶೇ 90 ರಷ್ಟು ಸ್ವಂತ ಕಟ್ಟಡಗಳಿವೆ. ಹಲವು ಕಡೆ ಮೂಲ ಸೌಲಭ್ಯಗಳ ಕೊರತೆ ಇದೆ. ತಾಲ್ಲೂಕಿನಲ್ಲಿ 125 ಅಂಗನವಾಡಿಗಳು ಸಹ ಕೆಲಸ ನಿರ್ವಹಿಸುತ್ತಿವೆ. 100 ಅಂಗನವಾಡಿ ಕಟ್ಟಡಗಳು ಸ್ವಂತವಾಗಿವೆ. 14 ಕಟ್ಟಡಗಳು ಬಾಡಿಗೆ, ಸಮುದಾಯ ಭವನ, ಶಾಲೆಗಳಲ್ಲಿ ನಡೆಯುತ್ತಿವೆ. ಗುಡಿಬಂಡೆಯ 11 ವಾರ್ಡ್‌ಗಳಲ್ಲಿ 11 ಅಂಗನವಾಡಿಗಳಿವೆ. ಇವುಗಳಲ್ಲಿ 8 ಬಾಡಿಗೆ, ಮೂರು ಸ್ವಂತ ಕಟ್ಟಡಗಳಿವೆ.

ಡಿ.ಎಂ.ಕುರ್ಕೆ ಪ್ರಶಾಂತ್, ಎಂ.ರಾಮಕೃಷ್ಣಪ್ಪ, ಡಿ.ಜಿ.ಮಲ್ಲಿಕಾರ್ಜುನ, ಪಿ.ಎಸ್.ರಾಜೇಶ್, ಜೆ.ವೆಂಕಟರಾಯಪ್ಪ

***

ಶೌಚಕ್ಕೆ ಬಯಲು

ಚಿಂತಾಮಣಿ: ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹಾಗೂ ಮೂಲ ಸೌಲಭ್ಯಗಳ
ಕೊರತೆಯಿಂದ ಬಳಲುತ್ತಿವೆ.

ತಾಲ್ಲೂಕಿನಲ್ಲಿ 31 ಮಿನಿ ಅಂಗನವಾಡಿಗಳು ಸೇರಿ ಒಟ್ಟು 460 ಅಂಗನವಾಡಿ ಕೇಂದ್ರಗಳಿವೆ. 225 ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ, 81 ಬಾಡಿಗೆ ಕಟ್ಟಡಗಳಲ್ಲಿ, 54 ಕೇಂದ್ರಗಳು ಸಮುದಾಯ ಕೇಂದ್ರಗಳಲ್ಲಿ, 78 ಕೇಂದ್ರಗಳು ಶಾಲೆಗಳಲ್ಲಿ, 22 ಕೇಂದ್ರಗಳು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬಹುತೇಕ ಕಟ್ಟಡಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಮಕ್ಕಳನ್ನು ಬಯಲಿಗೆ ಕಳುಹಿಸುವರು. ಹೊರಗಡೆಯಿಂದ ನೀರನ್ನು ತರಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅವಲತ್ತುಕೊಳ್ಳುವರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸುವ ವಾತಾವರಣ ಅಗತ್ಯ. ಪ್ರತ್ಯೇಕ ದಾಸ್ತಾನು ಕೊಠಡಿ, ಅಡುಗೆ ಮನೆ ಇರಬೇಕು. ಬಹುತೇಕ ಕೇಂದ್ರಗಳು ಒಂದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳು ನಲಿದಾಡುವ ಕೇಂದ್ರಗಳು ಸುಣ್ಣ ಬಣ್ಣ ಕಂಡು ಅನೇಕ ವರ್ಷಗಳಾಗಿವೆ.

ಮೂಲಸೌಲಭ್ಯ ಕೊರತೆ ಕಾರಣದಿಂದ ಮಾತೃವಂದನಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಕೇಂದ್ರಗಳಿಗೆ ಊಟಕ್ಕೂ ಬರುವುದಿಲ್ಲ ಎನ್ನುವ ಮಾತಿದೆ. ಬೆರಳೆಣಿಕೆಯಷ್ಟು ಕೇಂದ್ರಗಳನ್ನು ಹೊರತುಪಡಿಸಿ ಬಹಳಷ್ಟು ಕೇಂದ್ರಗಳಲ್ಲಿ ಉತ್ತಮ ವಾತಾವರಣ ಇಲ್ಲ ಎನ್ನುವರು ಮಾತೃವಂದನಾ ಫಲಾನುಭವಿಗಳು.

ಗ್ರಾಮೀಣ ಭಾಗಗಳಲ್ಲಿ ಕೇಂದ್ರಗಳನ್ನು ನಡೆಸಲು ಅನುಕೂಲವಾದ ಕಟ್ಟಡಗಳು ಸಿಗುವುದಿಲ್ಲ. ಶಾಲೆ, ದೇವಸ್ಥಾನ, ಸಮುದಾಯ ಭವನ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

ಕೆಲವು ಗ್ರಾಮ ಪಂಚಾಯಿತಿಗಳು ವಿಶೇಷ ಆಸಕ್ತಿ ವಹಿಸಿ ಇರುವ ಕಟ್ಟಡಗಳನ್ನೇ ಉಪಯೋಗಿಸಿಕೊಂಡು ಮಾದರಿ ಅಂಗನವಾಡಿಗಳನ್ನು ರೂಪಿಸಿವೆ. ಕಟ್ಟಡಗಳ ಒಳಗೆ ಮತ್ತು ಹೊರ ಗೋಡೆಗಳ ಮೇಲೆ ಪುಟಾಣಿಗಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಬಾಲಸ್ನೇಹಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳ ಅಟಿಕೆಗಳ ವ್ಯವಸ್ಥೆ ಮಾಡಲಾಗಿದೆ.

***

ಫ್ಲೋರೈಡ್ ಮುಕ್ತ ನೀರಿಲ್ಲ

ಬಾಗೇಪಲ್ಲಿ: ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳು ಖಾಸಗಿ ಮನೆಗಳಲ್ಲಿ ನಡೆಯುತ್ತಿವೆ. ತಡೆಗೋಡೆ, ಕುಡಿಯುವ ನೀರು, ಆಟದ ಮೈದಾನಗಳು ಇಲ್ಲ. ಪಟ್ಟಣದ 23ವಾರ್ಡ್‍ಗಳಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳು ಇದೇ ಸ್ಥಿತಿಯಲ್ಲಿವೆ.

ತಾಲ್ಲೂಕಿನಲ್ಲಿ 386 ಅಂಗನವಾಡಿ ಹಾಗೂ 25 ಮಿನಿ ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 16,461 ಮಕ್ಕಳು ಕಲಿಯುತ್ತಿದ್ದಾರೆ. ಬಹುತೇಕ ಅಂಗನವಾಡಿಗಳು ತೀರಾ ಕಿರಿದಾಗಿವೆ. ಇಲ್ಲಿಯೇ ‌‌ಪೌಷ್ಟಿಕ ಆಹಾರ ಚೀಲಗಳನ್ನು ಇರಿಸಲಾಗಿದೆ. ಪಾತ್ರೆಗಳು, ಆಹಾರದ ಸಾಮಗ್ರಿಗಳನ್ನು ತುಂಬಲಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲ. ಶೌಚಾಲಯ ಸಮರ್ಪಕವಾಗಿಲ್ಲ. ಮಕ್ಕಳು ಆಟವಾಡಲು ಮೈದಾನವೂ ಇಲ್ಲ. ಕೆಲ ಅಂಗನವಾಡಿ ಕೇಂದ್ರಗಳು ರಸ್ತೆ ಪಕ್ಕದಲ್ಲಿ ಇರುವುದರಿಂದ ಮಕ್ಕಳು ಸುರಕ್ಷಿತವಾಗಿ ಓಡಾಡಲು ತೊಂದರೆ ಆಗಿದೆ.

ಕೆಲ ಗ್ರಾಮಗಳಲ್ಲಿ ಹಳೇ ಕೇಂದ್ರಗಳು ಶಿಥಿಲವಾಗಿವೆ. ಚಾವಣಿಯ ಪದರಗಳು ಉದುರುತ್ತಿದೆ. ಮಳೆ ಬಂದರೆ ನೀರು ಸೋರುತ್ತದೆ. ಅಂಗನವಾಡಿ ಕೇಂದ್ರಗಳಿಗೆ ಇದೀಗ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ ಬಹುತೇಕವಾಗಿ ಕೇಂದ್ರಗಳಲ್ಲಿ ಪ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಉಳಿದಂತೆ ಪೌಷ್ಟಿಕ ಆಹಾರ ನೀಡಲು ಹಾಗೂ ತಯಾರಿಸುವ ಅಡುಗೆ ಕೋಣೆಗಳು ಇಲ್ಲ. ಮನೆಗಳ ಒಂದು ಕೊಠಡಿಯಲ್ಲಿ ಅಡುಗೆ ಸಿಬ್ಬಂದಿಯವರು ಆಹಾರ ಪರಿಕರಗಳನ್ನು ಹಾಗೂ ಮೂಟೆಗಳನ್ನು ಜೋಡಿಸಿದ್ದಾರೆ. ಮಕ್ಕಳಿಗೆ, ಬಾಣಂತಿಯರಿಗೆ, ಗರ್ಭಿಣಿಯವರಿಗೆ ಪೌಷ್ಟಿಕ ಆಹಾರವನ್ನು ಕೇಂದ್ರಗಳಲ್ಲಿ ತಯಾರಿಸಿ ನೀಡಲಾಗುತ್ತಿದೆ.

ಪಟ್ಟಣದ 23 ವಾರ್ಡ್‍ಗಳಲ್ಲಿರುವ 25 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಪುರಸಭೆಯಿಂದ 66 ನಿವೇಶನಗಳನ್ನು ಮೀಸಲಿಟ್ಟಿದ್ದರೂ ಕೆಲ ನಿವೇಶನಗಳು ಪ್ರಭಾವಿಗಳ ಪಾಲಾಗಿದೆ. ಕೆಲ ಕಡೆ ಒತ್ತುವರಿ ಆಗಿದೆ.

ಶಾಸಕರ ಅನುದಾನ ಸೇರಿದಂತೆ ವಿವಿಧ ಅನುದಾನದಲ್ಲಿ 11 ಹೊಸ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುವುದು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಕೇಂದ್ರಗಳಿಗೆ ನೀರು ಸರಬರಾಜು ಮಾಡಲಾಗಿದೆ. ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಪಿ.ರಾಜೇಂದ್ರಪ್ರಸಾದ್ ತಿಳಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ಕೇಂದ್ರಗಳಿಗೆ ನಿವೇಶನ ನೀಡಬೇಕು ಎಂದು ಪುರಸಭೆಗೆ ಪತ್ರ ನೀಡಲಾಗಿದೆ. ಆದರೆ ನಿವೇಶನಗಳ ಕೊರತೆ ಇದೆ. ಇದರಿಂದ ಸ್ವಂತ ಕಟ್ಟಡಗಳ ನಿರ್ಮಾಣವಾಗುತ್ತಿಲ್ಲ. ನಿವೇಶನ ನೀಡಿದರೆ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು.

***

ಬಾಗಿಲು ಮುಚ್ಚಿದ ಕೇಂದ್ರಗಳು

ಶಿಡ್ಲಘಟ್ಟ: ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸ್ಥಳ ಖಾಲಿ ಆದರೆ ಪದೋನ್ನತಿ ಕೊಡಬೇಕು ಎಂದು ಸರ್ಕಾರದಿಂದ ಆದೇಶಿಸಿದೆ. ಆದರೆ ಊರುಗಳಲ್ಲಿ ಸ್ಥಳೀಯರಿಗೆ ಕೆಲಸ ಕೊಡಬೇಕು ಎಂದು ಕೆಲವಡೆ ಬೀಗ ಹಾಕಿದ್ದಾರೆ. ಆ ಬಗ್ಗೆ ನಮ್ಮ ಮೇಲಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ–ಇದು ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಅವರ ಮಾತು.

ಹೀಗೆ ಕಟ್ಟಡಗಳ ಜತೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಸಮಸ್ಯೆಗಳು ಎದುರಾಗಿವೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಸುಮಾರು 55 ಜನಕ್ಕೆ ಪ್ರಾನ್‌ಕಾರ್ಡ್ ಬಂದಿಲ್ಲ. ನೂತನ ಪಿಂಚಣಿ ನೀತಿ ಜಾರಿಮಾಡಿದ್ದಾರೆ. ಅವರ ಗೌರವಧನದಲ್ಲಿ ₹ 150 ಕಡಿತ ಮಾಡುತ್ತಿದ್ದಾರೆ. ಅವರಿಗೂ ಪ್ರಾನ್ ಕಾರ್ಡ್ ಬಂದಿಲ್ಲ. ಕಡಿತಗೊಳ್ಳುತ್ತಿರುವ ಹಣ ಎಲ್ಲಿ ಹೋಗಿದೆ ಎಂಬುದು ಅವರಿಗೆ ತಿಳಿಯುತ್ತಿಲ್ಲ ಎಂದು ಸಮಸ್ಯೆ ವಿವರಿಸುವರು.

ತಾಲ್ಲೂಕಿನಲ್ಲಿ ಒಟ್ಟು 339 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿರುವ ಅಂಗನವಾಡಿ ಕೇಂದ್ರಗಳು ಕೇವಲ 150 ಮಾತ್ರ. ಉಳಿದ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಇಲ್ಲವೇ ಸಮುದಾಯ ಭವನದಲ್ಲಿ ನಡೆಯುತ್ತಿವೆ. ಸಮದಾಯದ ಅಸಹಕಾರದಿಂದ ಹಲವೆಡೆ ಅಂಗನವಾಡಿಗಳು ಬಾಗಿಲು ಮುಚ್ಚಿವೆ.

***

ಕಟ್ಟಡಕ್ಕೆ ಪ್ರಸ್ತಾವ ಸಲ್ಲಿಕೆ

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಹಂತ ಹಂತವಾಗಿ ಪ್ರತಿ ವರ್ಷ ಕಟ್ಟಡಗಳನಿರ್ಮಾಣಕ್ಕೆ ಮಂಜೂರಾತಿ ನೀಡುತ್ತಿದೆ. ಈ ವರ್ಷ ಕೈವಾರದ ಎಲ್ಲಮ್ಮ ಗುಡಿ ರಸ್ತೆಯಲ್ಲಿ ಹಾಗೂ ಶ್ಯಾಮರಾವ್ ಹೊಸಪೇಟೆಯಲ್ಲಿ ಎರಡು, ಕೋರ್ಲಪರ್ತಿ ಪಂಚಾಯಿತಿಯ ಮುದ್ದುಲಹಳ್ಳಿ ಹಾಗೂ ಕಾಗತಿ ಗ್ರಾಮ ಪಂಚಾಯಿತಿಯ ಗುಡವಾರ್ಲಹಳ್ಳಿ ಗ್ರಾಮಗಳಲ್ಲಿ, ಪೆದ್ದೂರು ಗ್ರಾಮ ಪಂಚಾಯಿತಿಯ ದಿಗುವಪಲ್ಲಿ ಗ್ರಾಮದಲ್ಲಿ ಹೊಸ ಕಟ್ಟಡಗಳು ಮಂಜೂರಾಗಿವೆ.

- ಮಹೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಚಿಂತಾಮಣಿ‌‌

***

ಶೌಚಾಲಯ, ಅಡುಗೆ ಮನೆ ಅಗತ್ಯ

ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸ್ವಂತಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಕೆಲ ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆಯಲ್ಲಿ ಮಕ್ಕಳ ಜೊತೆಗೆ ಬಾಣಂತಿಯರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರವನ್ನು ಸೇವಿಸಲು ಸ್ಥಳದ ಕೊರತೆ ಇದೆ. ಪಟ್ಟಣದ 25 ಕೇಂದ್ರಗಳಿಗೆ ಪುರಸಭೆಯವರು ಕಟ್ಟಡಗಳಿಗೆ ನಿವೇಶನಗಳನ್ನು ಕಲ್ಪಿಸಬೇಕು. ಶುದ್ಧಕುಡಿಯುವ ನೀರು, ಶೌಚಾಲಯಗಳನ್ನು, ಅಡುಗೆ ಮನೆಗಳನ್ನು ನಿರ್ಮಿಸಬೇಕು.

- ಕೆ.ರತ್ನಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ, ಬಾಗೇಪಲ್ಲಿ

***

ಅಕ್ಕಿ, ಗೋಧಿ ನೀಡಿಲ್ಲ

ಕನಿಷ್ಠ 5 ಮಕ್ಕಳನ್ನು ಪ್ರತಿ ದಿನ ಕೇಂದ್ರದಲ್ಲಿ ಇರಿಸಿಕೊಳ್ಳುವಂತೆ ಹೇಳುತ್ತಿದ್ದಾರೆ. ಪಂಚಾಯಿತಿಯಿಂದ ಅಂಗನವಾಡಿ ಕೇಂದ್ರವನ್ನು ಸ್ಯಾನಿಟೈಸ್ ಮಾಡಿಸಬೇಕು ಎಂದು ಆದೇಶಿಸಿದ್ದಾರೆ. ಆದರೆ ಹಲವಾರು ಪಂಚಾಯಿತಿಗಳವರು ಮಾಡಿಲ್ಲ. 2016 ಏಪ್ರಿಲ್ ನಿಂದ ಕಲಸಕ್ಕೆ ಸೇರಿರುವವರಿಗೆ ಯಾವುದೇ ನಿವೃತ್ತಿ ವೇತನವಿಲ್ಲ. ಪೌಷ್ಟಿಕ ಆಹಾರ ನೀಡುವುದಾಗಿ ಹೇಳುವರು. ಆದರೆ ಕಳೆದ 2 ತಿಂಗಳಿಂದ ಒಂದು ಕೆ.ಜಿ ಹೆಸರುಕಾಳು ಒಂದು ಕೆ.ಜಿ ಬೆಲ್ಲ ಮಾತ್ರ ಕೊಡುತ್ತಿದ್ದಾರೆ. ಅಕ್ಕಿ, ಗೋಧಿ ಕೊಡುತ್ತಿಲ್ಲ.

- ಅಶ್ವತ್ಥಮ್ಮ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷೆ, ಶಿಡ್ಲಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT